ಬಿಜೆಪಿಯದ್ದು ಸುಳ್ಳಿನ ಮೇಲಿನ ಸಾಮ್ರಾಜ್ಯ

ಕನ್ನಡಪ್ರಭ ವಾರ್ತೆ ವಿಜಯಪುರ: ಬಿಜೆಪಿ, ಮೋದಿ ಮತ್ತವರ ಬಳಗದ ಸುಳ್ಳುಗಳನ್ನು ಜನ ಅರಿತಿದ್ದು, ಈ ಸಲ ಸರಿಯಾಗಿ ಪಾಠ ಕಲಿಸಲಿದ್ದಾರೆ. ಬಿಜೆಪಿಯವರು ಸುಳ್ಳಿನ ಮೇಲೆ ಸಾಮ್ರಾಜ್ಯ ಕಟ್ಟುತ್ತಾರೆ. ಇಲ್ಲದ್ದನ್ನು ಅಚ್ಚುಕಟ್ಟಾಗಿ ಸೃಷ್ಟಿಸುತ್ತಾರೆ. ಭ್ರಮೆಗಳನ್ನು ಬಿತ್ತಿ ಮುಗ್ಧ ಜನರ ಮತ ಕೇಳುತ್ತಾರೆ. ಇದರಿಂದ ಬೇಸತ್ತು ನಾವು ಬಿಜೆಪಿ ತೊರೆಯಬೇಕಾಯಿತು ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.

KannadaprabhaNewsNetwork | Published : May 4, 2024 8:37 PM IST / Updated: May 05 2024, 02:08 AM IST

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಜೆಪಿ, ಮೋದಿ ಮತ್ತವರ ಬಳಗದ ಸುಳ್ಳುಗಳನ್ನು ಜನ ಅರಿತಿದ್ದು, ಈ ಸಲ ಸರಿಯಾಗಿ ಪಾಠ ಕಲಿಸಲಿದ್ದಾರೆ. ಬಿಜೆಪಿಯವರು ಸುಳ್ಳಿನ ಮೇಲೆ ಸಾಮ್ರಾಜ್ಯ ಕಟ್ಟುತ್ತಾರೆ. ಇಲ್ಲದ್ದನ್ನು ಅಚ್ಚುಕಟ್ಟಾಗಿ ಸೃಷ್ಟಿಸುತ್ತಾರೆ. ಭ್ರಮೆಗಳನ್ನು ಬಿತ್ತಿ ಮುಗ್ಧ ಜನರ ಮತ ಕೇಳುತ್ತಾರೆ. ಇದರಿಂದ ಬೇಸತ್ತು ನಾವು ಬಿಜೆಪಿ ತೊರೆಯಬೇಕಾಯಿತು ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕೊಲ್ಹಾರದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮೊದಲಿಂದ ದೇಶಪ್ರೇಮ ಮೆರೆಯುತ್ತ ಬಂದಿದೆ. ಸಿಎಂ ಸಿದ್ದರಾಮಯ್ಯರ ಸರ್ಕಾರದ ಗ್ಯಾರಂಟಿಗಳ ಮೂಲಕ ಜನಮನ ಗೆದ್ದಿದೆ. ಬಡವರ ನಿತ್ಯ ಜೀವನಕ್ಕೆ ಸಹಾಯವಾಗಲಿ ಎಂದು ಭಾಗ್ಯಗಳನ್ನು ಕೊಟ್ಟಿದೆ. ಕೆಂದ್ರ ಸರ್ಕಾರದ ಕೆಟ್ಟ ಆಡಳಿತದಿಂದ ಬೆಲೆ ಏರಿಕೆ, ಹಣದುಬ್ಬರ, ಜಿಎಸ್‌ಟಿ, ನೋಟ್ ಬಂದಿಯಿಂದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿತ್ತು. ಇದರಿಂದ ಸಾಮಾನ್ಯ ಜನ ತತ್ತರಿಸಿದ್ದರು ಎಂದರು.

ಜಿಲ್ಲೆಯ ಅಭಿವೃದ್ಧಿಗಾಗಿ ಆಲಗೂರರನ್ನು ಆಯ್ಕೆ ಮಾಡಿದರೆ ಒಳಿತಾಗಲಿದೆ. ದಶಕಗಳ ಕಾಲ ಈ ಲೋಕಸಭೆ ಕ್ಷೇತ್ರ ಏಳಿಗೆಯಿಂದ ವಂಚಿತವಾಗಿದೆ. ಕಾಂಗ್ರೆಸ್ ಇಲ್ಲಿ ಗೆಲ್ಲವುದು ಖಚಿತ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಮಾತನಾಡಿ, ಆರು ಸಲ ಸಂಸದರಾಗಿದ್ದ ಜಿಗಜಿಣಗಿಯವರಿಂದ ಯಾವ ಕೆಲಸವೂ ಆಗಿಲ್ಲ. ಇವರು ಬೇಕೊ ಆಲಗೂರರು ಬೇಕೊ ನಿವೇ ನಿರ್ಧರಿಸಿ. ಪ್ರಜಾಪ್ರಭುತ್ವದ ಉಳಿವಿಗಾಗಿ ನೀವು ಕಾಂಗ್ರೆಸ್ ಬೆಂಬಲಿಸಬೇಕು. ದೇಶ ಸಂಕಷ್ಟದಲ್ಲಿದೆ. ದುರಾಡಳಿತ ಹೆಚ್ಚಿದೆ ಎಂದರು.

ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರು ಹತಾಶರಾಗಿದ್ದಾರೆ. ಸಹನೆ ಕಳೆದುಕೊಂಡು ಏನೇನೊ ಮಾತನಾಡುತ್ತಿದ್ದಾರೆ. ಇದು ಅವರ ಸೋಲಿನ ದಿಕ್ಸೂಚಿಯಾಗಿದ್ದು, ಮತದಾರು ನನ್ನನ್ನು ಆಯ್ಕೆ ಮಾಡಿದರೆ ನಿಮ್ಮ ವಿಶ್ವಾಸ ಉಳಿಸಿಕೊಳ್ಳುವೆ ಎಂದು ಭರವಸೆ ನೀಡಿದರು.

ಈ ವೇಳೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಜಿಪಂ ಮಾಜಿ ಸದಸ್ಯ ಕಲ್ಲು ದೇಸಾಯಿ ಮಾತನಾಡಿದರು. ಮುಖಂಡರಾದ ಶಿವನಗೌಡ ಗುಜಗೊಂಡ, ಸಿ.ಎಸ್.ಗಿಡ್ಡಪ್ಪಗೋಳ, ಬಿ.ಯು.ಗಿಡ್ಡಪ್ಪಗೋಳ, ಎಸ್.ಬಿ.ಪತಂಗಿ, ಆರ್.ಬಿ.ಪಕಾಲಿ, ಉಸ್ಮಾನ ಪಟೇಲ್, ವಿಜಯ ಮಹಾಂತೇಶ ಗಿಡ್ಡಪ್ಪಗೋಳ, ಎಂ.ಆರ್. ಕಲಾದಗಿ, ಶ್ರೀಶೈಲ ಗೌಡರ, ಡಾ.ಮೇತ್ರಿ ಇದ್ದರು. ಪುಟ್ಟು ಪಾಟೀಲ್ ನಿರೂಪಿಸಿದರು.

Share this article