ಕನ್ನಡಪ್ರಭ ವಾರ್ತೆ ಮದ್ದೂರು
ಬಿಜೆಪಿ ನಾಯಕರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಾದ ಅನುದಾನ ತರಲು ಹೋರಾಟ ನಡೆಸಲಿ ಎಂದು ಶಾಸಕ ಕೆ.ಎಂ.ಉದಯ್ ಸವಾಲು ಹಾಕಿದರು.ಪಟ್ಟಣದ ಶಿವಪುರದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಸ್ಕೀಮ್ ಗಳ ಬಗ್ಗೆ ಟೀಕಿಸಿರುವ ಮಾಜಿ ಸಿಎಂಗಳಾದ ಬಿ.ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾತನಾಡುವ ಮೂಲಕ ಬಿಜೆಪಿ ನಾಯಕರು ಜನರಲ್ಲಿ ಇಲ್ಲಸಲ್ಲದ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ. ಇವರಿಗೆ ತಾಕತ್ತಿದ್ದರೆ ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಾದ ಅನುದಾನ ತರೋಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡುವ ಧೈರ್ಯ ಪ್ರದರ್ಶನ ಮಾಡಲಿ ಎಂದು ಟಾಂಗ್ ನೀಡಿದರು.ಗ್ಯಾರಂಟಿ ಯೋಜನೆಗಳು ಬಡವರ ಪರ ಕಾರ್ಯಕ್ರಮಗಳಾಗಿವೆ. ಮುಂದಿನ ಐದು ವರ್ಷ ಯೋಜನೆಗಳನ್ನು ಸ್ಥಗಿತಗೊಳಿಸುವ ಮಾತೇ ಇಲ್ಲ. ಮಾಗಡಿ ಶಾಸಕ ಬಾಲಕೃಷ್ಣರ ಅಭಿಪ್ರಾಯ ವೈಯಕ್ತಿಕವೇ ಹೊರತು ಪಕ್ಷದ ಅಭಿಪ್ರಾಯ ಅಲ್ಲ. ಯೋಜನೆಗಳು ಮುಂದಿನ ಐದು ವರ್ಷಗಳ ಕಾಲ ನಿರಂತರವಾಗಿ ಇರಲಿವೆ ಎಂದರು.
ಲೋಕಸಭಾ ಚುನಾವಣೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಪಕ್ಷದ ವರಿಷ್ಠರು ಸೂಕ್ತ ಸಮಯದಲ್ಲಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಲಿದ್ದಾರೆ. ಆ ನಂತರ ಅಭ್ಯರ್ಥಿಯನ್ನು ಗೆಲ್ಲಿಸುವುದೊಂದೇ ಜಿಲ್ಲೆಯ ಶಾಸಕರ ಜವಾಬ್ದಾರಿಯಾಗಿದೆ ಎಂದರು.ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಯಾರನ್ನೇ ಕಣಕ್ಕಿಳಿಸಿದರೂ ನಮಗೆ ಯಾವುದೇ ಆತಂಕ ಇಲ್ಲ. ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಜನ ಪರ ಯೋಜನೆಗಳು ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.