ಜನರ ಭಾವನೆ ಮೇಲೆ ಬಿಜೆಪಿ ರಾಜಕೀಯ : ಡಿ.ಕೆ.ಶಿವಕುಮಾರ್‌

KannadaprabhaNewsNetwork | Updated : May 05 2025, 10:37 AM IST

ಸಾರಾಂಶ

ಬಿಜೆಪಿಯವರು ಜನರ ಭಾವನೆಗಳ ಮೇಲೆ ರಾಜಕೀಯ ಮಾಡುತ್ತಾರೆ. ಆದರೆ ಕಾಂಗ್ರೆಸ್‌ನವರು ಜನರ ಬದುಕಿನ ಮೇಲೆ ರಾಜಕೀಯ ಮಾಡುತ್ತೀವಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೇಳಿದರು.

  ಹಾನಗಲ್ಲ (ಹಾವೇರಿ) : ಬಿಜೆಪಿಯವರು ಜನರ ಭಾವನೆಗಳ ಮೇಲೆ ರಾಜಕೀಯ ಮಾಡುತ್ತಾರೆ. ಆದರೆ ಕಾಂಗ್ರೆಸ್‌ನವರು ಜನರ ಬದುಕಿನ ಮೇಲೆ ರಾಜಕೀಯ ಮಾಡುತ್ತೀವಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೇಳಿದರು. 

ಹಾನಗಲ್ಲ ವಿಧಾನಸಭಾ ಕ್ಷೇತ್ರದ ಅಕ್ಕಿಆಲೂರಿನಲ್ಲಿ ಭಾನುವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾದಾಗ ಬಿಜೆಪಿಯವರು ಆಕ್ರೋಶ ವ್ಯಕ್ತಪಡಿಸಲಿಲ್ಲ. 

ಈಗ ಕಾಂಗ್ರೆಸ್ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈತರಿಗಾಗಿ ಹಾಲಿನ ಬೆಲೆ ಹೆಚ್ಚಳ ಮಾಡಿದ್ದೇವೆ. ಈ ಹಣವನ್ನು ಸರ್ಕಾರ ಏನಾದರೂ ತೆಗೆದುಕೊಂಡಿದೆಯೇ ಎಂದು ಪ್ರಶ್ನಿಸಿದರು. ಆ ಹಣವನ್ನು ರೈತರಿಗೆ ನೀಡಿದ್ದೇವೆ. ಬಿಜೆಪಿಯವರು ಯಾವಾಗ ನಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸಿದರೋ ಅದೇ ದಿನ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿತು. ಅಧಿಕಾರದಲ್ಲಿ ಇರುವ ನಾವು ನಿಮ್ಮ ನೆರವಿಗೆ ನಿಲ್ಲಬೇಕೆ ಹೊರತು ಪಿಕ್ ಪಾಕೆಟ್ ಮಾಡಲು ಅಲ್ಲ ಎಂದರು.

ನಾವು ಅಧಿಕಾರಕ್ಕೆ ಬರುವ ಮುಂಚೆ ಆಶ್ವಾಸನೆ ಕೊಟ್ಟ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ನಿಮಗೆ ನಾವು ಆಸರೆಯಾಗಿ ನಿಂತು ಆಧಾರವಾಗಿದ್ದೇವೆ. ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಹೋದ ತೆರಿಗೆಯಲ್ಲಿ ಕೇವಲ ಶೇ.13ರಷ್ಟನ್ನು ಮಾತ್ರ ವಾಪಸ್ ಕೊಡುತ್ತಿದೆ. ಆದರೂ ನಾವು ₹4 ಲಕ್ಷ ಕೋಟಿಗೂ ಅಧಿಕ ಗಾತ್ರದ ಬಜೆಟ್ ಅನ್ನು ರಾಜ್ಯದ ಅಭಿವೃದ್ಧಿಗಾಗಿ ಮಂಡನೆ ಮಾಡಿದ್ದೇವೆ ಎಂದರು.

ಗ್ಯಾರಂಟಿ ಯೋಜನೆ ವಿರೋಧ ಮಾಡುತ್ತಿದ್ದ ಬಿಜೆಪಿಯವರು ನಂತರ ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ದೆಹಲಿ ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ಗ್ಯಾರಂಟಿ ಯೋಜನೆಗಳಿಗೆ ₹52 ಸಾವಿರ ಕೋಟಿ ಕೊಟ್ಟು ರಾಜ್ಯದಲ್ಲಿ ಸಾವಿರಾರು ಕೋಟಿ ರುಪಾಯಿಗಳ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ನಮಗೆ ಸಿಕ್ಕಿರುವ ಅವಕಾಶ ವ್ಯರ್ಥವಾಗಬಾರದು ಎಂದು ನಿಮ್ಮ ಸೇವೆ ಮಾಡುತ್ತಿದ್ದೇವೆ ಎಂದರು.

Share this article