ದಲಿತರ ವಿರುದ್ಧ ದಲಿತರನ್ನೇ ಎತ್ತಿ ಕಟ್ಟಿ ಬಿಜೆಪಿ ಷಡ್ಯಂತ್ರ

KannadaprabhaNewsNetwork |  
Published : May 29, 2025, 01:14 AM ISTUpdated : May 29, 2025, 01:15 AM IST
ವಿಜಯಪುರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.  | Kannada Prabha

ಸಾರಾಂಶ

ಬಿಜೆಪಿ ನಾಯಕರು ದಲಿತ ನಾಯಕರ ವಿರುದ್ಧ ದಲಿತ ನಾಯಕರನ್ನೇ ಎತ್ತಿ ಕಟ್ಟಿ ಜಗಳ ನೋಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಟೀಕಿಸುತ್ತಿರುವುದರಲ್ಲಿ ತಪ್ಪೇನು? ಸರ್ಕಾರದ ವೈಫಲ್ಯಗಳನ್ನು ಟೀಕಿಸುವುದು ಸಂವಿಧಾನಬದ್ಧ ಹಕ್ಕು. ಆದರೆ ಇದನ್ನು ಸಹಿಸಿಕೊಳ್ಳದೇ ಬಿಜೆಪಿ ನಾಯಕರು ದಲಿತ ನಾಯಕರ ವಿರುದ್ಧ ದಲಿತ ನಾಯಕರನ್ನೇ ಎತ್ತಿ ಕಟ್ಟಿ ಜಗಳ ನೋಡುತ್ತಿದ್ದಾರೆ. ಈ ಒಂದು ದೊಡ್ಡ ಷಡ್ಯಂತ್ರ ಸೃಷ್ಟಿಸಿದ್ದಾರೆ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಆರೋಪಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ದೇಶದ ಪ್ರಧಾನಿ. ಅವರನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಹೀಗಾಗಿ ಸಚಿವ ಪ್ರಿಯಾಂಕ ಖರ್ಗೆ ಮೋದಿಜಿ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಯುವ ದಲಿತ ನಾಯಕನ ವಿರುದ್ಧ ಇನ್ನೊಬ್ಬ ದಲಿತ ನಾಯಕನನ್ನು ಎತ್ತಿ ಕಟ್ಟುವ ದೊಡ್ಡ ಷಡ್ಯಂತ್ರವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಸುಳ್ಳು ಸರ್ವೇ ನಡೆಸಿ ಸುಳ್ಳು ಬಿಂಬಿಸಲು ಹೊರಟಿದೆ. ಜನರನ್ನು ಈ ರೀತಿ ದಿಕ್ಕು ತಪ್ಪಿಸುವುದನ್ನು ಬಿಜೆಪಿ ನಾಯಕರು ಬಿಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ನಾಯಕರು ಕೋಮು ಬಣ್ಣ ಹಚ್ಚುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದರು.

ಛಲವಾದಿ ನಾರಾಯಣಸ್ವಾಮಿ ಚಡ್ಡಿ ಹೊತ್ತ ದಿನವೇ ಅವರ ಸಿದ್ಧಾಂತ ಮಣ್ಣು ಪಾಲಾಗಿದೆ. ಸಿದ್ಧಾಂತ ಹಾಗೂ ಬದ್ಧತೆ ಅವರಿಂದ ಖರ್ಗೆ ಮನೆತನ ಕಲಿಯಬೇಕಿಲ್ಲ. ಈ ಹಿಂದೆ ಖರ್ಗೆ ಸಾಹೇಬರ ಮನೆ ಬಾಗಿಲು ಕಾಯುತ್ತಿದ್ದ ಅವರನ್ನು ರೈಲ್ವೇ, ಅರಣ್ಯ ನಿಗಮಗಳಿಗೆ ನಾಮನಿರ್ದೇಶನ ಮಾಡಿದ್ದು ಯಾರು ಎಂಬುದನ್ನು ಮರೆಯಬಾರದು. ಎಲ್ಲ ಧರ್ಮದ ಜನರ ಆಶಯ ಈಡೇರಿಸುವ ಸಂವಿಧಾನವನ್ನು ಕಾಂಗ್ರೆಸ್ ಪಾಲನೆ ಮಾಡುತ್ತಿದೆ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಸಚಿವ ಎಂ.ಬಿ.ಪಾಟೀಲ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹಗುರವಾಗಿ ಮಾತನಾಡಿದ್ದು ಖಂಡನೀಯ. ಎಂ.ಬಿ.ಪಾಟೀಲರು ನನ್ನನ್ನು ಸೇರಿ ಅನೇಕ ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಹಿಂದುಳಿದ, ಶೋಷಿತ ಮತ್ತು ಅಲ್ಪಸಂಖ್ಯಾತ ನಾಯಕರನ್ನು ನಿಲ್ಲಿಸಿ, ಗೆಲ್ಲಿಸುವ ಹಾಗೂ ಅವರನ್ನು ಬೆಳೆಸುವ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ನಾವು ಸಹಿಸುವುದಿಲ್ಲ ಎಂದರು.

ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಸಚಿವ ಡಾ.ಎಂ.ಬಿ.ಪಾಟೀಲರು ಮಾಡಿರುವ ಸಾಧನೆ ಇಡೀ ಜಗತ್ತಿಗೆ ಗೊತ್ತಿದೆ. ಬೇಕಾದರೆ ಅವರ ಸಾಧನೆಯ ದೊಡ್ಡ ಪಟ್ಟಿಯನ್ನು ನಾನೇ ಕೊಡುವೆ. ಅದನ್ನು ಬಿಟ್ಟು ಅವರ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರು ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಡಾ.ಎಂ.ಬಿ.ಪಾಟೀಲರು ಎಲ್ಲ ವರ್ಗದ ಜನರ ಕೆಲಸ ಮಾಡುತ್ತಾರೆ, ಎಲ್ಲರನ್ನೂ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಅವರು ಕೈಗೊಂಡ ನೀರಾವರಿ ಕಾರ್ಯಗಳು ಮಾದರಿಯಾಗಿವೆ. ನಿರ್ಗತಿಕರಿಗೆ ಸದಾ ಸಹಾಯ, ಬಡವರ ಬಗ್ಗೆ ಅಪಾರವಾದ ಕಳಕಳಿ ಹೊಂದಿದ ಜನನಾಯಕ ಡಾ.ಎಂ.ಬಿ.ಪಾಟೀಲರ ಬಗ್ಗೆ ಮಾತನಾಡುವ ಮುನ್ನ ಹತ್ತು ಸಾರಿ ಯೋಚಿಸಿ ಎಂದು ಅಂಗಡಿಗೆ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೊಹ್ಮದ್‌ ರಫೀಕ್ ಟಪಾಲ್, ಮುಖಂಡರಾದ ಡಾ.ಗಂಗಾಧರ ಸಂಬಣ್ಣಿ, ವಸಂತ ಹೊನಮೋಡೆ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ