ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜನಾಂದೋಲನ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Jun 23, 2025, 11:53 PM IST
23ಎಚ್‌ವಿಆರ್‌1 | Kannada Prabha

ಸಾರಾಂಶ

ಆಡಳಿತ ಪಕ್ಷದ ಶಾಸಕರು ಮಾತಾಡಿದರೂ ಸಿಎಂ ಹಾಗೂ ಡಿಸಿಎಂ ತುಟಿ ಪಿಟಕ್ ಅನ್ನುತ್ತಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾವೇರಿ: ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ಧ ಜನಾಂದೋಲನ ಕೈಗೊಳ್ಳಬೇಕೆಂದು ಬಿಜೆಪಿ ತೀರ್ಮಾನ ಮಾಡಿದೆ. ಜನರ ವಿಶ್ವಾಸದೊಂದಿಗೆ ಯಾವ ಪ್ರದೇಶದಲ್ಲಿ ಯಾವ ವಿಷಯ ತೆಗೆದುಕೊಂಡು ಜನಾಂದೋಲನ ರೂಪಿಸಬೇಕು ಎಂದು ಪಕ್ಷದ ಪ್ರಮುಖರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಅಧಿಕಾರಿಗಳ ವರ್ಗಾವಣೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಸ್ಥಳೀಯ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಪ್ರಾಮಾಣಿಕ ಅಧಿಕಾರಿಗಳ ನೈತಿಕತೆ ಕುಂದಿದೆ ಎಂದರು.

ಆಡಳಿತ ಪಕ್ಷದ ಶಾಸಕರು ಮಾತಾಡಿದರೂ ಸಿಎಂ ಹಾಗೂ ಡಿಸಿಎಂ ತುಟಿ ಪಿಟಕ್ ಅನ್ನುತ್ತಿಲ್ಲ. ಸಂಪುಟ ಸಹೋದ್ಯೋಗಿಗಳು ಬಹಿರಂಗವಾಗಿ ಪತ್ರ ಬರೆಯುತ್ತಾರೆ. ಸಚಿವ ಸಂಪುಟದಲ್ಲೂ ಸಾಮರಸ್ಯ, ವಿಶ್ವಾಸ ಇಲ್ಲ. ಸಚಿವರು ಸಂಪುಟದಲ್ಲಿ ಎತ್ತುವ ಪ್ರಶ್ನೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಬಹಿರಂಗವಾಗಿ ಪತ್ರ ಬರೆಯುತ್ತಿದ್ದಾರೆ ಎಂದರು.ಮಳೆ ಬಂದರೂ ಪರಿಹಾರ ಇಲ್ಲ. ಬೆಳೆಹಾನಿಗೆ ಪರಿಹಾರ ಇಲ್ಲ. ಮನೆ ಕುಸಿದರೂ ಪರಿಹಾರ ಇಲ್ಲ. ಯಾವುದೇ ರೀತಿಯ ಜನಸ್ಪಂದನೆ ಕೆಲಸ ಆಗುತ್ತಿಲ್ಲ. ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ಧ ಜನಾಂದೋಲನ ಪ್ರಾರಂಭ ಆಗಲಿದೆ. ಯಾವ್ಯಾವ ಪ್ರದೇಶಗಳಲ್ಲಿ ಯಾವ ವಿಷಯ ಇದೆ, ಅದನ್ನು ತೆಗೆದುಕೊಂಡು ಜನರ ವಿಶ್ವಾಸದೊಂದಿಗೆ ಜನಾಂದೋಲನ ನಡೆಸಲು ಬಿಜೆಪಿ ತೀರ್ಮಾನ ಮಾಡಿದೆ. ಪಕ್ಷದ ಪ್ರಮುಖರ ಜತೆ ಚರ್ಚಿಸಿ ಚಿಂತನ ಮಂಥನ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೂಚನೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಎಲ್ಲರೂ ಸೇರಿ ಶೀಘ್ರದಲ್ಲೇ ಜನಾಂದೋಲನ ಪೂರ್ವಭಾವಿ ಸಭೆ ಮಾಡುತ್ತೇವೆ ಎಂದರು.

ಎಲ್ಲರೂ ಪಾಲುದಾರರು: ಈಗಾಗಲೇ ಸರ್ಕಾರದ ವಿರುದ್ಧ ಪಿಡಬ್ಲ್ಯುಡಿ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಲಿಕ್ಕರ್ ಶಾಪ್ ಅಸೋಸಿಯೇಷನ್‌ನವರು ಎಲ್ಲದಕ್ಕೂ ಹಣ ವಸೂಲಿ ಮಾಡುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆಗೂ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಕೆಇಬಿ ಕಾಂಟ್ರಾಕ್ಟರ್ಸ್ ₹500 ಬೆಲೆಯ ಸ್ಮಾರ್ಟ್ ಮೀಟರ್‌ಗೆ ₹4ರಿಂದ ₹5 ಸಾವಿರ ವಸೂಲಿ ಮಾಡುತ್ತಿದ್ದಾರೆ ಎಂದು ಕಂಪ್ಲೇಂಟ್ ಮಾಡಿದ್ದಾರೆ. ಎಲ್ಲ ಅಸೋಸಿಯೇಷನ್‌ದವರು ಲಂಚಾವತಾರದ ಬಗ್ಗೆ ಬಹಿರಂಗಗೊಳಿಸಿದರೂ ಸರ್ಕಾರ ಸ್ಪಂದನೆ ಮಾಡದಿರುವುದನ್ನು ನೋಡಿದರೆ ಎಲ್ಲರೂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.ಜಿಲ್ಲಾಡಳಿತ ಹೊಣೆ: ರೈತರ ಆತ್ಮಹತ್ಯೆ ಪರಿಶೀಲಿಸುವ ವ್ಯವಸ್ಥೆಯೇ ಇದೆ. ಸಚಿವ ಶಿವಾನಂದ ಪಾಟೀಲ್ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮಾತುಗಳನ್ನಾಡಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳ ಹೊಣೆ ಜಿಲ್ಲಾಡಳಿತ ಹೊರಬೇಕು. ಸರ್ಕಾರ ಪರಿಹಾರ ಕೊಡಬೇಕು. ರೈತ ಸಂಪರ್ಕ ಕೇಂದ್ರದಿಂದ ನಕಲಿ ಬೀಜ ಕೊಟ್ಟಿದಾರೆ. ಸರ್ಕಾರವೇ ಡುಪ್ಲಿಕೇಟ್ ಮಾಡಿದ ಹಾಗೆ ಆಯಿತು. ಪಕ್ಕದ ಧಾರವಾಡ ಜಿಲ್ಲೆಯಲ್ಲಿ ಚೆನ್ನಾಗಿ ಬೀಜಗಳು ಹುಟ್ಟಿದೆ. ಅಲ್ಲಿ ಮಧ್ಯಪ್ರದೇಶದಿಂದ ತರಿಸಿದ್ದಾರೆ. ಮಹಾರಾಷ್ಟ್ರದಿಂದ ತರಿಸಿದ್ದು ಇಲ್ಲಿದೆ. ಕೃಷಿ ಸಚಿವರು ಈ ಬಗ್ಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಬೊಮ್ಮಾಯಿ

ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಸಂಪೂರ್ಣ ನಾಶ ಮಾಡಿದೆ. ರೈತರು, ಪ್ರತಿಪಕ್ಷಗಳು ಪ್ರತಿಭಟನೆ ಮಾಡಿದರೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ‌ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಸೋಮವಾರ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾದ ವಿರೂಪಾಕ್ಷಪ್ಪ ಬಳ್ಳಾರಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾರ್ಯಕರ್ತರು ತೋರಿಸಿರುವ ಉತ್ಸಾಹದಿಂದ ಹೊಸ ಹುಮ್ಮಸ್ಸು ಬಂದಿದೆ. ನಾವೆಲ್ಲರೂ ಅಧಿಕಾರದಲ್ಲಿದ್ದಾಗಲೂ ಪಕ್ಷ ಸಂಘಟನೆ ಮಾಡಿದ್ದೇವೆ‌. ಅಧಿಕಾರ ಇಲ್ಲದಿರುವಾಗಲೂ ಹೋರಾಟ ಮಾಡಿದ್ದೇವೆ. ಈ ಭಾಗದ ಜೀವನದಿಗಳಿಗಾಗಿ ಹೋರಾಟ ಮಾಡಿದ್ದೇವೆ. ಅಧಿಕಾರಕ್ಕೆ ಬಂದಾಗ ಅವೆಲ್ಲ ಕಾರ್ಯ ಮಾಡಿದ್ದೇವೆ. ನಮ್ಮ ನಾಯಕ ಯಡಿಯೂರಪ್ಪ ಅವರು ಹೋರಾಟ ಮಾಡುವುದನ್ನು ಹೇಳಿದ್ದಾರೆ. ನಾವು ಬಡವರ ಪರ, ಜನಪರ ಸರ್ಕಾರವನ್ನು ಇಡೀ ದೇಶವೇ ಮೆಚ್ಚುವಂತೆ ಮಾಡಿದ್ದೇವೆ ಎಂದರು.

ಹಾನಗಲ್ಲ ತಾಲೂಕಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರೂ ಅವರನ್ನು ಬೇಲ್ ಮೇಲೆ ಬಿಡುಗಡೆ ಮಾಡಲು ಹುನ್ನಾರ ನಡೆದಿದೆ. ಅದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಒಸಿ ಬರೆಯುವವರನ್ನು, ರೇಪ್ ಮಾಡುವವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಕಾಂಗ್ರೆಸ್ ವಿರುದ್ಧ ಅಲೆ: ರಾಜ್ಯದಲ್ಲಿ ಈಗ ಕಾಂಗ್ರೆಸ್ ವಿರುದ್ಧ ಅಲೆ ಎದ್ದಿದೆ. ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಗಣಿ ಗುತ್ತಿಗೆ ನೀಡಲು ಪಾರದರ್ಶಕತೆ ತರಲು ಕಾನೂನು ರೂಪಿಸಿದೆ. ಅದು ಜಾರಿಯಾಗುವ ಹಿಂದಿನ ದಿನ ಸಿದ್ದರಾಮಯ್ಯ ಲೈಸೆನ್ಸ್ ನವೀಕರಣ ಮಾಡಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ. ಎಚ್.ಕೆ‌. ಪಾಟೀಲ್‌ ಅವರಿಗೆ ಕಳಕಳಿ ಇದ್ದರೆ ಅದನ್ನೂ ತನಿಖೆಗೆ ಕೊಡಿ ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ