ಬಿಜೆಪಿ ಶುದ್ಧೀಕರಣ ಕಾಲ ಸನ್ನಿಹಿತ: ಕೆ.ಎಸ್. ಈಶ್ವರಪ್ಪ

KannadaprabhaNewsNetwork |  
Published : Feb 26, 2025, 01:06 AM IST
ಜಮಖಂಡಿ ನಗರದ ಐಬಿಯಲ್ಲಿ ಕೆ.ಎಸ್‌.ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ಶುದ್ಧಿಕರಣಕಾಲ ಸನ್ನಿಹಿತವಾಗಿದೆ. ಪಕ್ಷ ಶುದ್ಧಗೊಳಿಸಲಾಗುತ್ತದೆ. ಎಲ್ಲರಿಗೂ ಬುದ್ಧಿ ಬರುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ರಾಜ್ಯದಲ್ಲಿ ಬಿಜೆಪಿ ಶುದ್ಧಿಕರಣಕಾಲ ಸನ್ನಿಹಿತವಾಗಿದೆ. ಪಕ್ಷ ಶುದ್ಧಗೊಳಿಸಲಾಗುತ್ತದೆ. ಎಲ್ಲರಿಗೂ ಬುದ್ಧಿ ಬರುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.ಮಂಗಳವಾರ ನಿರೀಕ್ಷಣಾ ಮಂದಿರ ರಮಾ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯ ಸಮಸ್ಯೆ ಏನು ಎಂಬುದನ್ನು ಹೈಕಮಾಂಡ್‌ ಚೆನ್ನಾಗಿ ಅರ್ಥ ಮಾಡಿಕೊಂಡಿದೆ, ಇನ್ನು ಕೆಲವೇ ದಿನಗಳಲ್ಲಿ ಪಕ್ಷದ ವರಿಷ್ಟರು ದಿಟ್ಟ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ. ಬಿಜೆಪಿಯ ಬಣ ಬಡಿದಾಟದಿಂದ ಪಕ್ಷಕಟ್ಟಿದ ಎಲ್ಲ ಹಿರಿಯರಿಗೆ ನೋವಾಗಿದೆ. ಇದರಿಂದಲೇ ನಾನು ಪಕ್ಷ ಬಿಟ್ಟು ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ, ವಂಶಪರಂಪರೆ ಆಡಳಿತ ಇರಬಾರದು. ಆದರೆ, ಅದನ್ನೇ ಮುಂದುವರಿಸಲಾಗುತ್ತಿದೆ. ಇದರಿಂದ ಅನೇಕರಿಗೆ ನೋವಾಗಿದೆ. ಪಕ್ಷ ಹಿಂದುತ್ವ ಉಳಿಯಬೇಕು ಎಂದು ಹೋರಾಟ ಮಾಡುತ್ತ ಬಂದಿದೆ. ಆದರೆ, ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದ್ದು, ಅದಕ್ಕೆ ವಿರೋಧ ವ್ಯಕ್ತವಾಗಿದೆ ಎಂದು ಹೇಳಿದರು.

ಪಕ್ಷಕ್ಕಾಗಿ ದುಡಿದ ಹಲವು ಹಿರಿಯ ಮುಖಂಡರು ರಾಜ್ಯದಲ್ಲಿನ ಬಿಜೆಪಿ ಪರಿಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಬಣಗಳ ಗೊಂದಲ ಸೇರಿದಂತೆ ಎಲ್ಲದಕ್ಕೂ ಹೈಕಮಾಂಡ್‌ ತಾರ್ಕಿಕ ಅಂತ್ಯ ಹಾಡಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ವಿವಿ ರದ್ದು ಕೈಬಿಡಿ ; ರಾಜ್ಯದ 9 ವಿಶ್ವವಿದ್ಯಾಲಯ ರದ್ದುಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ವಿವಿಗಳಿಗೆ ಬೇಕಾದ ಅನುದಾನ ಬಿಡುಗಡೆ ಗೊಳಿಸಬೇಕು ಎಂದು ಆಗ್ರಹಿಸಿದ ಅವರು, ರಾಜ್ಯ ಸರ್ಕಾರ ಅವೈಜ್ಞಾನಿಕ ಕ್ರಮ ಕೈಗೊಳ್ಳಬಾರದು. ಬದಲಿಗೆ ತಜ್ಞರಿಂದ ತನಿಖೆ ನಡೆಸಿ ವರದಿ ತರಿಸಿಕೊಂಡು ಕ್ರಮ ಜರುಗಿಸಬೇಕು, ಬಡ ಮಕ್ಕಳ ಶಿಕ್ಷಣದ ಹಕ್ಕು ಕಸಿಯುವ ಕೆಲಸ ಮಾಡಬಾರದು ಎಂದರು.

ಸುಳ್ಳು ಭರವಸೆ ಬೇಡ; ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಸುಳ್ಳು ಭರವಸೆ ನೀಡುವುದನ್ನು ಕೈಬಿಡಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಈಶ್ವರಪ್ಪ, ಗ್ಯಾರಂಟಿ ಯೋಜನೆಗಳು ಶಕ್ತಿ ಕಳೆದುಕೊಂಡಿವೆ. ಕೊಟ್ಟ ಮಾತಿನಂತೆ ನಡೆದುಕೊಂಡು, ಮಹಿಳೆಯರ ಸ್ತ್ರೀಶಕ್ತಿ ಯೋಜನೆಯ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಸರ್ಕಾರ ಜನರ ವಿಶ್ವಸ ಕಳೆದುಕೊಂಡಿದೆ. ಅವರಲ್ಲಿಯೂ ಆಂತರಿಕ ಹಲಹ ನಡೆದಿದ್ದು, ಬೂದಿಮುಚ್ಚಿದ ಕೆಂಡದಂತಿದೆ. ಸಚಿವರು ಶಾಸಕರು ಮನಬಂದಂತೆ ಹೇಳಿಕೆ ನೀಡುತ್ತ ಜನರ ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದು ದೂರಿದರು.

ಸಭೆ: ಕ್ರಾಂತಿವೀರ ಬ್ರಿಗೇಡ್‌ನ ಮುಖಂಡರ ಸಭೆ ಮಾ.1ರಂದು ಹುಬ್ಬಳ್ಳಿಯ ಕಾಮತ್‌ ಯಾತ್ರಿ ನಿವಾಸದಲ್ಲಿ ನಡೆಯಲಿದೆ. ಸಭೆಗೆ ಆಯ್ದ ಮಠಾಧಿಪತಿಗಳು, ಬ್ರಿಗೇಡ್‌ನ ಮುಖಂಡರು ಭಾಗವಹಿಸಲಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳ ಲಾಗುತ್ತದೆ ಎಂದು ಹೇಳಿದರು. ಮಾದುಲಿಂಗ ಮಹಾರಾಜರು, ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ