ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇಲ್ಲಿನ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರನ್ನು ಗೂಡ್ಸೆ ಕೊಂದರೆ ಬಿಜೆಪಿ ಗಾಂಧಿ ಅವರ ಸಿದ್ಧಾಂತಗಳಿಗೆ ತಿಲಾಂಜಲಿ ಇಡುತ್ತಿದೆ. ನರೇಗಾವನ್ನು ಜಿ ರಾಮ್ ಜಿ ಎಂದು ಬದಲಾಯಿಸಿ, ಕೇಂದ್ರದ ಅನುದಾನವನ್ನು ಶೇ.60ಕ್ಕೆ ಇಳಿಕೆ ಮಾಡಿ ರಾಜ್ಯ ಸರ್ಕಾರದ ಅನುದಾನ ಶೇ.40ಕ್ಕೆ ಹೆಚ್ಚಿಸಿದೆ ಎಂದು ಕಿಡಿಕಾರಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಕೊಡುವ ಮೂಲಕ ಅದ್ಭುತ ಸಾಧನೆ ಮಾಡಿದೆ. ಬಿಜೆಪಿಯವರಿಗೆ ಬದ್ಧತೆ ಇದ್ದರೆ ಈ ಗ್ಯಾರಂಟಿಗಳನ್ನು ನಿಲ್ಲಿಸಿ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಡಿಕೆಶಿ ಪರವಾಗಿ ಪದೇ ಪದೆ ಬ್ಯಾಟಿಂಗ್ ಮಾಡುತ್ತ ಬಂದಿರುವ ಮೊಹಮ್ಮದ ಇಕ್ಬಾಲ್ ಅವರಿಗೆ ಪಕ್ಷದಲ್ಲಿ ಲಕ್ಷಣರೇಖೆ ಅನ್ವಯ ಆಗಲ್ವಾ ಎನ್ನುವ ಪ್ರಶ್ನೆಗೆ, ನಾನು ಮೂರು ಜನ ಪ್ರಧಾನಮಂತ್ರಿಗಳ ಜತೆಗೆ ಕೆಲಸ ಮಾಡಿದ್ದೇನೆ. ಸಣ್ಣ ವಯಸ್ಸಿನಲ್ಲಿ ರಾಜೀವ್ ಗಾಂಧಿ ಅವರ ಜತೆಗೆ ಕೆಲಸ ಮಾಡಿದ್ದೇನೆ. ಪಿ.ವಿ. ನರಸಿಂಹರಾವ್, ಮನಮೋಹನ್ ಸಿಂಗ್ ಪಿಎಂ ಇದ್ದಾಗಲೂ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ನಮಗೆ ಇತಿಮಿತಿ ಇದೆ. ಯಾರೋ ಒಬ್ಬ ಶಾಸಕ ಮಾತನಾಡಿದರೆ ಅದು ಅವರ ವೈಯಕ್ತಿಕ ವಿಚಾರ. ನಾವು ಮಾತನಾಡಬೇಕಾದರೆ ನೂರು ಬಾರಿ ವಿಚಾರ ಮಾಡಿ ಮಾತನಾಡುತ್ತೇವೆ ಎಂದು ಹೇಳಿದರು.ಕೇಂದ್ರ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್ ಹಾಗೂ ಪ್ರಹ್ಲಾದ್ ಜೋಶಿ ಇಬ್ಬರು ಸಚಿವರು ಹಾಗೂ ಮೂವರು ರಾಜ್ಯ ಖಾತೆ ಸಚಿವರಿದ್ದರೂ ರಾಜ್ಯದ ಪರವಾಗಿ ಒಬ್ಬರೂ ಮಾತನಾಡುವುದಿಲ್ಲ. ಮಹದಾಯಿ, ಮೇಕೆದಾಟು ಹಾಗೂ ರಾಜ್ಯದ ಜಿಎಸ್ಟಿ ಪಾಲು ತರಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.
ಕಾಲೇಜುಗಳಲ್ಲೂ ಚುನಾವಣೆ ನಡೆಸಲು ಸಮಿತಿ ರಚನೆ ಮಾಡಿದ್ದಾರೆ. ಮೊದಲನೇ ಸಭೆ ಆಗಿದೆ. ಹೊಸ ಹೊಸ ವಿದ್ಯಾರ್ಥಿ ಮುಖಂಡರು ರಾಜಕೀಯಕ್ಕೆ ಬರಬೇಕು. ಅದಕ್ಕಾಗಿ ಕಾಲೇಜುಗಳಲ್ಲಿ ಚುನಾವಣೆಗಳು ಬೇಕು. ನಾನು ಸಹ ವಿದ್ಯಾರ್ಥಿ ಜೀವನದಲ್ಲಿ ಎನ್ಎಸ್‌ಯುಐ ಮೂಲಕ ಇಲ್ಲಿಯವರೆಗೆ ಬಂದಿದ್ದೇನೆ. ಮೊದಲು ಸರ್ಕಾರಿ ಕಾಲೇಜುಗಳಲ್ಲಿ ಚುನಾವಣೆ ಮಾಡುತ್ತೇವೆ ಎಂದರು.ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವುದು ಗ್ಯಾರಂಟಿ. ಯಾರ ಪರವಾಗಿಯೂ ಸರ್ಕಾರ ನಿಲ್ಲುವುದಿಲ್ಲ. ಜನಾರ್ಧನ ರೆಡ್ಡಿ ಅವರ ಇತಿಹಾಸ ಎಲ್ಲರಿಗೂ ಗೊತ್ತಿದೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡಲ್ಲ ಎಂದರು.
ರಾಜ್ಯದಲ್ಲಿ ಸಿಎಂ, ಸಿಡಿಎಂ ಎರಡು ವಿಚಾರ ಬಿಡಿ. ಸಂಪುಟ ವಿಸ್ತರಣೆ ಬಗ್ಗೆ ಹೇಳುತ್ತೇನೆ. ಈಗಾಗಲೇ ಎರಡು ವರ್ಷ ಆಗಿದೆ. ಮಂತ್ರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಶೇ.50ರಷ್ಟು ಸಚಿವರನ್ನು ಪಕ್ಷ ಸಂಘಟನೆಗೆ ಕೊಡಬೇಕು ಎಂದು ವರಿಷ್ಠರಿಗೆ ಹೇಳಿದ್ದೇವೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ.- ಸಲೀಂ ಅಹಮ್ಮದ್ ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ