(ಓಕೆ) ಬಿಜೆಪಿ, ಸಂಘ ಪರಿವಾರ, ಎಬಿವಿಪಿ ಇವೆಲ್ಲ ಸುಳ್ಳಿನ ಕಾರ್ಖಾನೆಗಳು

KannadaprabhaNewsNetwork |  
Published : Dec 18, 2023, 02:00 AM IST
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಸಿಎಂ ಸಿದ್ಧರಾಮಯ್ಯ ಮಾತನಾಡಿದರು.  | Kannada Prabha

ಸಾರಾಂಶ

ಬಿಜೆಪಿ, ಸಂಘ ಪರಿವಾರ, ಎಬಿವಿಪಿ ಇವೆಲ್ಲ ಸುಳ್ಳಿನ ಕಾರ್ಖಾನೆಗಳು. ಇವರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಗದಗದಲ್ಲಿ ಸರ್ಕಾರಿ ಬಾಲಕಿಯರ ಬಾಲ ಮಂದಿರ ಕಟ್ಟಡ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಹರಿಹಾಯ್ದರು.

ನಮ್ಮ ಸರ್ಕಾರ ಭ್ರಷ್ಟಾಚಾರ ಸಹಿಸುವುದಿಲ್ಲ-ಸಿಎಂ ಸಿದ್ದರಾಮಯ್ಯಗದಗ: ಬಿಜೆಪಿ, ಸಂಘ ಪರಿವಾರ, ಎಬಿವಿಪಿ ಇವೆಲ್ಲ ಸುಳ್ಳಿನ ಕಾರ್ಖಾನೆಗಳು. ಇವರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು. ಭಾನುವಾರ ಇಲ್ಲಿ ಸರ್ಕಾರಿ ಬಾಲಕಿಯರ ಬಾಲ ಮಂದಿರ ಕಟ್ಟಡ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಶಕ್ತಿ ಯೋಜನೆ ಜಾರಿ ಮಾಡಿದ ನಂತರ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಎಬಿವಿಪಿ ಪ್ರತಿಭಟನೆ ಮಾಡುವುದು, ದೇಶವನ್ನು ಹಿಂದು ರಾಷ್ಟ್ರ ಮಾಡುತ್ತೇವೆ ಎನ್ನುವ ಮೂಲಕ ಸುಳ್ಳನ್ನೇ ಹೇಳುತ್ತಿದ್ದಾರೆ. ಹಾಗಾಗಿ ನಾನು ಅವೆಲ್ಲ ಸುಳ್ಳಿನ ಕಾರ್ಖಾನೆ ಎಂದು ಸ್ಪಷ್ಟವಾಗಿ ಹೇಳುತ್ತೇನೆ ಎಂದರು. ಭ್ರಷ್ಟಾಚಾರದ ವಿಷಯದಲ್ಲಿ ನಮ್ಮ ಸರ್ಕಾರ ಬಹಳ ಸ್ಪಷ್ಟ ನಿಲುವು ಹೊಂದಿದೆ. ಯಾವುದೇ ಕಾರಣಕ್ಕೂ ಅದನ್ನು ನಾವು ಸಹಿಸುವುದಿಲ್ಲ. ಯಾವುದೇ ಭ್ರಷ್ಟಾಚಾರದ ಪ್ರಕರಣಗಳಿದ್ದರೆ ಅದನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ. ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ನಾವು ಹಿಂದಿನ ಸರ್ಕಾರದ ಶೇ. 40 ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ಮಾಡಿಸುತ್ತಿದ್ದೇವೆ. ಆರೋಪಗಳು ಸಾಬೀತಾದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಂತರಾಜು ವರದಿಯ ಕುರಿತು ಮಾತನಾಡಿದ ಅ‍ವರು, ವರದಿ ಇನ್ನೂ ಸಲ್ಲಿಸಿಲ್ಲವಾದ್ದರಿಂದ ಸ್ವೀಕಾರ ಮಾಡುವುದು ಹೇಗೆ? ಎಂದರು. ವರದಿ ಕೊಟ್ಟ ಮೇಲೆ ಸ್ವೀಕಾರ ಮಾಡುವ ಪ್ರಶ್ನೆ ಉದ್ಭವವಾಗುತ್ತದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ವರದಿ ಕೊಟ್ಟಿಲ್ಲ. ಕೊಡಲು ಬಂದಾಗ ವಿಚಾರ ಮಾಡುತ್ತೇವೆ. ವರದಿ ವೈಜ್ಞಾನಿಕವಲ್ಲ ಎಂದು ಕೆಲವರು ವಿಚಾರ ಮಾಡುತ್ತಿದ್ದು, ವರದಿ ಬರದೆ, ಏನಿದೆ ಎಂದು ತಿಳಿಯದೇ ಕೇವಲ ಊಹಾಪೋಹದ ಮೇಲೆ ಮಾತನಾಡುತ್ತಿದ್ದಾರೆ. ವರದಿ ಬರಲಿ ನೋಡೋಣ ಎಂದರು.

ಶ್ರೀ ಶೈಲ ಜಗದ್ಗುರು ಚನ್ನಸಿದ್ಧರಾಮ ಸ್ವಾಮೀಜಿ 2 ವರ್ಷಗಳ ಆನಂತರ ವರದಿ ಬಿಡುಗಡೆ ಮಾಡಲಿ ಎಂದು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆಯಾಗಲಿ ನನಗೇ ಆಗಲಿ ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ ಅಥವಾ ನಿಮಗೆ (ಮಾಧ್ಯಮಗಳಿಗೆ) ತಿಳಿದಿದೆಯೇ? ವರದಿ ಬರುವ ಮುನ್ನವೇ ವೈಜ್ಞಾನಿಕವಲ್ಲ ಎನ್ನುವುದು ಸರಿಯಲ್ಲ, ಮುಖ್ಯಮಂತ್ರಿಯಾಗಿ ನನಗೇ ಗೊತ್ತಿಲ್ಲ ಎಂದರು.

ಶಕ್ತಿ ಯೋಜನೆಗೆ ಸರ್ಕಾರ ಮೀಸಲಿಟ್ಟ ಹಣ ಪೂರ್ಣಗೊಂಡಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಯೋಜನೆಗೆ ಎಷ್ಟು ಹಣ ಖರ್ಚಾಗುತ್ತದೆಯೋ ಅಷ್ಟು ಹಣ ಒದಗಿಸಲಾಗುವುದು, ಶಕ್ತಿ ಯೋಜನೆಗೆ ಪ್ರತಿ ವರ್ಷ ವೆಚ್ಚವಾಗುವ ಹಣವನ್ನು ಕೆಎಸ್‌ಆರ್‌ಟಿಸಿಗೆ ಸರ್ಕಾರ ತುಂಬಿ ಕೊಡಲಿದೆ. ಬಸ್ಸುಗಳ ದುರಸ್ತಿ ಹಾಗೂ ಹೊಸ ಬಸ್ಸುಗಳ ಖರೀದಿಯೂ ಆಗಲಿದೆ, ರಿಪೇರಿಗೆ ಅನುದಾನವನ್ನು ಒದಗಿಸಲಾಗಿದೆ ಎಂದರು. ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎನ್ನುವ ಪ್ರಶ್ನೆಗೆ ಕೊಂಚ ಕಾರವಾಗಿಯೇ ಪ್ರತಿಕ್ರಿಯೆ ನೀಡಿದ ಅವರು, ನವೆಂಬರ್ ಅಂತ್ಯದವರೆಗೆ ಹಿಂದಿನ ಸರ್ಕಾರ ₹70,814 ಕೋಟಿ ಅಭಿವೃದ್ಧಿಗೆ ಖರ್ಚು ಮಾಡಿತ್ತು. ನಮ್ಮ ಸರ್ಕಾರ ₹73,928 ಕೋಟಿ ವೆಚ್ಚ ಮಾಡಿದೆ. ಹಣವನ್ನು ಖರ್ಚು ಮಾಡಿಲ್ಲ ಎನ್ನುವುದು ಸುಳ್ಳು. ₹3000 ಕೋಟಿಗಳಷ್ಟು ಮೊತ್ತವನ್ನು ಹೆಚ್ಚು ವೆಚ್ಚ ಮಾಡಿದ್ದೇವೆ. ನಾವು ಸರ್ಕಾರ ರೂಪಿಸಿದ್ದು ಮೇ 20ಕ್ಕೆ, ಬಜೆಟ್ ಮಂಡಿಸಿದ್ದು ಜುಲೈನಲ್ಲಿ, ಅದು ಜಾರಿಯಾಗಿದ್ದು ಆಗಸ್ಟ್ 1ರಿಂದ. 4 ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, 5ನೇ ಗ್ಯಾರಂಟಿ ಜನವರಿಯಲ್ಲಿ ಪ್ರಾರಂಭವಾಗಲಿದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದರು.

ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚಿಸಲಾಗಿದೆಕೊರೋನಾ ಕೇರಳ ಮೂಲಕ ಇಡೀ ದೇಶದಲ್ಲಿ ಹೊಸ ತಳಿ ಶುರುವಾಗಿದೆ ಎನ್ನುವ ಬಗ್ಗೆ ವರದಿ ಗಮನಿಸಿದ್ದೇನೆ, ಈ ಬಗ್ಗೆ ಆರೋಗ್ಯ ಸಚಿವರು ಕೂಡಲೇ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮ ವಹಿಸಲು ಸೂಚಿಸಲಾಗಿದೆ. ಕೂಡಲೇ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು, ಸರ್ಕಾರ ಇದಕ್ಕೆ ವಿಶೇಷ ಗಮನ ನೀಡಿದೆ ಎಂದು ಸಿಎಂ ಹೇಳಿದರು.

ಯಾವ ತನಿಖೆಗಾದರೂ ಸಿದ್ಧಬೆಳಗಾವಿಯಲ್ಲಿ ಮಹಿಳೆ ಮೇಲಾದ ದೌರ್ಜನ್ಯ ಪ್ರಕರಣವನ್ನು ಎಲ್ಲಿಗೆ ಬೇಕಾದರೂ, ಯಾವ ತನಿಖೆಗೆ ಬೇಕಾದರೂ ವಹಿಸಲು ನಾನು ಸಿದ್ಧ. ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅದೇ ಮುಖ್ಯ. ನಮ್ಮ ಪೊಲೀಸರು ಕೂಡಾ ತನಿಖೆ ಮಾಡಲು ಸಮರ್ಥರಿದ್ದಾರೆ. ಹಾಗಾಗಿ ಈ ತನಿಖೆಯನ್ನು ನಮ್ಮ ಪೊಲೀಸರೇ ನಡೆಸುತ್ತಾರೆ ಎಂದು ಪರೋಕ್ಷವಾಗಿ ಸಿಎಂ ತಿಳಿಸಿದರು.ಬಡ್ಡಿ ಮನ್ನಾಕ್ಕೆ ಕಾಲಮಿತಿ ಇಲ್ಲ

ನಾನು ಈಗಾಗಲೇ ಸದನದಲ್ಲಿ ತಿಳಿಸಿದಂತೆ, ಕ್ಯಾಶ್ ಕಾರ್ಡ್ ಬ್ಯಾಂಕ್ ಸೊಸೈಟಿಗಳಲ್ಲಿ ರೈತರಿಗೆ ನೀಡಿರುವ ಸಾಲದ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದೇನೆ. ಇದಕ್ಕೆ ಯಾವುದೇ ಕಾಲಮಿತಿ ಇಲ್ಲ, ರೈತರು ತಮಗೆ ಅನುಕೂಲವಾದಾಗ ಸಾಲದ ಅಸಲನ್ನು ಮರುಪಾವತಿ ಮಾಡಿದರೆ ಬಡ್ಡಿ ಮನ್ನಾ ಸೌಲಭ್ಯ ಪಡೆಯಬಹುದು ಎಂದರು.

ರಾಜ್ಯದಲ್ಲಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಂದು ಸೂತ್ರ ರೂಪಿಸುತ್ತಿದ್ದಾರೆ. ಈ ಸಂಬಂಧ ಸಭೆ ನಡೆಸಿದ ನಂತರ ಪರಿಹಾರ ಸೂತ್ರವನ್ನು ಸರ್ಕಾರಕ್ಕೆ ನೀಡುತ್ತಾರೆ. ತದನಂತರ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಶಾಸಕ ಜಿ.ಎಸ್.ಪಾಟೀಲ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ