ಬಳ್ಳಾರಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಗಮನಾರ್ಹ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ವಿಜಯೋತ್ಸವ ಆಚರಿಸಿದರು.ಇಲ್ಲಿನ ಗಡಗಿಚನ್ನಪ್ಪ ವೃತ್ತದಲ್ಲಿ ಜಮಾಯಿಸಿದ ಪಕ್ಷದ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಕ್ಷದ ಧ್ವಜಗಳನ್ನು ಹಾರಿಸಿ ಭಾರತ್ ಮಾತಾ ಕಿ ಜೈ, ಬಿಜೆಪಿಗೆ ಜಯವಾಗಲಿ, ನರೇಂದ್ರ ಮೋದಿಗೆ ಜಯವಾಗಲಿ ಇತ್ಯಾದಿ ಘೋಷಣೆಗಳನ್ನು ಕೂಗಿದರು.ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಅನಿಲಕುಮಾರ್ ಮೋಕಾ, ಪಕ್ಷದ ಮಹಿಳಾ ಮೋರ್ಚಾದ ರಾಜ್ಯ ಮುಖಂಡರಾದ ಡಾ.ಅರುಣಾ ಕಾಮಿನೇನಿ, ಪಶ್ಚಿಮ ಬಂಗಾಳದಲ್ಲಿ ಪಕ್ಷದ ಸಾಧನೆ ದೇಶದಾದ್ಯಂತ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಾಬಲ್ಯ ಹೊಂದಿದ್ದ ಪ್ರಾದೇಶಿಕ ಪಕ್ಷವಾದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಮಣಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಪಶ್ಚಿಮ ಬಂಗಾಳದ ಫಲಿತಾಂಶವು ಪಕ್ಷದ ನೀತಿಗಳ ಮೇಲೆ ಜನರ ವಿಶ್ವಾಸವನ್ನು ಪ್ರತಿಬಿಂಬಿಸಿದೆ.
ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿಗೆ ಹೊಸ ಹುರುಪು ನೀಡಿದೆ. ನಿರೀಕ್ಷೆಯಂತೆ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಉಳಿದ ರಾಜ್ಯಗಳಲ್ಲೂ ಬಿಜೆಪಿ ಗಮನಾರ್ಹ ಮತಗಳನ್ನು ಪಡೆದು ಪಕ್ಷ ಸಂಘಟನೆಯ ಮುನ್ಸೂಚನೆ ನೀಡಿದೆ. ಬರುವ ದಿನಗಳಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳತ್ತ ಗಮನ ಹರಿಸಲಾಗುವುದು. ದೇಶದ ಎಲ್ಲ ರಾಜ್ಯಗಳಲ್ಲಿ ಬಿಜೆಪಿಯ ಪತಾಕೆ ಹಾರಿಸಲಾಗುವುದು ಎಂದು ತಿಳಿಸಿದರು.ಪಕ್ಷದ ಹಿರಿಯ ಮುಖಂಡ ಕೆ.ಎ. ರಾಮಲಿಂಗಪ್ಪ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಪಕ್ಷದ ಮುಖಂಡರಾದ ಕೆ.ಎಸ್. ದಿವಾಕರ, ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಗುಡಿಗಂಟಿ ಹನುಮಂತು, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹಂಪಿ ರಮಣ, ಚಾಂದಿನಿ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.
ಬಂಗಾಳದಲ್ಲಿ ಬಿಜೆಪಿ ಗೆಲುವು ಹಿನ್ನೆಲೆಯಲ್ಲಿ ಕಾರ್ಯಕರ್ತರು ನಗರದಲ್ಲಿ ಬೈಕ್‌ಗಳ ಮೇಲೆ ಪಕ್ಷದ ಬಾವುಟಗಳನ್ನು ಹಿಡಿದು ಮೆರವಣಿಗೆ ಮಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪರ ಘೋಷಣೆಗಳನ್ನು ಕೂಗಿದರು. ಅಖಂಡ ಬಳ್ಳಾರಿ ಜಿಲ್ಲೆಯ ನಾನಾ ಕಡೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.