ಕನ್ನಡಪ್ರಭ ವಾರ್ತೆ ದಾವಣಗೆರೆ
ಧರ್ಮಸ್ಥಳದ ವಿಚಾರದಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ವಿಕೃತ ವ್ಯಕ್ತಿಗಳನ್ನು ಬಂಧಿಸಿ, ಇಂತಹ ವ್ಯಕ್ತಿಗಳನ್ನು ಗಲ್ಲಿಗೇರಿಸಬೇಕು ಇಲ್ಲವೇ ಗುಂಡಿಟ್ಟು ಸಾಯಿಸಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ವಿಚಾರದಲ್ಲಿ ಯಾರೇ ವ್ಯಕ್ತಿಗಳ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಹೇಳಿಕೆ ನೀಡುವವರನ್ನು ಗಲ್ಲಿಗೇರಿಸಬೇಕು, ಇಲ್ಲವೇ ಗುಂಡಿಕ್ಕಿ ಸಾಯಿಸಬೇಕಷ್ಟೇ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಸುಕುಧಾರಿ ಅನಾಮಿಕ ವ್ಯಕ್ತಿ ಹೇಳಿದ ಕಡೆಗಳಲ್ಲೆಲ್ಲಾ ಗುಂಡಿ ತೋಡಿಸಿ, ಎಸ್ಐಟಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದರು. ಇದಕ್ಕಾಗಿ ಕೋಟ್ಯಂತರ ರು. ಖರ್ಚು ಮಾಡಲಾಗುತ್ತಿದೆ. ಇದೊಂದು ಹಿಂದೂ ವಿರೋಧಿ ಸರ್ಕಾರವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.ಸುಜಾತ ಭಟ್ ಎನ್ನುವ ವೃದ್ಧೆಗೆ ವಾಸಂತಿ ಎನ್ನುವ ಮಗಳೇ ಇಲ್ಲ. ತನ್ನ ಮಗಳು ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂಬುದಾಗಿ ಆಕೆ ಹೇಳಿದರೂ ಯಾವುದೇ ದಾಖಲೆಗಳೂ ಇಲ್ಲ. ಇಂತಹವರೆಲ್ಲಾ ಎಡ ಪಂಥೀಯರು, ನಕ್ಸಲೈಟ್‌ಗಳಾಗಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಪವಿತ್ರ, ಪುಣ್ಯಕ್ಷೇತ್ರವಾಗಿದೆ. ಇಂತಹ ಕ್ಷೇತ್ರದ ಪೂಜ್ಯರ ಬಗ್ಗೆಯೂ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ತನಗೆ ಅನಿಸಿದ ಕಡೆಗಳಲ್ಲೆಲ್ಲಾ ಗುಂಡಿ ತೋಡುವಂತೆ ಹೇಳುತ್ತಿರುವ ಮುಸುಕುದಾರಿ ಅನಾಮಿಕ ವ್ಯಕ್ತಿಯು ತನ್ನ ಮುಖವನ್ನೇಕೆ ತೋರಿಸುತ್ತಿಲ್ಲ. ಆತನ ಹೆಸರನ್ನಾದರೂ ಯಾಕೆ ಎಲ್ಲೂ ಬಹಿರಂಗಪಡಿಸುತ್ತಿಲ್ಲ. ಇಂತಹ ಘಟನೆ ನಡೆದಿಲ್ಲವೆಂದು ಸ್ವತಃ ಆತನ ಸ್ನೇಹಿತನೇ ಹೇಳಿಕೆ ನೀಡುತ್ತಿದ್ದಾರೆ. ಇದನ್ನೆಲ್ಲಾ ಸೂಕ್ಷ್ಮವಾಗಿ ನೋಡಿದರೆ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವನ್ನು ಅಪವಿತ್ರಗೊಳಿಸುವ ಹುನ್ನಾರ ನಡೆದಿದೆ ಎಂದರು.ಪ್ರಕರಣದ ತನಿಖೆಗೆ ಎಸ್‌ಐಟಿಗೆ ರಚಿಸಿದಾಗ ಸ್ವಾಗತಿಸಿದ್ದೆವು. ಆದರೆ, ಕೋಟ್ಯಂತರ ರು. ಖರ್ಚು ಮಾಡಿ, ಗುಂಡಿ ತೋಡಿಸುತ್ತಿದ್ದಾರೆ. ಇದೊಂದು ಹಿಂದೂ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ, ಮುಖಂಡರಾದ ಚಂದ್ರಶೇಖರ ಪೂಜಾರ, ಪಿ.ಸಿ.ಶ್ರೀನಿವಾಸ ಭಟ್, ಧನಂಜಯ ಕಡ್ಲೇಬಾಳು, ಎಚ್.ಪಿ.ವಿಶ್ವಾಸ್, ಸಂತೋಷ ಪೈಲ್ವಾನ್, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ್, ವಿಜಯ ಸಾವಂತ್, ದೀಪಕ್ ಮೋಹಿತೆ, ಕಿರಣಕುಮಾರ, ಹರೀಶ, ಮಣಿಕಂಠ, ಶಿವು, ಅರುಣಕುಮಾರ, ಸತೀಶ ಇತರರು ಇದ್ದರು.ಗಣೇಶ ಹಬ್ಬಕ್ಕೆ ಡಿಜೆ ಹಾಕೇ ಹಾಕುತ್ತೇವೆ: ರೇಣು
ದಾವಣಗೆರೆಯಲ್ಲಿ ಶ್ರೀ ಗಣೇಶೋತ್ಸವ ಹಬ್ಬದ ವೇಳೆ ಡಿಜೆ ಬ್ಯಾನ್ ಮಾಡಿರುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ. ಯಾವುದೇ ಕಾರಣಕ್ಕೂ ನಿಮ್ಮ ಷರತ್ತುಗಳಿಗೆ ಕ್ಯಾರೇ ಎನ್ನುವುದಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಸಡ್ಡು ಹೊಡೆದಿದ್ದಾರೆ.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಣೇಶೋತ್ಸವಕ್ಕೆ ಡಿಜೆ ಬ್ಯಾನ್ ಮಾಡುವುದರ ವಿರುದ್ಧ ಡೆಕೋರೇಷನ್ ಅಸೋಸಿಯೇಷನ್‌ನವರು ತೆರಳಿ ಮನವಿ ಅರ್ಪಿಸಿದ್ದಾರೆ. ಮತ್ತೊಂದು ಕಡೆ ಡಿಜೆ ಬ್ಯಾನ್ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.
ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು, ಹಿಂದೂ ಸಂಘಟನೆಗಳು, ಡಿಜೆ ಆಪರೇಟರ್ಸ್, ಡೆಕೋರೇಷನ್ ಅಸೋಸಿಯೇಷನ್‌ನವರ ಸಭೆ ಮಾಡಲಿದ್ದೇವೆ. ಆ.27ರಿಂದ ಸೆ.16ರವರೆಗೆ ಡಿಜೆ ಸಿಸ್ಟಂ ಬಳಕೆ ನಿಷೇಧಿಸಿ, ಆದೇಶ ಹೊರಡಿಸಿದ್ದು ಸರಿಯಲ್ಲ ಎಂದರು.ಕಾಂಗ್ರೆಸ್ ಸರ್ಕಾರಕ್ಕೆ ಕೇಸರಿ ಅಂದರೆ ಅಲರ್ಜಿ ಇದೆ. ನಾವು ಹಿಂದೂಗಳು ನಮ್ಮ ಭಾವನೆಗೆ ಯಾರೇ ಅಡ್ಡಿಪಡಿಸಿದರೂ ನಾವು ಸಹಿಸುವುದಿಲ್ಲ. ನಾವು ಸಾಮರಸ್ಯದಿಂದ ಹಬ್ಬ ಮಾಡುತ್ತೇವೆ. ಆ.23ಕ್ಕೆ ದಾವಣಗೆರೆ ಹಳೆ ಪ್ರವಾಸಿ ಮಂದಿರದಲ್ಲಿ ಸಭೆ ಮಾಡುತ್ತೇವೆ. ನಾವು ಡಿಜೆ ಹಾಕಿಯೇ ಹಾಕುತ್ತೇವೆ. ಸಾಮರ್ಥ್ಯವಿದ್ದರೆ ಸೀಜ್ ಮಾಡಿ ಎಂದು ಸವಾಲೆಸೆದರು.
ಡಿಜೆ ನಿಷೇಧ: ಶಾಮಿಯಾನ ಸಂಘದಿಂದಲೂ ಮನವಿದಾವಣಗೆರೆಯಲ್ಲಿ ಶ್ರೀ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಮೆರವಣಿಗೆಗಳಲ್ಲಿ ಡಿಜೆ ಬ್ಯಾನ್ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದಿಂದ ಸಂಘದ ರಾಜ್ಯಾಧ್ಯಕ್ಷ ಆರ್.ಲಕ್ಷ್ಮಣ ಇತರರ ನೇತೃತ್ವದಲ್ಲಿ ಮನವಿ ಅರ್ಪಿಸಿ, ಲಕ್ಷಾಂತರ ರು. ಸಾಲ ಮಾಡಿ, ಹೂಡಿಕೆ ಮಾಡಿದ್ದೇವೆ. ಜನರೇಟರ್, ಸೌಂಡ್ ಸಿಸ್ಟಂ ಖರೀದಿಸಿದ್ದೇವೆ. ಹೀಗೆ ಡಿಜೆ ನಿಷೇಧ ಹಿಂಪಡೆಯುವಂತೆ ಮನವಿ ಮಾಡಲಾಯಿತು.
ಇಧೇ ವೇಳೆ ಮಾತನಾಡಿದ ಆರ್.ಲಕ್ಷ್ಮಣ, ದಾವಣಗೆರೆಯಲ್ಲಿ ಸುಮಾರು 600-700 ಶಾಮಿಯಾನ ಅಂಗಡಿ ಮಾಲೀಕರಿದ್ದಾರೆ. ಆರೇಳು ಸಾವಿರ ಜನರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇದೇ ವೃತ್ತಿಯನ್ನು ನಂಬಿ ಬದುಕು ಕಂಡುಕೊಂಡಿದ್ದಾರೆ. ಜಮೀನು, ಮನೆ, ನಿವೇಶನ, ವಾಹನ, ಚಿನ್ನ ಮಾರಾಟ ಮಾಡಿ, ಸೌಂಡ್ ಸಿಸ್ಟಂ ಖರೀದಿಸಿದ್ದಾರೆ. 6 ತಿಂಗಳ ಮುಂಚೆ ಬ್ಯಾನ್ ಮಾಡಿದ್ದರೆ ನಾವ್ಯಾರೂ ಬಂಡವಾಳವನ್ನೇ ಹೂಡುತ್ತಿರಲಿಲ್ಲ ಎಂದರು.