ಎಸ್.ನಾಗಭೂಷಣ ಕನ್ನಡಪ್ರಭ ವಾರ್ತೆ, ತುರುವೇಕೆರೆ
ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೊರತೆ ಕಾರಣ ಈ ಶೈಕ್ಷಣಿಕ ವರ್ಷದಲ್ಲಿ ತಮ್ಮೂರಿನ ಕಾಲೇಜು ಮುಚ್ಚಿ ಹೋಗಲಿದೆ ಎಂಬ ಸಂಗತಿ ಹೊರಬರುತ್ತಿದ್ದಂತೆ ಗ್ರಾಮಸ್ಥರು 2.77 ಲಕ್ಷ ರು. ಹೊಂದಿಸಿ ಶಾಲೆಗೆ ದಾಖಲಾಗುವ ಎಲ್ಲಾ ವಿದ್ಯಾರ್ಥಿಗಳ ಶುಲ್ಕವನ್ನು ತಾವೇ ಕಟ್ಟುವ ಮೂಲಕ ಕಾಲೇಜನ್ನು ಉಳಿಸಿಕೊಂಡಿರುವುದು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.ತಾಲೂಕಿನ ದಂಡಿನಶಿವರ ಗ್ರಾಮದಲ್ಲಿರುವ ಶ್ರೀ ಹೊನ್ನಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿಗದಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣಕ್ಕೆ ಈ ಶೈಕ್ಷಣಿಕ ವರ್ಷದಿಂದ ಕಾಲೇಜನ್ನು ಮುಚ್ಚುವ ಸ್ಥಿತಿ ಬಂದು ತಲುಪಿತ್ತು. ಈ ಕಾಲೇಜು ಮುಚ್ಚಿದಲ್ಲಿ ದಂಡಿನಶಿವರದ ಅಕ್ಕಪಕ್ಕದ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿತ್ತು. ಎಲ್ಲರೂ ತಾಲೂಕು ಕೇಂದ್ರವಾಗಿರುವ ಸುಮಾರು ಹದಿನೈದು ಕಿಮೀ ದೂರದಲ್ಲಿರುವ ತುರುವೇಕೆರೆಗೇ ವಿದ್ಯಾಭ್ಯಾಸಕ್ಕೆ ಬರಬೇಕಿತ್ತು. ತಮ್ಮ ಗ್ರಾಮದ ಶೈಕ್ಷಣಿಕವಾಗಿ ಮುಂದುವರೆಯಬೇಕು ಹಾಗೂ ಕಾಲೇಜು ಪ್ರಾರಂಭಿಸಬೇಕೆಂಬ ಹೆಬ್ಬಯಕೆ ಹೊಂದಿದ್ದ ಅದೇ ಗ್ರಾಮದ ಲತಾ ಗಂಗಾಧರ್ ಎಂಬುವವರು ಸುಮಾರು ಎರಡು ಎಕರೆ ಜಮೀನಿನನ್ನು ದಾನವಾಗಿ ನೀಡಿದ್ದರು. 2007 ರಿಂದ ಪ್ರಾರಂಭಗೊಂಡಿರುವ ಈ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ, ಬಿಸಿಎ ಪದವಿಗಳು ಲಭ್ಯವಿದ್ದವು. ನುರಿತ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ವೈಫೈ ಸೌಲಭ್ಯ, ಕಂಪ್ಯೂಟರ್ ಲ್ಯಾಬ್, ಸಾಂಸ್ಕೃತಿಕ, ಕ್ರೀಡೆ, ಎಸ್ ಎಸ್ ಎಸ್, ಎಸ್ ಸಿ ಸಿ, ರೋವರ್ಸ್, ಮತ್ತು ರೇಂಜರ್ಸ್ ಯುವ ರೆಡ್ ಕ್ರಾಸ್, ಉದ್ಯೋಗ ಕೌಶಲ ತರಬೇತಿ ಸೇರಿದಂತೆ ಹತ್ತು ಹಲವಾರು ವಿಷಯಗಳಲ್ಲಿ ಬೋಧನೆ ಮಾಡಲಾಗುತ್ತಿದೆ. ಪ್ರಸಕ್ತ ವರ್ಷ ದಾಖಲಾತಿ ಕುಸಿದು ಕಾಲೇಜು ಮುಚ್ಚುವ ಹಂತ ತಲುಪಿತ್ತು.
ಒಮ್ಮೆ ಕಾಲೇಜು ಮುಚ್ಚಿದರೆ ಪುನಃ ತರುವುದು ಕಷ್ಟವೆಂದು ಅರಿತ ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಹಿರಿಯ ಸದಸ್ಯರಾಗಿದ್ದ ಗಂಗಾಧರ ಗೌಡ, ಕಾಲೇಜಿನ ಪ್ರಾಂಶುಪಾಲ ಡಾ.ಯದುನಂದನ್ ಸೇರಿದಂತೆ ಹಲವರು ಕಾಲೇಜಿನ ದುಃಸ್ಥಿತಿಯನ್ನು ಕಣ್ಣಾರೆ ಕಂಡರು. ಇದನ್ನು ಸರಿಪಡಿಸುವ ಸಲುವಾಗಿ ಗ್ರಾಮದಲ್ಲಿ ಸಭೆ ಸೇರಿ ಉಚಿತ ಪ್ರವೇಶಾತಿ ಆಂದೋಲನವನ್ನು ಹಮ್ಮಿಕೊಳ್ಳುವ ಬಗ್ಗೆ ಚಿಂತಿಸಿದರು. ಈ ಕಾಲೇಜು ಮುಚ್ಚಿ ಹೋದರೆ ಮುಂದಿನ ಪೀಳಿಗೆಗೆ ತೊಂದರೆಯಾಗಲಿದೆ ಎಂಬ ಸಂದೇಶವನ್ನು ಹತ್ತಾರು ಹಳ್ಳಿಗಳಿಗೆ ಸಾರಿದರು. ಕಾಲೇಜಿನ ಸಿಬ್ಬಂದಿ, ಗ್ರಾಮದ ಪ್ರಮುಖರು ಮನೆ ಮನೆಗೆ ತೆರಳಿ ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸುವಂತೆ ಮನವಿ ಮಾಡಿದರು. ಈ ವೇಳೆ ಅದೆಷ್ಟೋ ಪೋಷಕರು ತಮಗೆ ಕಾಲೇಜಿಗೆ ಸೇರಿಸಲೂ ಇಷ್ಟ ಇದ್ದರೂ ಸಹ ಆರ್ಥಿಕ ಮುಗ್ಗಟ್ಟಿನಿಂದಾಗಿ ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸಲು ಆಗುತ್ತಿಲ್ಲ ಎಂದು ತಮ್ಮ ನೋವು ತೋಡಿಕೊಂಡರು. ಇದಕ್ಕೆ ವಿಚಲಿತರಾಗದ ಗ್ರಾಮಸ್ಥರು ಆರ್ಥಿಕವಾಗಿ ಸಬಲರಲ್ಲದವರ ಮಕ್ಕಳ ಸರ್ಕಾರಿ ಶುಲ್ಕವನ್ನು ಗ್ರಾಮಸ್ಥರೇ ಭರಿಸುವ ನಿರ್ಧಾರಕ್ಕೆ ಬಂದರು. ಕಾಲೇಜನ್ನು ಉಳಿಸಿಕೊಳ್ಳಲು ಮಕ್ಕಳ ಶುಲ್ಕವನ್ನು ಕಟ್ಟಲು ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿ ಎಂದು ತಮ್ಮ ಗ್ರಾಮದ ಸಾಮಾಜಿಕ ಜಾಲ ತಾಣದಲ್ಲಿ ಮನವಿ ಮಾಡಿಕೊಂಡರು. ಈ ಮನವಿ ನೋಡಿದ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು, ಕಾಲೇಜಿನಲ್ಲಿ ಓದಿ ಉತ್ತಮ ಹುದ್ದೆಯಲ್ಲಿರುವ ಹಲವರು ಕೇವಲ ಒಂದೆರೆಡು ದಿನಗಳಲ್ಲಿ ಸುಮಾರು 2.77 ಲಕ್ಷ ರು.ಸಂಗ್ರಹಿಸಿ ಕಾಲೇಜಿಗೆ ಸೇರಿದ ಸುಮಾರು 50 ವಿದ್ಯಾರ್ಥಿಗಳ ಶುಲ್ಕವನ್ನು ಕಟ್ಟಲು ನೆರವಾದರು. ಈ ಪ್ರಯತ್ನದಿಂದಾಗಿ ಮುಚ್ಚಿ ಹೋಗುತ್ತಿದ್ದ ಕಾಲೇಜಿಗೆ ಮತ್ತೆ ಜೀವ ಬಂದಿದೆ. ದಂಡಿನಶಿವರದ ಗ್ರಾಮಸ್ಥರು ಮಾಡಿದ ಈ ಪ್ರಯತ್ನ ಎಲ್ಲರಿಗೂ ಮಾದರಿಯಾಗಿದೆ.