- ಬಿಜೆಪಿಯಲ್ಲಿ ಪ್ರತಿ ಕ್ಷೇತ್ರದಲ್ಲೂ ಆಕಾಂಕ್ಷಿಗಳ ಪಡೆ ಇದೆ: ಸ್ವಾಭಿಮಾನಿ ಬಳಗ ಜಿ.ಬಿ.ವಿನಯಕುಮಾರ್‌ಗೆ ಟಾಂಗ್ - - -
ದಾವಣಗೆರೆ ದಕ್ಷಿಣದಲ್ಲಿ ಐತಿಹಾಸಿಕ ಚುನಾವಣೆ ನಡೆದಿದ್ದು, ಬಿಜೆಪಿಯ ಎಲ್ಲ ರಾಜ್ಯ, ಜಿಲ್ಲಾ ಮುಖಂಡರು, ಸಮಸ್ತ ಕಾರ್ಯಕರ್ತರ ಒಗ್ಗಟ್ಟು, ಸಂಘಟಿತ ಪ್ರಯತ್ನದ ಫಲವಾಗಿ ಇಲ್ಲಿನ ಉಪ ಚುನಾವಣೆಯಲ್ಲಿ ಶೇ.100ಕ್ಕೆ ನೂರರಷ್ಟು ಬಿಜೆಪಿಯೇ ಜಯ ಸಾಧಿಸಲಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣದಲ್ಲಿ ಇದೇ ಮೊದಲ ಸಲ ಬಿಜೆಪಿ ಜಯ ಸಾಧಿಸಲಿದ್ದು, ನಮ್ಮ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಗೆಲುವು ಸಾಧಿಸುವುದು ಶತಃಸಿದ್ಧವಾಗಿದೆ. ಈಗಾಗಲೇ ಕಾಂಗ್ರೆಸ್ಸಿನವರ ನಡೆ, ನುಡಿ, ವರ್ತನೆಗಳೇ ಬಿಜೆಪಿ ಗೆದ್ದಿರುವುದನ್ನು ಪುಷ್ಟೀಕರಿಸುತ್ತಿವೆ ಎಂದರು.ದಕ್ಷಿಣ ಉಪ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ರಾಜ್ಯ ಮತ್ತು ಜಿಲ್ಲಾ ನಾಯಕರು, ಉಭಯ ಪಕ್ಷಗಳ ಮುಖಂಡರು, ಪದಾಧಿಕಾರಿಗಳು, ನಮ್ಮೆಲ್ಲಾ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಒಟ್ಟಾಗಿ, ಒಗ್ಗಟ್ಟಿನಿಂದ ಬಿಜೆಪಿ ಗೆಲುವಿಗಾಗಿ ಮಾಡಿದ ಪರಿಶ್ರಮಕ್ಕೆ ಮೇ 4ರಂದು ಉತ್ತಮ ಪ್ರತಿಫಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ನಾಯಕರಿಗೆ ಕೊರತೆ ಇಲ್ಲ. ಎಲ್ಲ ಕ್ಷೇತ್ರದಲ್ಲೂ ಏಳೆಂಟು ಜನ ಸಮರ್ಥ ಅಭ್ಯರ್ಥಿಗಳಿದ್ದಾರೆ. ನಮ್ಮ ಪಕ್ಷದವರೇ ಅಲ್ಲದವರನ್ನು ಕರೆ ತಂದು, ಟಿಕೆಟ್ ಕೊಡುವಂತಹ ಸ್ಥಿತಿಯು ಬಿಜೆಪಿಗೆ ಬಂದಿಲ್ಲ. ಬರುವುದೂ ಇಲ್ಲ. ಹಿಂದೆ ಯಾವಾಗಲೋ ಅಂತಹ ಸ್ಥಿತಿ ಇತ್ತು. ಟಿಕೆಟ್ ಕೊಡುತ್ತೇವೆಂದರೂ ಅಭ್ಯರ್ಥಿಗಳು ಇರುತ್ತಿರಲಿಲ್ಲ. ಈಗ ಅಂತಹ ಸ್ಥಿತಿ ಇಲ್ಲ. ಜಿಲ್ಲೆಯ ಪ್ರತಿ ಕ್ಷೇತ್ರದಲ್ಲೂ ಏಳೆಂಟು ಜನ ಆಕಾಂಕ್ಷಿಗಳಿದ್ದಾರೆ ಎಂದು ಅವರು ತಿಳಿಸಿದರು.
ಅಲ್ಲದೇ, ವಿನಯ್ ಅಷ್ಟೊಂದು ಸ್ಪೀಡ್ ಸಹ ಒಳ್ಳೆಯದಲ್ಲ. ಹೇಳಿಕೆಗಳ ಮೂಲಕ ನಾಯಕರಲ್ಲೇ ಗೊಂದಲ ಮೂಡಿಸುವುದನ್ನು ಬಿಡಲಿ. ಜಿ.ಬಿ.ವಿನಯಕುಮಾರ ಹಿಂದೆ ಯಾರಿದ್ದಾರೆಂಬುದು ನಮಗೂ ಗೊತ್ತಿದೆ. ತಮ್ಮ ಹಿಂದೆ ಯಾರಿದ್ದಾರೆ ಎಂಬುದನ್ನು ಸ್ವತಃ ವಿನಯಕುಮಾರ ಹೇಳುವಂತೆ ಕಾಲವೇ ಉತ್ತರ ಕೊಡಲಿದೆ. ಬಿಜೆಪಿ ಎಂದೆಂದಿಗೂ ಪಕ್ಷವನ್ನು ಕಟ್ಟಿ, ಬೆಳೆಸಿದವರನ್ನು ಮರೆಯುವುದಿಲ್ಲ. ಮೋಸ ಮಾಡುವುದಿಲ್ಲ. ಒಂದಲ್ಲ ಒಂದು ರೀತಿ ಅವಕಾಶ, ಸ್ಥಾನಮಾನ ನೀಡುವ ಪಕ್ಷವಾಗಿದೆ. ಅದಕ್ಕೆ ಶ್ರೀನಿವಾಸ ದಾಸಕರಿಯಪ್ಪ ಸಾಕ್ಷಿ ಎಂದು ಹೇಳಿದರು.
ಜಿಲ್ಲಾ ವಕ್ತಾರ ಬಿ.ಎಂ. ಸತೀಶ ಕೊಳೇನಹಳ್ಳಿ ಮಾತನಾಡಿ, ತಾವು ಅಹಿಂದ ನಾಯಕರೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣ ಕ್ಷೇತ್ರದ ವಿಷಯದಲ್ಲಿ ಅಲ್ಪಸಂಖ್ಯಾತ ಮುಖಂಡರನ್ನೇ ತೆಗೆದು ಹಾಕಿದರೂ ಸುಮ್ಮನೇ ಇದ್ದಾರೆ. ಅಹಿಂದ ಬರೀ ಅಧಿಕಾರಕ್ಕೆ ಮಾತ್ರ ಎಂಬುದು ಇದರಿಂದ ಗೊತ್ತಾಗುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಅಲ್ಪಸಂಖ್ಯಾತ ಮುಖಂಡರ ತಲೆದಂಡ ಮಾಡುವ ಕೆಲಸ ಕಾಂಗ್ರೆಸ್ಸಿನಲ್ಲ ಶುರುವಾಗಿದೆ. ಅಲ್ಪಸಂಖ್ಯಾತ ಮುಸ್ಲಿಮರು ಕಾಂಗ್ರೆಸ್ಸಿನ ಇಂತಹ ಅವಕಾಶವಾದಿ ರಾಜಕಾರಣದ ಬಗ್ಗೆ ಜಾಗ್ರತೆ ವಹಿಸಲಿ ಎಂದರು.
- - -