ಕನ್ನಡಪ್ರಭ ವಾರ್ತೆ ದಾವಣಗೆರೆ
ತಾಲೂಕಿನ ತೋಳಹುಣಸೆಯ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗುರುವಾರ ಎಂಬಿಎ ವಿಭಾಗವು ಐಸಿಎಸ್‌ಎಸ್‌ಆರ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು: ಸುಸ್ಥಿರತೆಯತ್ತ ಚಾಲನೆ ಕುರಿತ ರಾಷ್ಟ್ರ ಮಟ್ಟದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಕೇವಲ ಆರ್ಥಿಕ ಲಾಭವನ್ನಷ್ಟೇ ಪರಿಗಣಿಸದೇ, ಸುಸ್ಥಿರ ಆರೋಗ್ಯವನ್ನೂ ಪರಿಗಣಿಸುವುದು ಮುಖ್ಯ. ದೇಶದಲ್ಲಿ ವಾಯುಮಾಲಿನ್ಯವೇ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಪೆಟ್ರೋಲ್, ಡೀಸೆಲ್ ವಾಹನಗಳು ಹೊರ ಸೂಸುವ ಹಾನಿಕಾರಕ ಹೊಗೆ, ಅನಿಲಗಳು ಪರಿಸರ ಮತ್ತು ಜನಾರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ವಾಯುಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯ ಎಂದರು.ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಇಂಧನಕ್ಕಾಗಿ ಸಂಘರ್ಷ ನಡೆಯುತ್ತಿದೆ. ಭಾರತವು ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ವಿದೇಶಗಳನ್ನು ಅವಲಂಭಿಸಿದೆ. ಈ ಆರ್ಥಿಕತೆಯ ಒತ್ತಡ ನಿವಾರಿಸಿ, ದೇಶೀಯವಾಗಿ ಉತ್ಪಾದನೆಯಾಗುವ ವಿದ್ಯುತ್ ಶಕ್ತಿ ಬಳಕೆ ಮಾಡಿಕೊಂಡರೆ ತೈಲ ಆಮದು ವೆಚ್ಚವನ್ನೂ ಕಡಿಮೆ ಮಾಡಬಹುದು. ದೇಶದ ಆರ್ಥಿಕತೆ (ಜಿಡಿಪಿ) ಸಹ ಬಲಗೊಳ್ಳುತ್ತದೆ ಎಂದು ವಿವರಿಸಿದರು.
ಮಹಾಂತ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಮಾತನಾಡಿ, ಎಲೆಕ್ಟ್ರಿಕ್ ವಾಹನಗಳ ನಿರ್ವಹಣಾ ವೆಚ್ಚ ಸಾಂಪ್ರದಾಯಿಕ ವಾಹನಗಳಿಗಿಂತ ಕಡಿಮೆಯಾಗಿದೆ. ಅಲ್ಲದೇ, ವಿದ್ಯುತ್ ಇಂಧನದ ಬೆಲೆ ಇತರ ಇಂಧನಗಳಿಗಿಂತ ತೀರಾ ಅಗ್ಗವಾಗಿದ್ದು, ಗ್ರಾಹಕರಿಗೆ ಆರ್ಥಿಕವಾಗಿ ಲಾಭವಾಗುತ್ತದೆ ಎಂದರು.
ಬೆಂಗಳೂರಿನ ಸಿಗ್ನೆಟ್ ಎಂಟರ್‌ಪ್ರೈಸಸ್ ಸಿಇಒ ಬಿ.ವಿ.ವೆಂಕಟಶ್ಯಾಮ್ ಮಾತನಾಡಿ, ತಂತ್ರಜ್ಞಾನ ಸುಧಾರಣೆ, ಬ್ಯಾಟರಿ ವೆಚ್ಚದಲ್ಲಿ ಇಳಿಕೆ, ಸಮರ್ಪಕ ನೀತಿಗಳ ಮೂಲಕ ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ಮುಂದಿನ ದಿನಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿರೀಕ್ಷೆ ಇದೆ. ಇದು ಸ್ವಚ್ಛ, ಹಸಿರು ಮತ್ತು ಆರ್ಥಿಕವಾಗಿ ಸದೃಢವಾದ ಭಾರತ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿದೆ ಎಂದು ಅಭಿಪ್ರಾಯಪಟ್ಟರು.