ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಬಿಜೆಪಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ರಾಜ್ಯ ಸರ್ಕಾರದ ದುರಾಡಳಿತದಿಂದ ಬೆಂಗಳೂರು ಅಭಿವೃದ್ಧಿ ಕುಂಠಿತವಾಗಿದೆ. ನಗರದ ರಸ್ತೆಗಳು ಹೊಂಡಗಳಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ವಿರುದ್ಧ ವಿವಿಧ ಘೋಷಣೆ ಕೂಗಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ಕಡೆಗಣಿಸಿದೆ. ರಸ್ತೆಗಳಲ್ಲಿ ಗುಂಡಿ, ಕಸದ ರಾಶಿ ಎಲ್ಲೆಡೆ ಕಾಣುತ್ತಿದೆ. ಪೌರಕಾರ್ಮಿಕರಿಗೆ ಹಾಗೂ ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ. ರಾಜಧಾನಿಯಲ್ಲಿ ಒಂದೇ ಒಂದು ರೂಪಾಯಿ ಕಾಮಗಾರಿ ನಡೆದಿಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಗರ ವೀಕ್ಷಣೆ ಮಾಡಿದ್ದಾರೆಯೇ ಹೊರತು, ಅಭಿವೃದ್ಧಿಗೆ ಹಣ ನೀಡಿಲ್ಲ ಎಂದು ಕಿಡಿಕಾರಿದರು.₹1 ಸಾವಿರ ಕೋಟಿಗೆ ಆಗ್ರಹ:
ಬೆಂಗಳೂರಿನ ಜನರು ಈಗ ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂದು ಹೇಳುತ್ತಿದ್ದಾರೆ. ಬೆಂಗಳೂರು ಜನರು ಅತ್ಯಧಿಕ ತೆರಿಗೆ ಪಾವತಿಸುತ್ತಿದ್ದಾರೆ. ರಾಜ್ಯದ ಒಟ್ಟು ತೆರಿಗೆಯಲ್ಲಿ ಅತಿ ಹೆಚ್ಚು ಪಾಲು ಬೆಂಗಳೂರಿಂದ ಬರುತ್ತದೆ. ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿ ಕಾಂಗ್ರೆಸ್ ಸರ್ಕಾರ ಬ್ಯಾಡ್ ಬೆಂಗಳೂರು, ಕ್ರೈಂ ಬೆಂಗಳೂರು ಹಾಗೂ ಕಸದ ರಾಶಿಯ ಬೆಂಗಳೂರನ್ನು ನೀಡಿದೆ. ಮಳೆಗಾಲ ಆರಂಭವಾಗುವ ಮುನ್ನವೇ ಸರ್ಕಾರ ಎಚ್ಚೆತ್ತು ₹1 ಸಾವಿರ ಕೋಟಿ ಬಿಡುಗಡೆ ಮಾಡಿ, ಯಾವುದೇ ಅನಾಹುತವಾಗದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ರಾಜ್ಯದ ಕಾನೂನು ಸುವ್ಯವಸ್ಥೆ ಅತ್ಯಂತ ಹದಗೆಟ್ಟಿದೆ. ಬೀದಿ ರಂಪಾಟಗಳು, ಗೂಂಡಾ ಪ್ರವೃತ್ತಿ ಹೆಚ್ಚಾಗಿದ್ದು, ಮನೆಯಿಂದ ಹೊರಟ ಮಹಿಳೆಯರು, ಯುವಜನರು ಮನೆ ಸೇರುವ ಧೈರ್ಯ ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ತಕ್ಷಣ ರಸ್ತೆ ಗುಂಡಿ ಮುಚ್ಚಿ
ರಾಜಧಾನಿಯ ರಸ್ತೆಗಳು ಗುಂಡಿಮಯವಾಗಿವೆ. ತಕ್ಷಣ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳದಿದ್ದರೆ, ಭ್ರಷ್ಟಾಚಾರ ಹೀಗೇ ಮುಂದುವರೆದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ. ಕಾಂಗ್ರೆಸ್ ಸರ್ಕಾರ ಸರಿದಾರಿಗೆ ಬರದೆ ಇದ್ದರೆ ಅದನ್ನು ಸರಿದಾರಿಗೆ ತರುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಸದಾನಂದಗೌಡ ಹೇಳಿದರು.ಬಿಜೆಪಿ ಅಧಿಕಾರಿಗಳ ಪರ:
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರಿಂದ ರಾಜ್ಯದ ಎಲ್ಲ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿರುವುದು ಗೊತ್ತಿದೆ. ಅಧಿಕಾರಿಗಳ ಪರವಾಗಿ ಬಿಜೆಪಿ ಇದೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳದಿರಿ ಎಂದು ಮನವಿ ಮಾಡಿದರು.ಜನತೆಗೆ ತೊಂದರೆ ಕೊಟ್ಟರೆ ಹೋರಾಟ ತೀವ್ರ: ಅಶ್ವತ್ಥಮಾಜಿ ಡಿಸಿಎಂ ಡಾ। ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಬೆಂಗಳೂರಿನ ಜನತೆಗೆ ತೊಂದರೆ ಕೊಟ್ಟರೆ ನಾವು ಸುಮ್ಮನಿರುವುದಿಲ್ಲ. ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ. ಪ್ರತಿಭಟನೆ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಗಂಟೆ. ಆಶಾದಾಯಕ, ಭರವಸೆದಾಯಕ ನಗರ ಬೆಂಗಳೂರನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದ್ದು, ಈ ಸರ್ಕಾರ ಪ್ರಜ್ಞೆ ಇದೆಯೇ? ಇದು ಅತ್ಯಂತ ಕೆಟ್ಟ- ಭ್ರಷ್ಟ ಸರ್ಕಾರ. ಗುತ್ತಿಗೆದಾರರ ರಕ್ತ ಹೀರುವ ಸರ್ಕಾರ ಎಂದು ಕಿಡಿಕಾರಿದರು.
ಮಾಜಿ ಸಚಿವರಾದ ಬೈರತಿ ಬಸವರಾಜ್, ಗೋಪಾಲಯ್ಯ, ಮುನಿರತ್ನ, ನಾರಾಯಣ ಗೌಡ, ಶಾಸಕರಾದ ವಿಶ್ವನಾಥ್, ಮುನಿರಾಜು, ರವಿಸುಬ್ರಹ್ಮಣ್ಯ, ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರಿನ ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಅಧಿಕಾರಿ ಸಾವಿಗೆ ಸರ್ಕಾರ ಕಾರಣ: ಅಶೋಕ್ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಚಿವರೇ ಕಾರಣರಾಗಿದ್ದಾರೆ. ಲಂಚ ತೆಗೆದುಕೊಂಡಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಇಲ್ಲಿ ₹187 ಕೋಟಿ ಹಗರಣ ನಡೆದಿದ್ದು, ಇದಕ್ಕೆ ಯಾರೆಲ್ಲ ಕಾರಣರು ಎಂಬುದನ್ನು ಅಧಿಕಾರಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದರಲ್ಲಿ ಕೇವಲ ಸಚಿವ ಮಾತ್ರವಲ್ಲದೆ, ಮುಖ್ಯಮಂತ್ರಿ ಹಾಗೂ ಇಡೀ ಸಂಪುಟದವರೇ ಲೂಟಿ ಮಾಡಿದ್ದಾರೆ. ಇದಕ್ಕೆ ನೇರವಾಗಿ ಸರ್ಕಾರವೇ ಕಾರಣ. ₹187 ಕೋಟಿ ಲೂಟಿ ಹೊಡೆದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಹಿಂದೆ ಕೆ.ಎಸ್.ಈಶ್ವರಪ್ಪನ ರಾಜೀನಾಮೆ ಕೇಳಿದ ಕಾಂಗ್ರೆಸ್ ಸಚಿವರು ಹಾಗೂ ಮುಖ್ಯಮಂತ್ರಿ ಈಗ ರಾಜೀನಾಮೆ ನೀಡಲಿ. ಇದರ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಲಿದೆ ಎಂದು ಆರ್.ಅಶೋಕ್ ಎಚ್ಚರಿಸಿದರು.