ದೇವನಹಳ್ಳಿ: ಸರ್ಕಾರ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಜನರೇ ಅವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಚಿಕ್ಕಬಳ್ಳಾಪುರ ಬಿಜೆಪಿ ಘಟಕದ ಸಾವಿರಕ್ಕೂ ಹೆಚ್ಚು ಮುಖಂಡರು ಮತ್ತು ಕಾರ್ಯಕರ್ತರು ಧರ್ಮಸ್ಥಳಕ್ಕೆ ೩೦೦ಕ್ಕೂ ಹೆಚ್ಚು ವಾಹನಗಳಲ್ಲಿ ರ್‍ಯಾಲಿ ತೆರಳುವ ವೇಳೆ ಮಾತನಾಡಿದ ಅವರು, ಧರ್ಮಸ್ಥಳ ದೇವಾಲಯದ ಮಾನಹಾನಿಗೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ದೇವಾಲಯದ ಅಧಿಕಾರಿಗಳು ಅಥವಾ ಯಾರೇ ತಪ್ಪು ಮಾಡಿದ್ದರೆ ಕಾನೂನು ಕ್ರಮ ಎದುರಿಸಲಿ, ಅದನ್ನು ಹೊರತುಪಡಿಸಿ ದೇವಾಲಯಕ್ಕೆ ಮಸಿ ಬಳಿಯುವ ಕೆಲಸ ಮಾಡಬಾರದು. ಸತ್ಯ ಎಂದೂ ಸಾಯುವುದಿಲ್ಲ. ಶೀಘ್ರದಲ್ಲಿಯೇ ಧರ್ಮಕ್ಕೆ ಜಯ ಖಂಡಿತವಾಗಿಯೂ ದೊರೆಯಲಿದೆ. ಯಾರೋ ಮುಸುಕುದಾರ ಮತ್ತು ಯೂಟ್ಯೂಬರ್‌ನ ಮಾತು ನಂಬಿ ಧರ್ಮ ಒಡೆಯುವ ಪ್ರಯತ್ನ ನಡೆಯುತ್ತಿದೆ. ಭಕ್ತರನ್ನು ದಾರಿ ತಪ್ಪಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಆರೋಪ ಮಾಡಲಾಗಿದೆ. ಇದರಿಂದ ತೀವ್ರ ನೋವಾಗಿದೆ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ. ಪಿತೂರಿಗಳು ಕೊನೆಗೊಳ್ಳುತ್ತವೆ. ಧರ್ಮಸ್ಥಳ ಮಂಜುನಾಥ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮೇಲೆ ಅಪಾರ ನಂಬಿಕೆ ಗೌರವಿದ್ದು ಅವರ ಪರ ಸದಾ ನಿಲ್ಲುತ್ತೇವೆ. ಮುಖ್ಯಮಂತ್ರಿಗಳು ಪ್ರಕರಣದ ಕುರಿತು ಆಲೋಚನೆ ಮಾಡಿ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಪಶ್ಚಾತಾಪ ಪಡುವ ಸಂದರ್ಭ ಬರಲಿದೆ ಹಾಗೂ ಬಿಜೆಪಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.ಶಿಡ್ಲಘಟ್ಟ ಮಾಜಿ ಶಾಸಕ ರಾಜಣ್ಣ ಮಾತನಾಡಿ, ಧರ್ಮಸ್ಥಳದ ವಿರುದ್ಧದ ಎಲ್ಲಾ ಸುಳ್ಳು ಆರೋಪಗಳ ನಡುವೆಯೂ ಕ್ಷೇತ್ರಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಲೇ ಇದ್ದಾರೆ. ಪೂಜೆ, ಆಚರಣೆಗಳು ಎಂದಿನಂತೆ ನಡೆಯುತ್ತಿವೆ. ಧರ್ಮಸ್ಥಳದ ಮೇಲಿನ ನಂಬಿಕೆ ಹಾಗೆಯೇ ಉಳಿದಿದೆ. ಎಸ್‌ಐಟಿಯಿಂದ ಸತ್ಯ ಎಲ್ಲರಿಗೂ ತಿಳಿಯಲು ಬೇಗ ತನಿಖೆ ಪೂರ್ಣಗೊಳ್ಳಲಿ. ಧರ್ಮಸ್ಥಳದಲ್ಲಿ ಯಾವುದೇ ಅಕ್ರಮ ನಡೆಯುತ್ತಿಲ್ಲ. ಎಲ್ಲಾ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಗಳು ಟ್ರಸ್ಟ್ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದ್ದರೂ ಅವರ ಸಮಾಜ ಸೇವೆ ಮುಂದುವರಿಸಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಆನಂದ್ ಗೌಡ, ಚಿಕ್ಕಬಳ್ಳಾಪುರ ಜಿಲ್ಲಾ ಸೈನಿಕ ಮೋರ್ಚಾ ಅಧ್ಯಕ್ಷ ಜಿ.ಎನ್. ವೇಣು, ಮಾಜಿ ಅಧ್ಯಕ್ಷ ಸುರೇಂದ್ರ ಗೌಡ, ಚಿಂತಾಮಣಿ ತಾಲೂಕು ಅಧ್ಯಕ್ಷ ದೇವರಾಜ್, ಚಿಂತಾಮಣಿ ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಿತ್ರಮ್ಮ , ಗೌತಮಿ, ಚಿಂತಾಮಣಿ ಟೌನ್ ಅಧ್ಯಕ್ಷ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಗೋಕುಲ್ ಶ್ರೀನಿವಾಸ್, ಶಿವು, ಉಮಾ, ಸುನಿತಾ ಇತರರಿದ್ದರು.೨೧ ದೇವನಹಳ್ಳಿ ಚಿತ್ರಸುದ್ದಿ:೦೧
ಧರ್ಮಸ್ಥಳ ಧರ್ಮಯಾತ್ರೆಗೆ ತೆರಳಿದ ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು.