ಬಿಜೆಪಿ ಧೋರಣೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಧರಣಿ
ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರಿಗೆ ಉಚಿತ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರಿಂದ ಜನಸಾಮಾನ್ಯರಿಗೆ, ಬಡವರಿಗೆ ಬಹಳ ಅನುಕೂಲವಾಗಿದೆ. ಆದರೆ, ಬಿಜೆಪಿ ಈ ಯೋಜನೆಗಳ ವಿರುದ್ಧ ಅಪಪ್ರಚಾರ ಹಾಗೂ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಆರೋಪಿಸಿದರು.
ನಗರದ ಜಯದೇವ ಸರ್ಕಲ್‌ನಲ್ಲಿ ಶನಿವಾರ ರಾಜ್ಯ ಸರ್ಕಾರದ ಜನಪರ ಯೋಜನೆಗಳಾದ ಗ್ಯಾರಂಟಿ ಯೋಜನೆ ವಿರೋಧಿಸುತ್ತಿರುವ ರಾಜ್ಯ ಬಿಜೆಪಿಯ ಧೋರಣೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಶನಿವಾರ ಹಮ್ಮಿಕೊಂಡಿದ್ದ ಧರಣಿ, ಪ್ರತಿಭಟನೆಯಲ್ಲಿ ಮಾತನಾಡಿದರು.ಒಂದು ಕಡೆ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿ ಬಿಜೆಪಿ, ಇನ್ನೊಂದೆಡೆ ದೇಶದ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನೇ ನಕಲು ಮಾಡಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ದ್ವಿಮುಖ ನಡೆ ಪ್ರದರ್ಶಿಸುತ್ತಿದೆ. ಸಮಾಜದಲ್ಲಿ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಿ ಸಾಮಾಜಿಕ ಸಾಮರಸ್ಯ ಹಾಳು ಮಾಡುವ ಮೂಲಕವೇ ಬಿಜೆಪಿ ರಾಜಕಾರಣ ಮಾಡುತ್ತ ಬಂದಿದೆ ಎಂದರು.
ಕೇಂದ್ರ ಸರ್ಕಾರ ಹೆದ್ದಾರಿ ವಾಹನ ಸೇವಾ ಶುಲ್ಕ ಹೆಚ್ಚಿಸಿದೆ. ಔಷಧಗಳ ದರ ಹೆಚ್ಚಿಸಿದೆ. ನರೇಗಾ ಯೋಜನೆಗೆ ಅಗತ್ಯ ಅನುದಾನ ಕೊಡುತ್ತಿಲ್ಲ. ಪೆಟ್ರೋಲ್, ಡಿಸೇಲ್ ಮೇಲಿನ ಕೇಂದ್ರ ತೆರಿಗೆ ಕಡಿತಗೊಳಿಸಿ ಜನರಿಗೆ ಸಹಾಯ ಮಾಡುತ್ತಿಲ್ಲ. ಇತ್ತ ರಾಜ್ಯ ಬಿಜೆಪಿ ಇಬ್ಭಾಗವಾಗಿದ್ದು ಸಮಾಜದಲ್ಲಿ ಕೇವಲ ಗಲಾಟೆ, ಕಲಹಗಳಿಗೆ ಪ್ರಚೋದನೆ ಕೊಡುತ್ತ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.
ಪಕ್ಷದ ಮುಖಂಡರು, ಕಾರ್ಯಕರ್ತರು ಬಿಜೆಪಿಯ ಧೋರಣೆ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಬಿಜೆಪಿ ವಿರುದ್ಧದ ಬರಹಗಳುಳ್ಳ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು.ಪಕ್ಷದ ಮುಖಂಡರಾದ ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ಪಾಲಿಕೆ ಮಾಜಿ ಮೇಯರ್ ಕೆ.ಚಮನ್‌ಸಾಬ್, ಪಾಲಿಕೆ ಮಾಜಿ ಸದಸ್ಯರಾದ ಎ. ನಾಗರಾಜ್, ಶಾಮನೂರು ಬಸವರಾಜ್, ಗಡಿಗುಡಾಳ್ ಮಂಜುನಾಥ್, ಎಸ್.ಮಲ್ಲಿಕಾರ್ಜುನ್, ಮೈನುದ್ದೀನ್, ಡೋಲಿ ಚಂದ್ರು, ಪುಷ್ಪಾ ಪಾಟೀಲ್, ಮಂಗಳಮ್ಮ, ದಾಕ್ಷಾಯಣಮ್ಮ, ರಾಜೇಶ್ವರಿ ಭಾಗವಹಿಸಿದ್ದರು.