ಸರ್ಕಾರಿ ಸಂಸ್ಥೆಗಳ ಖಾಸಗೀಕರಣವೇ ಬಿಜೆಪಿ ಸಾಧನೆ

KannadaprabhaNewsNetwork | Published : Apr 25, 2024 1:09 AM

ಸಾರಾಂಶ

ಇಂದು ರಾಜಕೀಯ ಸ್ವಾರ್ಥ ಸಾಧನೆಗೆ ದ್ವೇಷ ಹರಡಿ,ಧರ್ಮ, ಧರ್ಮಗಳ ಮಧ್ಯೆ ವೈಮನಸ್ಸು ಮೂಡಿಸಲಾಗುತ್ತಿದೆ

ಲಕ್ಷ್ಮೇಶ್ವರ: ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಸ್ಥಾಪಿಸಿದ್ದ ಸಾರ್ವಜನಿಕ ಸಂಸ್ಥೆಗಳನ್ನು ಈಗಿನ ಕೇಂದ್ರ ಬಿಜೆಪಿ ಸರ್ಕಾರ ಖಾಸಗೀಕರಣ ಮಾಡುತ್ತಿದೆ. ದೇಶದ ಸರ್ಕಾರಿ ಸ್ವಾಮ್ಯದ ಬೃಹತ್ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿರುವುದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ವಾಗ್ದಾಳಿ ನಡೆಸಿದರು.

ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರದ ವೇಳೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಮತಯಾಚನೆ ನಡೆಸಿ ಮಾತನಾಡಿದರು.

ಮೊದಲಿನಿಂದಲೂ ವಿಶ್ವಗುರು ಬಸವಣ್ಣ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕಂಡ ಸಮಸಮಾಜ ನಿರ್ಮಾಣ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಾಗಿದೆ. ಇಂದು ರಾಜಕೀಯ ಸ್ವಾರ್ಥ ಸಾಧನೆಗೆ ದ್ವೇಷ ಹರಡಿ,ಧರ್ಮ, ಧರ್ಮಗಳ ಮಧ್ಯೆ ವೈಮನಸ್ಸು ಮೂಡಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಹ ಪ್ರಜ್ಞಾವಂತಿಕೆ ಪ್ರದರ್ಶಿಸಬೇಕಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಿರಸ್ಕರಿಸಿ ಜನಕಲ್ಯಾಣವನ್ನೇ ಧ್ಯೇಯವಾಗಿಟ್ಟುಕೊಂಡ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಸದ್ಬಳಕೆಯಿಂದ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸಲು ಅನುಕೂಲವಾಗಿದೆ. ಬರ ಪರಿಸ್ಥಿತಿಯಲ್ಲಿಯೂ ನಿಶ್ಚಿತ ಜೀವನ ಸಾಗಿಸುವ ಅನುಕೂಲ ಗ್ಯಾರಂಟಿ ಯೋಜನೆಗಳು ನೀಡಿವೆ ಎಂಬುದು ಈಗ ರಾಜ್ಯದ ಜನತೆಗೆ ಮನದಟ್ಟಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಪ್ರತಿ ಕುಟುಂಬದ ಮಹಿಳೆಗೆ ವಾರ್ಷಿಕ ಒಂದು ಲಕ್ಷ ಸಹಾಯಧನದ ಮಹಾಲಕ್ಷ್ಮಿ ಯೋಜನೆ ಜಾರಿಗೊಳಿಸಲಾಗುವುದು ಮತ್ತು ರೈತರ ಸಾಲ ಮನ್ನಾ ಮಾಡಲಾಗುವುದು. ಅದಕ್ಕಾಗಿ ತಮ್ಮ ಮತ ನನಗೆ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಎಲ್ಲೆಡೆ ಕಾಂಗ್ರೆಸ್ ಪರ ಘೋಷಣೆ ಮೊಳಗುತ್ತಿದ್ದು, ಜನರು ಅಪಾರ ಬೆಂಬಲ ಸೂಚಿಸುತ್ತಿದ್ದಾರೆಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಈಶ್ವರ ಸಹಿತ ಹಲವು ಮುಖಂಡರು ಮಾತನಾಡಿ ಮತಯಾಚಿಸಿದರು.

Share this article