ಕನ್ನಡಪ್ರಭ ವಾರ್ತೆ ನವದೆಹಲಿ
ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿಯ ಭಿನ್ನಮತೀಯ ಬಣದ ನಾಯಕರು ಕಳೆದ ಎರಡು ಮೂರು ದಿನಗಳಿಂದ ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದು, ಹಲವು ಕೇಂದ್ರ ನಾಯಕರನ್ನು ಭೇಟಿ ಮಾಡಿದ್ದಾರೆ.ಗುರುವಾರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ ಶಾಸಕ ರಮೇಶ ಜಾರಕಿಹೊಳಿ, ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ವಿಜಯೇಂದ್ರ ಅವರ ವೈಫಲ್ಯಗಳ ಪಟ್ಟಿಯನ್ನು ಮುಂದಿಟ್ಟಿದ್ದಾರೆ. ಕಾಂಗ್ರೆಸ್ ಜೊತೆಗಿನ ಅವರ ಸಖ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಧ್ಯೆ, ಬಣದ ನಾಯಕರು ಈಗಾಗಲೇ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್, ಸಂಸದ ಬಸವರಾಜ್ ಬೊಮ್ಮಾಯಿ ಅವರನ್ನು ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಗರವಾಲ್ ಅವರು, ಯಾರೂ ಮಾಧ್ಯಮಕ್ಕೆ ಯಾವುದೇ ರೀತಿಯ ಹೇಳಿಕೆ ನೀಡಬೇಡಿ. ಮಾಧ್ಯಮಕ್ಕೆ ಹೇಳಿಕೆ ನೀಡಿದರೆ ನಮಗೆ ಆ ಬಗ್ಗೆ ಮಾಹಿತಿ ಬರುತ್ತದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೂ ತಮ್ಮ ನಡವಳಿಕೆ ತಿದ್ದಿಕೊಳ್ಳುವಂತೆ ಕೆಲವು ಸಲಹೆ ನೀಡಿದ್ದೇನೆ. ನೀವು ಶಾಂತವಾಗಿ ಇರಿ ಎಂದು ನಾಯಕರಿಗೆ ಸಲಹೆ ನೀಡಿದ್ದಾರೆ. ಅಲ್ಲದೆ, ಯಡಿಯೂರಪ್ಪ ಅವರ ನಾಯಕತ್ವವೇ ಬೇರೆ, ವಿಜಯೇಂದ್ರ ಅವರ ನಾಯಕತ್ವವೇ ಬೇರೆ ಎಂಬುದು ನಮಗೆ ಗೊತ್ತಿದೆ ಎಂದು ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಇದಕ್ಕೆ ಪ್ರತಿಕ್ರಿಯಿಸಿರುವ ಭಿನ್ನಮತೀಯ ಬಣದ ನಾಯಕರು, ನೀವು ಸೂಚನೆ ನೀಡಿದ ಮೇಲೆ ನಾವು ವಿಜಯೇಂದ್ರರ ವಿರುದ್ಧ ಮಾತನಾಡಿಲ್ಲ. ಆದರೆ, ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ನೀವು ಏನು ತೀರ್ಮಾನ ಮಾಡುತ್ತೀರೋ ಮಾಡಿ. ನಾವು ಮಾಧ್ಯಮಕ್ಕೆ ಬಹಿರಂಗ ಹೇಳಿಕೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭೇಟಿ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಕುಮಾರ್ ಬಂಗಾರಪ್ಪ, ರಾಧಾಮೋಹನ್ ಸಿಂಗ್ ಅಗರವಾಲ್ ಸೇರಿ ಹಲವು ನಾಯಕರನ್ನು ಭೇಟಿಯಾಗಿದ್ದೇವೆ. ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನಾವು ಪದೇ ಪದೇ ಚರ್ಚೆ ಮಾಡಲ್ಲ. ಯತ್ನಾಳ್ ಉಚ್ಚಾಟನೆ ಬಳಿಕ ನಾವು ಉತ್ಸಾಹ ಕಳೆದುಕೊಂಡಿಲ್ಲ. ಹೈಕಮಾಂಡ್ ಮುಂದೆ ನಮ್ಮ ವಿಚಾರ ಇಟ್ಟ ಬಳಿಕ ನಾವು ಸಂಘಟನೆಗೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.