ಮೋದಿಯ ‘ಅಚ್ಚೆ ದಿನ್‌’ ಇನ್ನೂ ಬರ್ಲಿಲ್ಲ : ಸಿದ್ದರಾಮಯ್ಯ

KannadaprabhaNewsNetwork |  
Published : May 05, 2025, 12:49 AM ISTUpdated : May 05, 2025, 10:22 AM IST
ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನಲ್ಲಿ ಆಯೋಜಿಸಿದ್ದ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಅಚ್ಚೆ ದಿನ್‌ ಆಯೇಗಾ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆ ಅಚ್ಚೇ ದಿನ ಬರಲೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

  ಹಾವೇರಿ: ಅಚ್ಚೆ ದಿನ್‌ ಆಯೇಗಾ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆ ಅಚ್ಚೇ ದಿನ ಬರಲೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾನುವಾರ ಜಿಲ್ಲೆಯ ಹಾವೇರಿ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ₹650 ಕೋಟಿ ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ಸಬ್‌ ಕಾ ಸಾಥ್‌ ಸಬ್‌ ಕ ವಿಕಾಸ್‌’ ಎಂದು ಹೇಳಿದ ಮೋದಿ ಅವರು ಮುಸ್ಲಿಮರಿಗೆ ಉದ್ಯೋಗದಲ್ಲಿ ನೀಡುತ್ತಿದ್ದ ಶೇ. 4 ಮೀಸಲಾತಿಯನ್ನು ಕೈಬಿಟ್ಟಿದ್ದಾರೆ. ಇದೇನಾ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂದು ಪ್ರಶ್ನಿಸಿದರು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಸರ್ಕಾರವಿದ್ದಾಗ ಡಾಲರ್ ಬೆಲೆ ₹59 ಇದ್ದದ್ದು ಈಗ ₹86ಕ್ಕೆ ಏರಿಕೆ ಆಗಿದೆ. ಅಡುಗೆ ಅನಿಲ ₹450 ರಿಂದ ₹879 ಆಗಿದೆ. ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಔಷಧ, ಚಿನ್ನ, ಅಕ್ಕಿ, ಬೇಳೆ, ಎಣ್ಣೆ, ಕಾಳು ಸೇರಿ ಎಲ್ಲದರ ಬೆಲೆಯನ್ನೂ ಮೋದಿ ಆಕಾಶಕ್ಕೆ ಏರಿಸಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಮೋದಿ ಭರವಸೆ ಕೊಟ್ಟಿದ್ದರು. ಈ 11 ವರ್ಷದಲ್ಲಿ 22 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಅದಕ್ಕೇ ಹೇಳೋದು ಸುಳ್ಳು ಬಿಜೆಪಿಯ ಮನೆ ದೇವರು. ಆದ್ದರಿಂದ ಜನರ ಆಕ್ರೋಶ ಇರುವುದು ಬಿಜೆಪಿ ಮೇಲೆ, ಪ್ರಧಾನಿ ಮೋದಿ ಅವರ ಮೇಲೆ ಎನ್ನುವುದನ್ನು ಆರ್.ಅಶೋಕ್, ಬಿ.ವೈ.ವಿಜಯೇಂದ್ರ ಅವರು ಅರ್ಥ ಮಾಡಿಕೊಳ್ಳಲಿ ಎಂದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಸುಳ್ಳು ಆರೋಪಗಳನ್ನು ನಂಬಬೇಡಿ. ನಮ್ಮ ಸರ್ಕಾರದ ವಿರುದ್ಧ ಜನಾಕ್ರೋಶ ಸಭೆ ನಡೆಸುತ್ತಿರುವ ಬಿಜೆಪಿಯವರಿಗೆ ಮಾನ, ಮರ್ಯಾದೆ ಇದ್ದಿದ್ದರೆ ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ಮಾಡಲಿ. ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರ ಹಣ ನೀಡುತ್ತಿಲ್ಲ. ಗ್ಯಾರಂಟಿಗಳಿಂದ ಖಜಾನೆ ಖಾಲಿಯಾಗಿದೆ ಎಂದು ಬಿಜೆಪಿ ಅವರು ಸುಳ್ಳು ಹೇಳುತ್ತಾ ಹೋಗುತ್ತಿದ್ದಾರೆ. ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ ಈ ಬಾರಿಯ ಬಜೆಟ್ ಗಾತ್ರ ₹38 ಸಾವಿರ ಕೋಟಿ ಹೆಚ್ಚಾಗಿದೆ. ಈ ಬಾರಿ ಬಂಡವಾಳ ವೆಚ್ಚ ₹83 ಸಾವಿರ ಕೋಟಿ ತೆಗೆದಿರಿಸಿದ್ದೇವೆ. ಕಳೆದ ವರ್ಷಕ್ಕಿಂತ ₹31 ಸಾವಿರ ಕೋಟಿ ಬಂಡವಾಳ ವೆಚ್ಚ ಹೆಚ್ಚಾಗಿದೆ. ಇದಲ್ಲದೆ ಹೆಚ್ಚುವರಿವಾಗಿ ₹50 ಸಾವಿರ ಕೋಟಿಗಳನ್ನು ಗ್ಯಾರಂಟಿಗಳಿಗೆ ತೆಗೆದಿಟ್ಟಿದ್ದೇವೆ. ಒಟ್ಟು ₹1.33 ಲಕ್ಷ ಕೋಟಿಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ತೆಗೆದಿಟ್ಟಿದ್ದೇವೆ. ಖಜಾನೆ ಖಾಲಿಯಾದರೆ ಇದೆಲ್ಲ ಸಾಧ್ಯವಾಗುತ್ತಿತ್ತೇ? ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

ಹಾವೇರಿ ಜಿಲ್ಲೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಶ್ರೇಷ್ಠತೆ ಪಡೆದಿರುವ ಜಿಲ್ಲೆ. ಈ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ನೀವು ಕಾಂಗ್ರೆಸ್‌ಗೆ, ಈ ಸರ್ಕಾರಕ್ಕೆ ಕೊಟ್ಟ ಮತಗಳಿಗೆ ನಾವು ಘನತೆಯಿಂದ ಗೌರವಿಸಿದ್ದೇವೆ. ಚುನಾವಣೆಗೆ ಮೊದಲು ಕೊಟ್ಟ ಮಾತಿನಂತೆ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿಗೊಳಿಸಿ ನಿಮ್ಮ ಮತಗಳ ತೂಕ ಹೆಚ್ಚಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಕ್ಕರೆ ಶಿವಾನಂದ ಪಾಟೀಲ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಣ್ಮಗು ಹುಟ್ಟಿದರೆ ಹೊನ್ನಕ್ಕೆ ಸಮಾನ
ಪ್ರಪಂಚಕ್ಕೆ ಕೊಟ್ಟಿರುವ ಶ್ರೇಷ್ಠ ಕೊಡುಗೆ ರಾಮಾಯಣ: ಗಂಗಾಧರ ಗೌಡ