ಬಳ್ಳಾರಿ: ಯಾವುದೇ ವ್ಯಕ್ತಿ ಅಥವಾ ಧರ್ಮ ಬೋಧಕ ತನ್ನ ಧರ್ಮದ ಬಗ್ಗೆ ವಿಪರೀತ ಅಭಿಮಾನ ಬೆಳೆಸುತ್ತಾ ಹೋದಲ್ಲಿ ಕ್ರಮೇಣ ಅದು ಮತಾಂಧತೆಯಾಗಿ ಬದಲಾಗುತ್ತದೆ ಎಂದು ಗದಗ-ವಿಜಯಪುರ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ವಿವರಿಸಿದರು.
ಮತಾಂಧತೆ ಅನ್ಯ ಮತಗಳ ದ್ವೇಷಕ್ಕೆ ಕಾರಣವಾಗುತ್ತದೆ. ಅನ್ಯ ಮತಗಳ ದ್ವೇಷ ರಕ್ತಪಾತಕ್ಕೆ ಕಾರಣವಾಗುತ್ತದೆ. ಜಗತ್ತಿನಲ್ಲಿ ಎಷ್ಟೋ ರಕ್ತಪಾತಗಳಿಗೆ ಮತಾಂಧರೇ ಕಾರಣವಾಗಿದ್ದಾರೆ. ಕೆಲವು ದೇಶಗಳಲ್ಲಿ ಮತಾಂಧರು ನರಕವನ್ನೇ ಸೃಷ್ಟಿಸಿದ್ದಾರೆ ಎಂದರು.
ಧರ್ಮದ ಬಗ್ಗೆ ಸಮತೋಲನದ ದೃಷ್ಟಿಕೋನ ಅಗತ್ಯ. ಬೇರೆ ಧರ್ಮದ ವಿಚಾರಗಳನ್ನು ಒಪ್ಪದೇ ಇರಬಹುದು. ಹಾಗಂತ ಆ ಧರ್ಮವನ್ನು ತೆಗಳುವುದು ಸರಿಯಲ್ಲ. ಸ್ವಾಮಿ ವಿವೇಕಾನಂದರು ಸಹ ಇದನ್ನೇ ಹೇಳಿದರು. ನನ್ನ ಧರ್ಮವನ್ನು ವಿಮರ್ಶೆ ಮಾಡಿ ಎಂದು ಆಹ್ವಾನ ಕೊಡುತ್ತಿದ್ದರು. ವಿಮರ್ಶೆ ಮಾಡಿ ಸತ್ಯ ಕಂಡಲ್ಲಿ ಮಾತ್ರ ಒಪ್ಪಿಕೊಳ್ಳಿ ಎಂದು ಹೇಳುತ್ತಿದ್ದರು. ವಿಪರ್ಯಾಸ ಸಂಗತಿ ಎಂದರೆ ಯಾವ ಧರ್ಮಕ್ಕೆ ಯುವಜನತೆ ಇಂದು ಮಾರು ಹೋಗುತ್ತಿದ್ದಾರೆಯೋ ಆ ಧರ್ಮಕ್ಕೆ ಸನ್ಯಾಸ ಪರಂಪರೆಯೇ ಇಲ್ಲ. ಅಂತಃಸತ್ವವೂ ಇಲ್ಲ. ಯಾವುದೇ ಧರ್ಮ ಸಂಖ್ಯಾಬಲದಿಂದ ಶ್ರೇಷ್ಠತೆ ಪಡೆದುಕೊಳ್ಳುವುದಿಲ್ಲ. ಹಿಂದೂ ಧರ್ಮದ ಶಕ್ತಿ, ಸತ್ವ ಏನಿದೆ ಎಂಬುದು ಅರಿಯದ ಇಂದಿನ ಯುವ ಸಮುದಾಯ ಹಾಕಿದ ಅಂಗಿಯನ್ನು ಬದಲಾಯಿಸಿದಷ್ಟೇ ಸುಲಭವಾಗಿ ಧರ್ಮವನ್ನು ಬದಲಾಯಿಸುತ್ತಿದ್ದಾರೆ.ನಾನು ಯಾವ ಧರ್ಮಕ್ಕೆ ಸೇರಿದ್ದೇನೆ. ನನ್ನ ಧರ್ಮದ ಮಹತ್ವ ಏನು? ಹಿನ್ನಲೆ ಏನು? ಪರಂಪರೆ ಏನು? ಎಂಬುದು ಗೊತ್ತಿಲ್ಲದೇ ಅನ್ಯ ಧರ್ಮಗಳತ್ತ ಮೊರೆ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀಗಳ ಉಪನ್ಯಾಸ ಶುರು ಮುನ್ನ ರಾಜ್ಯೋತ್ಸವ ಪುರಸ್ಕೃತ ಹಿರಿಯ ರಂಗಭೂಮಿ ಕಲಾವಿದೆ ವೀಣಾ ಆದವಾನಿ ಅವರು ಹೇಮರೆಡ್ಡಿ ಮಲ್ಲಮ್ಮ ನಾಟಕದ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಮುದ್ದಟನೂರು ಎಚ್.ತಿಪ್ಪೇಸ್ವಾಮಿ ಹಾರ್ಮೋನಿಯಂ, ಯೋಗೀಶ್ ಸಂಗನಕಲ್ಲು ತಬಲಾ ಸಾಥ್ ನೀಡಿದರು.