-ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆರೋಪ । ವಿಜಯೇಂದ್ರ ಹಠಾವೋ ಆಂದೋಲನದ ಭರಾಟೆಯಲ್ಲಿ ಬಸವಣ್ಣನ ಅವಹೇಳನೆ
-----
ಕನ್ನಡಪ್ರಭ ವಾರ್ತೆ ಬೀದರ್
ಮಹಾತ್ಮಾ ಬಸವಣ್ಣನನ್ನು ಅವಹೇಳನ ಮಾಡಿದರೂ ಮೌನವಾಗಿರುವ ಬಿಜೆಪಿಯು ತನ್ನ ಒಳಜಗಳದ ಸ್ವಾರ್ಥಕ್ಕಾಗಿ ಬಸವಣ್ಣನ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಛೂ ಬಿಟ್ಟಂತಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.
ಅವರು ಈ ಕುರಿತು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬಸವಣ್ಣನವರ ಹೆಸರು ಹೇಳಿ ಮತ ಕೇಳುವ ಬಿಜೆಪಿ ತನ್ನದೇ ಪಕ್ಷದ ಶಾಸಕ, ಮುಖಂಡ ಬಸವಣ್ಣನ ಬಗ್ಗೆ ಕೀಳು ಹೇಳಿಕೆ ನೀಡುವ ಯತ್ನಾಳ್ ವಿರುದ್ಧ ತುಟಿ ಪಿಟಕ್ ಎನ್ನದಿರುವುದು ಬಸವ ಭಕ್ತರನ್ನು ಕೆರಳಿಸದೇ ಇರದು ಅಷ್ಟಕ್ಕೂ ಬರುವ ದಿನಗಳಲ್ಲಿ ಬಸವ ಭಕ್ತರು ಇದರ ಫಲ ನೀಡಲಿದ್ದಾರೆ ಎಂದು ಎಚ್ಚರಿಸಿದರು.
"ವಿಜಯೇಂದ್ರ ಹಠಾವೋ " ಆಂದೋಲನದ ಭರಾಟೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಸವಣ್ಣನವರ ಅವಹೇಳನ ಮಾಡಿದ್ದಾರೆ ಅವರ ಈ ವರ್ತನೆ ಕುರಿತಂತೆ ಬಿಜೆಪಿ ಜನತೆಗೆ ಉತ್ತರ ಕೊಡಬೇಕಿದೆ. ಇಲ್ಲವಾದಲ್ಲಿ ಬಿಜೆಪಿ ಸರ್ಕಾರ ಈಗಾಗಲೇ ಮೌನದ ಮೂಲಕ ಬಸವಾದಿ ಶರಣರ ವಿರೋಧಿ ನಿಲುವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಖಂಡ್ರೆ ತಿಳಿಸಿದರು.
ರಾಜ್ಯ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ನಮ್ಮ ನಾಯಕನ ಅಪಮಾನವನ್ನು ಸಹಿಸಲಾಗದು. ಯತ್ನಾಳ್ ಇರಲಿ ಯಾರೇ ಇರಲಿ ಮಹಾತ್ಮರ ವಿರುದ್ಧ ಕೀಳು ಸಂಸ್ಕೃತಿಯ ಮಾತುಗಳನ್ನಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಲಾಗುವದು ಎಂದು ತಿಳಿಸಿದರು.
ವಕ್ಫ್ ವಿಷಯವಾಗಿ ರಾಜ್ಯದ ಯಾವುದೇ ರೈತರಿಗೆ ಅನ್ಯಾಯವಾಗಲು ಬಿಡಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡದಂತೆ ಮತ್ತು ಮಾಡಿರುವ ನೋಟೀಸ್‌ಗಳನ್ನು ವಾಪಸ್ ಪಡೆಯುವಂತೆ ಅಲ್ಲದೆ ಖಾತೆ ಬದಲಾವಣೆಗೂ ಸೂಚಿಸಿದ್ದಾರೆ, ಅದಾಗ್ಯೂ ಬಿಜೆಪಿ ಕಾಲಾವಧಿಯಲ್ಲಿ ಆಗಿರುವ ವಕ್ಫ್ ನೋಟಿಸ್ ಹಾಗೂ ಪಹಣಿ ಬದಲಾವಣೆಯ ವಿಷಯವನ್ನು ಇದೀಗ ಎತ್ತಿಕೊಂಡು ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿರುವ ಬಿಜೆಪಿ ಹಾಗೂ ಯತ್ನಾಳ್ ತಂಡ ತಮ್ಮ ಕಾಲಾವಧಿಯಲ್ಲಿ ಎಷ್ಟು ನೋಟೀಸ್ ಜಾರಿಯಾಗಿವೆ, ಪಹಣಿ ತಿದ್ದುಪಡಿ ಎಷ್ಟಾಗಿವೆ ಎಂಬುದನ್ನು ಸಾರ್ವಜನಿಕರ ಮುಂದಿಡಲಿ ಎಂದು ಅವರು ಸವಾಲೆಸೆದರು.
ಬೀದರ್‌ನ ಬಸವಗಿರಿಯ ಖಾತೆ ಬದಲಾವಣೆಯಾಗಿ ವಕ್ಫ್ ಆಸ್ತಿ ಎಂದಾಗಿರುವದು ಈ ಹಿಂದಿನ ಸರ್ಕಾರದ ಸಂದರ್ಭದ್ದು. ಅದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗುವದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಟೆ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹಾಗೂ ಮಾಜಿ ಶಾಸಕ ಅರವಿಂದಕುಮಾರ ಅರಳಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.