ಶಿವನ ಆರಾಧನೆಗೆ ವಾಣಿಜ್ಯನಗರಿ ಹುಬ್ಬಳ್ಳಿ ಸಜ್ಜು

KannadaprabhaNewsNetwork |  
Published : Feb 26, 2025, 01:06 AM IST
mfodo | Kannada Prabha

ಸಾರಾಂಶ

. ಶಿವರಾತ್ರಿಗೆ ಮಂಗಳವಾರ ಸಂಜೆಯಿಂದಲೇ ಹುಬ್ಬಳ್ಳಿಯ ಎಲ್ಲ ದೇವಸ್ಥಾನಗಳಲ್ಲಿ ಸಿದ್ಧತೆ ಮಾಡಿಕೊಂಡಿರುವುದು ಕಂಡುಬಂದಿತು.

ಹುಬ್ಬಳ್ಳಿ: ನಗರದಲ್ಲಿ ಶಿವರಾತ್ರಿ ಆಚರಣೆಗೆ ಸಕಸ ಸಿದ್ಧತೆ ಕೈಗೊಳ್ಳಲಾಗಿದೆ. ಮಂಗಳವಾರ ಸಂಜೆಯಿಂದಲೇ ಎಲ್ಲ ದೇವಸ್ಥಾನಗಳಲ್ಲಿ ಸಿದ್ಧತೆ ಮಾಡಿಕೊಂಡಿರುವುದು ಕಂಡುಬಂದಿತು.

ನಗರದ ಗೋಕುಲರಸ್ತೆಯ ಶಿವಪುರ ಕಾಲನಿಯ ಬೃಹದಾಕಾರದ ಶಿವನ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಳ್ಳಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ಹಳೆಯ ಕೋರ್ಟ್ ವೃತ್ತದ ಶ್ರೀಸಾಯಿ ಮಂದಿರ, ವಿಶ್ವೇಶ್ವರ ನಗರದ ಈಶ್ವರ ದೇವಸ್ಥಾನ ಹಾಗೂ ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನದಲ್ಲಿ ಈಶ್ವರ ಲಿಂಗ, ಕೇಶ್ವಾಪುರದ ಪಾರಸ್ವಾಡಿ ಕಾಶಿ ವಿಶ್ವನಾಥ ದೇವಸ್ಥಾನ, ಉಣಕಲ್ಲಿನ ರಾಮಲಿಂಗೇಶ್ವರ ದೇವಸ್ಥಾನ, ಚಂದ್ರಮೌಳೇಶ್ವರ ದೇವಸ್ಥಾನ, ಗೋಕುಲ ರಸ್ತೆಯಲ್ಲಿರುವ ರಾಜಧಾನಿ ಕಾಲನಿಯ ಗಣೇಶ ಮತ್ತು ಈಶ್ವರ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳು ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿವೆ.

ಸದ್ಭಾವನಾ ಶಾಂತಿಯಾತ್ರೆ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಶಿವಲಿಂಗಗಳ ಸದ್ಭಾವನಾ ಶಾಂತಿಯಾತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಾರುಕಟ್ಟೆಯಲ್ಲಿ ಖರೀದಿ ಭರಾಟೆ:

ಒಂದೆಡೆ ಭಕ್ತಿ ಭಾವದಿಂದ ಮಹಾಶಿವರಾತ್ರಿ ಆಚರಿಸಲು ವಾಣಿಜ್ಯನಗರಿಯಲ್ಲಿ ಸಿದ್ಧತೆ ನಡೆದಿದ್ದರೆ, ಮಾರುಕಟ್ಟೆಯಲ್ಲಿ ಶಿವರಾತ್ರಿ ಪೂಜಾ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳ ಖರೀದಿ ಭರಾಟೆ ಮಂಗಳವಾರ ಸಂಜೆ ಜೋರಾಗಿತ್ತು.

ಇಲ್ಲಿಯ ದುರ್ಗದಬೈಲ್, ಗಾಂಧಿ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ, ಹೂ- ಹಣ್ಣು ಹಂಪಲು ಖರೀದಿಗೆ ಜನರು ಮುಗಿ ಬಿದ್ದಿದ್ದರು. ಹೀಗಾಗಿ, ಮಾರ್ಕೆಟ್‌ನಲ್ಲಿ ಎಂದಿಗಿಂತ ಜನಸಂದಣಿ ಹೆಚ್ಚಿತ್ತು. ಶಿವರಾತ್ರಿ ಜಾಗರಣೆ ಹಿನ್ನೆಲೆಯಲ್ಲಿ ಖರ್ಜೂರ, ದ್ರಾಕ್ಷಿ, ಸೇಬು, ದಾಳಿಂಬೆ ಸೇರಿದಂತೆ ವಿವಿಧ ಬಗೆಯ ಹಣ್ಣು- ಹಂಪಲು ಖರೀದಿ ಜೋರಾಗಿತ್ತು. ಹೀಗಾಗಿ ದಿನ ಮಾರುಕಟ್ಟೆ ಬೆಲೆಗಿಂತ ಕೊಂಚ ಬೆಲೆಯೂ ಹೆಚ್ಚಳವಾಗಿರುವುದು ಕಂಡು ಬಂದಿತು.ಸಿದ್ಧಾರೂಢರ ಮಠದಲ್ಲೂ ಶಿವರಾತ್ರಿ ಸಂಭ್ರಮ

ಲಕ್ಷಾಂತರ ಭಕ್ತರ ಪ್ರಮುಖ ಶ್ರದ್ಧಾಕೇಂದ್ರವಾಗಿರುವ ಇಲ್ಲಿನ ಸಿದ್ಧಾರೂಢರ ಮಠದಲ್ಲೂ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಬುಧವಾರ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಈಗಾಗಲೇ ಶ್ರೀಮಠದ ಟ್ರಸ್ಟ್‌ ವತಿಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಠದ ಆವರಣದಲ್ಲಿ ರಾತ್ರಿಯಿಡೀ ಜಾಗರಣೆ ನಡೆಯಲಿದ್ದು, ಸಾವಿರಾರು ಭಕ್ತರು ರಾತ್ರಿಯಿಡೀ ಶಿವನಾಮ ಸ್ಮರಣೆ, ಭಜನೆಯಲ್ಲಿ ಪಾಲ್ಗೊಳ್ಳುವರು.ಕಾಶಿ ವಿಶ್ವನಾಥನ ಮಾದರಿ ಶಿವಲಿಂಗ

ಕ್ಷಮತಾ ಸೇವಾ ಸಂಸ್ಥೆ ನೇತೃತ್ವದಲ್ಲಿ ಫೆ. 26ರ ಮಹಾಶಿವರಾತ್ರಿ ಅಂಗವಾಗಿ ಇಲ್ಲಿನ ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಕಾಶಿ ವಿಶ್ವನಾಥ ಮಂದಿರದ ಮಾದರಿಯಲ್ಲಿ ಶ್ರೀ ವಿಶ್ವನಾಥನ ಶಿವಲಿಂಗದ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಅಂದು ಬೆಳಗ್ಗೆ ಮಹಾಪೂಜೆ, ರುದ್ರಾಭಿಷೇಕ ಹಾಗೂ ಮುಂಡಗೋಡ ಹಿರೇಮಠದ ಪಂ. ರುದ್ರಮುನಿ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಪೂಜಾ ಕಾರ್ಯಗಳು ಜರುಗಲಿವೆ. ಭಕ್ತರಿಗೆ ಪಂಚಮುಖಿ ರುದ್ರಾಕ್ಷಿ ವಿತರಣೆ ಹಾಗೂ ಅಹೋರಾತ್ರಿ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿದೆ.

ಸಂಜೆ 7ಕ್ಕೆ ಸುಜಾತ ಗುರವ್ ಇವರಿಂದ ಮರಾಠಿ ಅಭಂಗ ವಚನಗೀತೆ , ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, 8ಕ್ಕೆ ಹುಬ್ಬಳ್ಳಿಯ ಮಯೂರ ನೃತ್ಯ ಅಕಾಡೆಮಿ ಅವರಿಂದ ಶಿವತಾಂಡವ ನೃತ್ಯ ಕಾರ್ಯಕ್ರಮ, 9ಕ್ಕೆ ಬ್ಯಾಂಡ್ ಕಲ್ಕಿ ತಂಡದಿಂದ ಶಿವಾರಾಧನೆ, 10ಕ್ಕೆ ಖ್ಯಾತ ಹಿನ್ನೆಲೆ ಗಾಯಕ ಚೇತನ ನಾಯಕ ಹಾಗೂ ಸಿಂಚನಾ ದೀಕ್ಷಿತ್ ಹಾಗೂ ತಂಡದಿಂದ ಶಿವನಾಮ ಸಂಗೀತ ರಸ ಸಂಜೆ ನಡೆಯಲಿದೆ. ಅಂದು ಬೆಳಗ್ಗೆ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗವಹಿಸುವರು. ಸಂಜೆ 6.30ಕ್ಕೆ ಸಂಗೀತದೊಂದಿಗೆ ಶಿವನಾಮ ಸ್ಮರಣೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ