ಯಾದಗಿರಿ/ಸುರಪುರ :ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಂಥಣಿ ಸಮೀಪದ ಶಾಂತಪುರ ಕ್ರಾಸ್ ಬಳಿ ಶುಕ್ರವಾರ ಬೆಳಗ್ಗೆ ಖಾಸಗಿ ಬಸ್ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ 9 ಜನರು ಸಜೀವ ದಹನವಾಗಿದ್ದಾರೆ.
ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸುಟ್ಟು ಭಸ್ಮವಾಗಿವೆ. ಕಾರಿನಲ್ಲಿದ್ದ ರಾಯಚೂರು ಜಿಲ್ಲೆ ಸಿರವಾರದ ಒಂದೇ ಕುಟುಂಬದ 8 ಜನರು ಗುರುತು ಸಿಗದಷ್ಟು ಸುಟ್ಟು ಹೋಗಿದ್ದಾರೆ. ತೀವ್ರ ತರಹದ ಸುಟ್ಟ ಗಾಯಗಳಿಂದ ನರಳುತ್ತಿದ್ದ ಮಗುವೊಂದು ಕಲಬುರಗಿಯಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದೆ. ಬಸ್‌ನಲ್ಲಿದ್ದ 20 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಸುದ್ದಿ ತಿಳಿದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಮೃತರನ್ನು ರಾಯಚೂರು ಜಿಲ್ಲೆ ಸಿರವಾರ ತಾ.ಪಂ ಸದಸ್ಯ ಕೃಷ್ಣಾ ನಾಯಕ್ (52), ಪತ್ನಿ ಅನಂತಕಲಾ (45), ಅಳಿಯ ಹಾಗೂ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ಶರಣಪ್ಪ (36), ಪುತ್ರಿ ನಿಸರ್ಗ (30), ಶರಣಪ್ಪ ಅವರ ಮಕ್ಕಳಾದ ಸಿದ್ಧಾರ್ಥ (3), ಅದ್ವಿಕ್ (5), ಶ್ರೀನಿಧಿ (ಒಂದೂವರೆ ವರ್ಷ), ಸಂಬಂಧಿಗಳಾದ ಶಶಿಕಲಾ ರಾಘವೇಂದ್ರ (30) ಹಾಗೂ ಚಂದನ್ ರಾಘವೇಂದ್ರ (8) ಎಂದು ಗುರುತಿಸಲಾಗಿದೆ. 10 ವರ್ಷದ ವಿರಾಟ್ ರಾಘವೇಂದ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಮಾವಾಸ್ಯೆ ನಿಮಿತ್ತ ಕೃಷ್ಣಾ ನಾಯಕ್ ಕುಟುಂಬದ 10 ಮಂದಿ ಕಾರಿನಲ್ಲಿ ಮನೆದೇವರು ಸುರಪುರದ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿ, ಸಿರವಾರಕ್ಕೆ ವಾಪಸ್ಸಾಗುತ್ತಿದ್ದರು. ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಶಾಂತಪುರ ಕ್ರಾಸ್ ಬಳಿ ಇವರು ಪ್ರಯಾಣಿಸುತ್ತಿದ್ದ ಕಿಯಾ ಸೋನೆಟ್ ಕಾರಿನ ಟೈರ್ ಸಿಡಿದಿದ್ದರಿಂದ ನಿಯಂತ್ರಣ ತಪ್ಪಿ ಬೆಂಗಳೂರಿನಿಂದ ಕಲಬುರಗಿಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆಯಿತು. ಕ್ಷಣಾರ್ಧದಲ್ಲಿ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತು.
ಘಟನೆಗೂ ಎರಡು ನಿಮಿಷ ಮುನ್ನ ಬಸವರಾಜ್ ಎನ್ನುವ ಸಂಬಂಧಿ ಜೊತೆ ಕೃಷ್ಣಾ ನಾಯಕ್ ಫೋನ್ನಲ್ಲಿ ಮಾತನಾಡಿದ್ದರು ಎಂದು ತಿಳಿದು ಬಂದಿದೆ. ತಮ್ಮ ಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ಬಸವರಾಜ್ ಅವರು ಕೃಷ್ಣಾ ನಾಯಕ್ ಅವರನ್ನು ಆಹ್ವಾನಿಸಿದ್ದು, ಕಾರ್ಯಕ್ರಮಕ್ಕೆ ಖಂಡಿತವಾಗಿ ಬರುವುದಾಗಿ ತಿಳಿಸಿದ್ದರು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.