ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆಗೆ ಮಂಗಳವಾರ ಸಂಜೆ ಬಿಜೆಪಿ ರೈತ ಮೋರ್ಚಾ ಘಟಕದ ನಿಯೋಗ ಭೇಟಿ ನೀಡಿ ಮಾರುಕಟ್ಟೆ ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಪರಿಶೀಲನೆ ನಡೆಸಿತು.ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಕುಮಾರ್, ರಾಜ್ಯ ಕಾರ್ಯದರ್ಶಿ ಎಚ್.ಆರ್. ಅಶೋಕ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಭೇಟಿ ನೀಡಿ ಮಾರುಕಟ್ಟೆ ಮೂಲ ಸೌಲಭ್ಯಗಳ ಕೊರತೆ ಕುರಿತು ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮಾರುಕಟ್ಟೆಯ ಶೌಚಾಲಯ, ರೈತರ ವಿಶ್ರಾಂತಿ ಗೃಹ, ಕ್ಯಾಂಟೀನ್ ಸೌಲಭ್ಯ ಮತ್ತು ಹೊರ ರಾಜ್ಯದ ಲಾರಿ ತಂಗುದಾಣ ಹಾಗೂ ಚಾಲಕರ ಸಮಸ್ಯೆಗಳ ಬಗ್ಗೆ ರೈತ ಮೋರ್ಚಾ ತಂಡ ಖುದ್ದು ಪರಿಶೀಲನೆ ನಡೆಸಿದರು.ಮದ್ದೂರು ಎಪಿಎಂಸಿ ಎಳನೀರು ಮಾರುಕಟ್ಟೆ ಏಷ್ಯಾದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆ ಎಂದು ಖ್ಯಾತಿಗಳಿಸಿದೆ. ಆದರೆ, ಮಾರುಕಟ್ಟೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಬಗ್ಗೆ ಸರ್ಕಾರ, ಕ್ಷೇತ್ರದ ಶಾಸಕರು ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಡಾ.ನವೀನ್ ಕುಮಾರ್ ಆರೋಪಿಸಿದರು.
ಮಾರುಕಟ್ಟೆಯಲ್ಲಿ ಆಡಳಿತ ಮಂಡಳಿ ಹಾಗೂ ಜವಾಬ್ದಾರಿಯುತ ಅಧಿಕಾರಿಗಳು ಇಲ್ಲದ ಕಾರಣ ಇಂತಹ ಅವ್ಯವಸ್ಥೆ ಉಂಟಾಗಿದೆ. ಮಾರುಕಟ್ಟೆಗೆ ಜಿಲ್ಲೆ ಮತ್ತು ನೆರೆ ಜಿಲ್ಲೆಗಳಿಂದ ರೈತರು, ವ್ಯಾಪಾರಿಗಳು, ಸೇರಿದಂತೆ ನೂರಾರು ಮಂದಿ ವ್ಯಾಪಾರ ವಹಿವಾಟು ನಡೆಸಲು ಬರುತ್ತಾರೆ. ಈ ಜನರಿಗೆ ಕನಿಷ್ಠ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಟೀಕಿಸಿದರು.ಮಾರುಕಟ್ಟೆಯ ಇಂತಹ ಅವ್ಯವಸ್ಥೆಯ ಬಗ್ಗೆ ಬಿಜೆಪಿ ರೈತ ಮೋರ್ಚಾ ಘಟಕ ಮುಂದಿನ ದಿನಗಳಲ್ಲಿ ರೈತರೊಂದಿಗೆ ಸೇರಿ ಉಗ್ರ ರೀತಿಯ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಡಾ.ನವೀನ್ ಕುಮಾರ್ ಎಚ್ಚರಿಕೆ ನೀಡಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್, ಜಿಲ್ಲಾಧ್ಯಕ್ಷ ಅಶೋಕ್ ಜಯರಾಮ್, ಪ್ರಧಾನ ಕಾರ್ಯದರ್ಶಿಗಳಾದ ಜವರೇಗೌಡ, ನಿಂಗರಾಜು, ಮದ್ದೂರು ಎಪಿಎಂಸಿ ಕಾರ್ಯದರ್ಶಿ ಲತಾ, ಸಹ ಕಾರ್ಯದರ್ಶಿ ಶಿವಕುಮಾರ್ ಇದ್ದರು.ಮೂರು ಕೃಷಿ ಕಾಯ್ದೆ ಹಿಂದಕ್ಕೆ: ಡಾ.ನವೀನ್ ಕುಮಾರ್ಮದ್ದೂರು:ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ಜಾರಿಗೆ ತಂದಿತ್ತು. ಆದರೆ, ರೈತರ ಶ್ರೇಯಸ್ಸನ್ನು ಬಯಸದ ವಿಪಕ್ಷಗಳ ವಿರೋಧದಿಂದ ಕಾಯ್ದೆ ಹಿಂಪಡೆಯಬೇಕಾಯಿತು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಲ್ಲಿ ಯುಪಿಎ ಸರ್ಕಾರದ ಅಧಿಕಾರ ಅವಧಿಯಲ್ಲಿ ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಯಾವುದೇ ಕಾಯ್ದೆ ಜಾರಿಗೆ ತಂದಿರಲಿಲ್ಲ. ಎನ್‌ಡಿಎ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆಗಳಿಂದ ಎಲ್ಲಿ ರೈತರು ಉದ್ದಾರವಾಗುತ್ತಾರೆ ಎಂಬ ಕಾರಣದಿದ ವಿಪಕ್ಷಗಳು ಕಾಯ್ದೆಗಳಿಗೆ ವಿರೋಧ ಮಾಡಿದರು ಎಂದು ಟೀಕಿಸಿದರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕೃಷಿ ಕಾಯ್ದೆಗಳು ಸಮರ್ಪಕವಾಗಿ ಜಾರಿಗೆ ಬಂದಿದ್ದರೆ ರೈತರು ತಮಗೆ ಇಷ್ಟ ಬಂದ ಸ್ಥಳದಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶಗಳನ್ನು ಕಾಯ್ದೆಯಲ್ಲಿ ಕಲ್ಪಿಸಲಾಗಿತ್ತು. ಆದರೆ, ವಿಪಕ್ಷಗಳು ಮಧ್ಯವರ್ತಿಗಳಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರೈತರು ಆರ್ಥಿಕವಾಗಿ ದಿವಾಳಿಯಾಗುವ ದಿನ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.