ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಮತಚೋರಿ ವಿರುದ್ಧ ನಡೆದ ಬೃಹತ್ ರ್‍ಯಾಲಿ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಸುದೀರ್ಘ ಟ್ವೀಟ್ ಮಾಡಿದ್ದು, ಪ್ರಜಾಪ್ರಭುತ್ವದ ರಕ್ಷಣೆಗೆ ಹೋರಾಡುವಂತೆ ಜನತೆಗೆ ಕರೆ ನೀಡಿದ್ದಾರೆ.
‘ಕದ್ದ ಮತಗಳಿಂದ ಹುಟ್ಟಿದ ಸರ್ಕಾರ ಜನತಾಂತ್ರಿಕವಲ್ಲ. ಅದು ಪ್ರಜಾಪ್ರಭುತ್ವವನ್ನು ಒಳಗಿಂದೊಳಗೆ ಕೊರೆಯುತ್ತದೆ. ಇಂದು ಮತಚೋರಿ ಭಾರತೀಯ ಜನತಂತ್ರಕ್ಕೆ ಬಂದಿರುವ ಅತಿ ದೊಡ್ಡ ಬೆದರಿಕೆ. ಈ ಕತ್ತಲೆಯ ಕಾಲದಲ್ಲಿ ರಾಹುಲ್ ಗಾಂಧಿಯವರು, ಕರ್ನಾಟಕ, ಹರ್ಯಾಣ, ಬಿಹಾರ ಮೊದಲಾದ ಕಡೆಗಳಲ್ಲಿ ನಡೆದಿರುವ ಅಕ್ರಮಗಳನ್ನು ಬಯಲುಮಾಡುವ ಮೂಲಕ ಮತಚೋರಿಯು ಕೇವಲ ಆರೋಪವಲ್ಲ, ವಾಸ್ತವತೆ ಎಂಬುದನ್ನು ತೋರಿಸಿದ್ದಾರೆ’ ಎಂದಿದ್ದಾರೆ.
‘ಕರ್ನಾಟಕದಲ್ಲೇ ಮಹದೇವಪುರ ಮತ್ತು ಆಳಂದ ಕ್ಷೇತ್ರಗಳಲ್ಲಿ ಗಂಭೀರ ಅಕ್ರಮಗಳು ಬಯಲಾದವು. ಆಳಂದದಲ್ಲಿ ಸುಮಾರು 6,000 ನ್ಯಾಯಸಮ್ಮತ ಮತದಾರರನ್ನು ಅಳಿಸುವ ಪ್ರಯತ್ನ ನಡೆದಿದೆ. ಇದರ ವಿರುದ್ಧ ನಿನ್ನೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿ ಬಿಜೆಪಿ ಮಾಜಿ ಶಾಸಕ ಮತ್ತು ಅವರ ಮಗನ ಹೆಸರುಗಳು ಬಂದಿವೆ. ಇದು ಸತ್ಯ ಮುಖ್ಯವೆಂಬುದಕ್ಕೆ ಸಾಕ್ಷಿ. ದೆಹಲಿಯ ಈ ಐತಿಹಾಸಿಕ ರ್‍ಯಾಲಿಯಿಂದ ನಾನು ಪ್ರತಿಯೊಬ್ಬ ಭಾರತೀಯನಿಗೆ ಕರೆ ನೀಡುತ್ತೇನೆ. ನಿಮ್ಮ ಮತವನ್ನು ರಕ್ಷಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಿ’ ಎಂದು ಕರೆ ನೀಡಿದ್ದಾರೆ.ಮತದಾನ ಹಕ್ಕು ರಕ್ಷಣೆಗೆ ಕೈ ಹೋರಾಟ:‘ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವ ಸಲುವಾಗಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ರ್‍ಯಾಲಿ ನಡೆಸಿದೆ. ನಮ್ಮ ಕಾರ್ಯಕರ್ತರು ಮತ್ತು ನಾಯಕರಲ್ಲಿ ಅಪಾರ ಉತ್ಸಾಹವಿದೆ. ನಮ್ಮ ಧ್ವನಿಯನ್ನು ಯಾರಿಂದಲೂ ಅಡಗಿಸಲು ಸಾಧ್ಯವಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸೋಲು-ಗೆಲುವಿನ ಬಗ್ಗೆ ಚಿಂತಿಸಲ್ಲ:ಚುನಾವಣಾ ಸೋಲಿನ ಹತಾಶೆಯಿಂದ ಕಾಂಗ್ರೆಸ್ ರ್‍ಯಾಲಿ ಆಯೋಜಿಸಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಬಿಜೆಪಿಗರು ತಮ್ಮ ಸಂತೋಷಕ್ಕಾಗಿ ಏನನ್ನು ಬೇಕಾದರೂ ಹೇಳಿಕೊಳ್ಳಲಿ. ನಾವು ಕಾಂಗ್ರೆಸ್ಸಿಗರು, ಚುನಾವಣಾ ಗೆಲುವು ಮತ್ತು ಸೋಲುಗಳ ಬಗ್ಗೆ ಯೋಚಿಸುವುದಿಲ್ಲ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಮ್ಮ ಹಿರಿಯರು ದೇಶಕ್ಕೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನೀಡಲು ಮಾಡಿದ ತ್ಯಾಗದ ಬಗ್ಗೆ ನಾವು ಯೋಚಿಸುತ್ತೇವೆ. ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರಂತಹ ಅರ್ಥಶಾಸ್ತ್ರಜ್ಞರಿಗೆ ಹುದ್ದೆ ನೀಡಿದರು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿ ಈ ದೇಶಕ್ಕಾಗಿ ಜೈಲಿಗೆ ಹೋದರು. ನೂರು ವರ್ಷಗಳ ಹಿಂದೆ, ಗಾಂಧಿ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡರು; ಇಂದು ಈ ಕಷ್ಟದ ಸಮಯದಲ್ಲಿ, ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ’ ಎಂದರು.