ಕನ್ನಡ ಪ್ರಭ ವಾರ್ತೆ ಮಳವಳ್ಳಿ
ಶಿಕ್ಷಕರ ಕುಂದುಕೊರತೆಗಳ ಬಗ್ಗೆ ಸ್ಪಂದಿಸುವ ಮರಿತಿಬ್ಬೇಗೌಡರಿಗೆ ಮೊದಲೇ ಪ್ರಾಶಸ್ತ್ಯದ ಮತ ಕೊಟ್ಟು ಗೆಲ್ಲಿಸಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ ಮನವಿ ಮಾಡಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿ ಗ್ರಾಪಂ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಭೇಟಿ ಕೊಟ್ಟು ಶಿಕ್ಷಕರನ್ನು ಮನವೊಲಿಸುವ ಪ್ರಯತ್ನವನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಮಾಡಬೇಕಿದೆ ಎಂದರು.
ಹಣ ಇದೆ ಎಂದು ಎಸ್ಸೆಸ್ಸೆಲ್ಸಿ ಓದಿದವರಿಗೆ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದು, ಶಿಕ್ಷಕರು ಸೂಕ್ತ ಅಭ್ಯರ್ಥಿಗೆ ಮತಕೊಟ್ಟು ಗೆಲ್ಲಿಸಬೇಕೆಂದು ಮನವಿ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಮಾತನಾಡಿ, ಪರಿಷತ್ ಚುನಾವಣೆ ಸಂಬಂಧ ಮೇ 31ರಂದು ಸಂಜೆ 4 ಗಂಟೆಗೆ ಬಸವನಪುರದ ಸಮುದಾಯ ಭವನದಲ್ಲಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಶಿಕ್ಷಕರನ್ನು ಸಭೆಗೆ ಕರೆತರುವ ಪ್ರಯತ್ನವನ್ನು ಕಾಂಗ್ರೆಸ್ ಮುಖಂಡರು ಮಾಡಬೇಕು ಎಂದರು.
ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು ಮಾತನಾಡಿ, ತಾಲೂಕಿನಲ್ಲಿ 667 ಮತದಾರರು ಇದ್ದು, 300 ಮಂದಿ ಹೊರಗಡೆ ವಾಸವಿದ್ದಾರೆ. ಅವರನ್ನು ಗುರುತಿಸಿ ದೂರವಾಣಿ ಮೂಲಕ ಮರಿತಿಬ್ಬೇಗೌಡರಿಗೆ ಮತ ಹಾಕುವಂತೆ ಮನವಿ ಮಾಡಿಕೊಳ್ಳಬೇಕು ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಮರಿತಿಬ್ಬೇಗೌಡರು ಮೂಲ ಮಳವಳ್ಳಿಯವರೇ ಆಗಿರುವುದರಿಂದ ಹೆಚ್ಚಿನ ಮತಗಳು ಇಲ್ಲಿಂದಲೇ ಬರುವಂತೆ ಶಿಕ್ಷಕರನ್ನು ಮನವೊಲಿಸುವ ಪ್ರಯತ್ನವನ್ನು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಾಡಬೇಕೆಂದು ಸಲಹೆ ನೀಡಿದರು.
ಸತತ ನಾಲ್ಕು ಭಾರಿ ಆಯ್ಕೆಯಾಗಿರುವ ಮರಿತಿಬ್ಬೇಗೌಡರು ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಕಷ್ಟಸುಖಗಳನ್ನು ಅರ್ಥಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿರುವ ಮತದಾರರು ಗೆಲ್ಲುಸುತ್ತಾರೆಂಬ ವಿಶ್ವಾಸವಿದೆ ಎಂದರು.ಮೇ 29 ರಿಂದ ಪ್ರೌಢಶಾಲೆಗಳು ಆರಂಭಗೊಳ್ಳುತ್ತಿವೆ. ಹೋಬಳಿ ಮಟ್ಟದಲ್ಲಿ ಮುಖಂಡರು ತಂಡಗಳನ್ನಾಗಿ ಮಾಡಿಕೊಂಡು ಶಾಲೆಗಳಿಗೆ ಭೇಟಿ ಕೊಟ್ಟು ಚುನಾವಣಾ ಪ್ರಚಾರದಲ್ಲಿ ತೊಡಗಬೇಕು. ಮೇ 31ರ ಪೂರ್ವಭಾವಿ ಸಭೆ ಮಾಹಿತಿಯನ್ನು ತಿಳಿಸಬೇಕಿದೆ ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಮಾಜಿ ಅಧ್ಯಕ್ಷ ದೇವರಾಜು ಮಾತನಾಡಿದರು. ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಕೆ.ಎಂ.ದೊಡ್ಡಿ ಪುಟ್ಟರಾಮು, ಬಸವೇಶ್, ದೀಪು, ದಶರಥ, ಶಿವರಾಮು, ಅಶ್ವಿನ್ ಕಿರಣ್‌ಶಂಕರ್ ಸೇರಿದಂತೆ ಇತರರು ಇದ್ದರು