ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಹಾವೇರಿ, ಚಾಮರಾಜನಗರ, ಬಳ್ಳಾರಿ, ಶಿವಮೊಗ್ಗ, ಬೆಳಗಾವಿ, ರಾಯಚೂರು ಸೇರಿದಂತೆ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.
ಶೃಂಗಸಭೆ ನಡೆಯುತ್ತಿರುವಾಗ ಏಕಾಏಕಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಚಿತ್ರಗಳಿರುವ ಟಿ-ಶರ್ಟ್ ಹಿಡಿದುಕೊಂಡು ಪ್ರತಿಭಟನೆ ಆರಂಭಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಭಾರತ- ಅಮೆರಿಕ ನಡುವಿನ ಒಪ್ಪಂದದಲ್ಲಿ ಮೋದಿ ರಾಜಿ ಮಾಡಿಕೊಂಡಿದ್ದಾರೆ ಎಂದು ದೂರಿದ್ದರು. ‘ಅಮೆರಿಕದ ಜತೆ ಟ್ರೇಡ್ ಡೀಲ್’ ಎಂದು ಘೋಷಣೆ ಕೂಗಿದ್ದರು. ಕಾಂಗ್ರೆಸ್‌ನ ಈ ನಡೆಯನ್ನು ಖಂಡಿಸಿ ಆ ಪಕ್ಷದ ಕಚೇರಿಯೆದುರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೂರ್ಣ ಪ್ರಮಾಣದಲ್ಲಿ ಸತ್ಯಾಸತ್ಯತೆಯನ್ನು ಅರಿಯದೇ ವಿಶ್ವದ ವಿವಿಧ ದೇಶಗಳಿಂದ ಆಗಮಿಸಿದ್ದ ಅತಿಥಿಗಳ ಎದುರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದರು.ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಸಾಕಷ್ಟು ಸಮಾಧಾನ ಪಡಿಸಿದರೂ ಜಗ್ಗದ ಬಿಜೆಪಿ ಕಾರ್ಯಕರ್ತರು, ಬ್ಯಾರಿಕೇಡ್‌ಗಳನ್ನು ತಳ್ಳಾಡಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಚಕಮಕಿ ನಡೆಯಿತು. ಅವರನ್ನು ಬಂಧಿಸಿ ಪೊಲೀಸರು ಕರೆದೊಯ್ದರು.ಇನ್ನು ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಮೈಸೂರಿನಲ್ಲೂ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಪದಾಧಿಕಾರಿಗಳು, ವಿದೇಶಿ ಗಣ್ಯರ ಮುಂದೆ ಅಸಭ್ಯ ಪ್ರದರ್ಶನದ ಮೂಲಕ ದೇಶದ ಘನತೆಗೆ ಕುಂದುಂಟು ಮಾಡುವ ಯುವ ಕಾಂಗ್ರೆಸ್ಸಿನ ನಡೆ ಖಂಡನಿಯ. ದೇಶದ ಜನತೆ ಕಾಂಗ್ರೆಸ್ ಪಕ್ಷದ ಈ ಅಸಹ್ಯ ವರ್ತನೆಯನ್ನು ಎಂದಿಗೂ ಕ್ಷಮಿಸರು. ಅಧಿಕಾರ ಲಾಲಸೆ, ಅಸಹನೆಗಳಿಂದ ದೇಶದ ಘನತೆಗೆ ಮಸಿ ಬಳಿಯುವ ಕಾಂಗ್ರೆಸಿನ ಇಂತಹ ಅಸಭ್ಯ ಕುತಂತ್ರ ಸರಿಯಲ್ಲ ಎಂದು ಅವರು ಖಂಡಿಸಿದರು.ಬನಿಯನ್ ಪ್ರತಿಭಟನೆಗೆ ಖರ್ಗೆ ಕ್ಷಮೆ ಕೇಳಲಿ:
ದಿಲ್ಲಿಯಲ್ಲಿ ನಡೆದ ಜಾಗತಿಕ ಎಐ ಶೃಂಗದ ವೇದಿಕೆಗೆ ನುಗ್ಗಿ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿರುವ ಕ್ರಮವನ್ನು ಕಟು ಶಬ್ದಗಳಲ್ಲಿ ಖಂಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ದಾರಿ ತಪ್ಪಿದ ಮಗನಿಂದಾಗಿ ಈಗಾಗಲೇ ಹಳಿ ತಪ್ಪಿರುವ ಕಾಂಗ್ರೆಸ್ ಪಕ್ಷ ಇಂತಹ ದುರ್ನಡತೆಯಿಂದಾಗಿ ಇನ್ನೂ ದಾರಿ ತಪ್ಪುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಘಟನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ಧಾರೆ.45 ದೇಶದ ಮಂತ್ರಿಗಳು ಸೇರಿದಂತೆ ಜಾಗತಿಕವಾಗಿ ಪ್ರಮುಖರು ಪಾಲ್ಗೊಂಡಿದ್ದ ದಿಲ್ಲಿ ಎಐ ಶೃಂಗದಲ್ಲಿನ ಕಾಂಗ್ರೆಸ್ಸಿಗರ ದುರ್ವರ್ತನೆ ದೇಶಾಭಿಮಾನ ಇರೋರೆಲ್ಲರಿಗೂ ಶಾಕ್ ನೀಡಿದೆ. ಈ ರೀತಿಯ ವರ್ತನೆ ದೇಶದ ಪ್ರತಿಷ್ಠೆಗೆ ಧಕ್ಕೆ ತರುತ್ತದೆ. ಇಂತಹ ಕೆಟ್ಟ ಸಂದರ್ಭಕ್ಕೆ ಕಾರಣರು ಯಾರೆಂಬುದನ್ನ ಇಡೀ ಜಗತ್ತೇ ನೋಡುತ್ತಿದೆ ಎಂಬ ಅರಿವಾದರೂ ಕಾಂಗ್ರೆಸ್‌ಗೆ ಇರಬೇಕಿತ್ತೆಂದು ಜೋಶಿ ಕುಟುಕಿದರು.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ರಾಹುಲ್ ದಾರಿ ತಪ್ಪಿದ ಮಗ. ಅಪ್ರಬುದ್ಧ ರಾಜಕಾರಣಿ. ಅವರ ಬಗ್ಗೆ ಏನು ಹೇಳಬೇಕೆಂದು ಗೊತ್ತಾಗುವುದಿಲ್ಲ’ ಎಂದು ಹೇಳಿದರು. ದೇಶದ ಗೌರವ ಜಾಗತಿಕವಾಗಿ ಹಾನಿಯಾಗಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಡಾ। ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.ಎಐ ಶೃಂಗಕ್ಕೆ ನುಗ್ಗಿದ್ದು ದೇಶ ವಿರೋಧಿ ನಡೆ:ಎಐ ಶೃಂಗಸಭೆಗೆ ವಿರೋಧಿಸಿದ ಕಾಂಗ್ರೆಸ್‌ಗೆ ಅಲ್ಲಿನ ಜನ ಬೂಟಿನಲ್ಲಿ ಹೊಡೆದು ಓಡಿಸಿದ್ದಾರೆ. ಇದು ಪ್ರಾರಂಭವಾಗಿದ್ದು, ಇನ್ನು ಮುಂದೆ ದೇಶಾದ್ಯಂತ ಕಾಂಗ್ರೆಸ್‌ಗೆ ಇದೇ ರೀತಿಯ ಪೂಜೆ ಆಗಲಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ಗೆ ಈ ದೇಶ ಮುಂದುವರೆಯುವುದು, ಉನ್ನತ ಮಟ್ಟಕ್ಕೆ ಏರುವುದು ಇಷ್ಟವಿಲ್ಲ. ಹೀಗಾಗಿ ಕಾಂಗ್ರೆಸ್‌ನ ಕೆಲ ಗುಲಾಮರು ಎಐ ಶೃಂಗ ಸಭೆ ಪ್ರವೇಶಿಸಿ, ಅಡ್ಡಿಪಡಿಸಲು ಮುಂದಾಗಿದ್ದಾರೆ. ಇದು ದೇಶ ವಿರೋಧಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಹುಲ್ ಸೂಚನೆ ಮೇರೆಗೆ ಸಭೆಗೆ ಅಡ್ಡಿ:ಪ್ರಧಾನಿ ಮೋದಿ ಅವರು ಎಐ ಶೃಂಗಸಭೆ ಮುಖಾಂತರ ಭಾರತದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಆದರೆ, ವರದಿಗಳ ಪ್ರಕಾರ ರಾಹುಲ್ ಗಾಂಧಿ ಅವರು ಈ ಸಭೆಗೆ ಅಡ್ಡಿಪಡಿಸುವ ಕೆಲಸ ಮಾಡಿಸಿದ್ದಾರೆ. ಅಲ್ಲಿ ಸೇರಿದ್ದ ಸಾರ್ವಜನಿಕರು ವಸ್ತ್ರ ಬಿಚ್ಚಿಕೊಂಡಿದ್ದ ಆ ಕಾಂಗ್ರೆಸ್ಸಿಗರಿಗೆ ಬೂಟಿನಲ್ಲಿ ಹೊಡೆದು ಓಡಾಡಿಸಿದ್ದಾರೆ. ಇನ್ನು ಮುಂದೆ ದೇಶಾದ್ಯಂತ ಕಾಂಗ್ರೆಸಿಗರಿಗೆ ಇದೇ ರೀತಿಯ ಪೂಜೆ ಆಗಲಿದೆ ಎಂದು ಹೇಳಿದರು.ಕರ್ನಾಟಕದಲ್ಲಿ ಒಳಮೀಸಲಾತಿ ಸಂಬಂಧ ಕಾಂಗ್ರೆಸ್ ಸರ್ಕಾರ ಮಾಡಿದ ಗೊಂದಲಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ ಸೇರಿ ಎಲ್ಲ ಕಡೆ ಮುಖ್ಯಮಂತ್ರಿ, ಸಚಿವರಾದ ಎಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಅವರ ಫೋಟೋಗಳಿಗೆ ಇದೇ ರೀತಿಯ ಪೂಜೆ ನಡೆದಿದೆ. ಈ ಪೂಜೆ ಕಾಂಗ್ರೆಸ್‌ಗೆ ಅವಶ್ಯವಾಗಿತ್ತು ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.ಪ್ರಿಯಾಂಕ್ ಬಗ್ಗೆ ಅನುಮಾನ:ಬಾಗಲಕೋಟೆಯಲ್ಲಿ ಹಿಂದೂಗಳ ಮೇಲೆ ನಡೆದ ದಬ್ಬಾಳಿಕೆ ಸಹಿಸಲಾಗದು. ಈಗ ಶಾಂತಿ ಸಭೆಗೆ ಕರೆದರೂ ಕೆಲವರು ಬರುತ್ತಿಲ್ಲ. ಇದಕ್ಕೆ ಈ ಸರ್ಕಾರವೇ ಕಾರಣ. ಇನ್ನು ಚಿತ್ತಾಪುರದಲ್ಲಿ ನಡೆದಿರುವ ಘಟನೆಗೆ ಚಿತಾವಣೆ ಯಾರು? ಕೆಲ ಸ್ಥಳೀಯರು ತಿಳಿಸಿರುವ ಪ್ರಕಾರ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರೇ ಏನೋ ಮಾಡಿಸುತ್ತಿರುವ ಅನುಮಾನವಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಇಂಥ ಚಿತಾವಣೆ ಮಾಡುವ ಪ್ರತಿ ವ್ಯಕ್ತಿಗೂ ಶಿಕ್ಷೆಯಾಗಬೇಕು. ಹಿಂದೂಗಳೇ ಏಕೆ ಟಾರ್ಗೆಟ್ ಎಂದು ಜನ ಕೇಳುತ್ತಿರುವುದಕ್ಕೆ ಪ್ರಿಯಾಂಕ್ ಖರ್ಗೆ ಉತ್ತರಿಸಬೇಕು. ಈ ಸರ್ಕಾರ ಇಂಥವುಗಳಿಗೆ ಪ್ರೋತ್ಸಾಹ ಕೊಡುತ್ತಿದೆ. ಅಲ್ಪಸಂಖ್ಯಾತರರ ಹೆಸರಿನಲ್ಲಿ ಮತಬ್ಯಾಂಕ್ ಕಾರಣಕ್ಕೆ ಓಲೈಕೆ ಮಾಡುತ್ತಾ ಹೋದರೆ ಈ ರಾಜ್ಯಕ್ಕೆ ಮತ್ತು ದೇಶಕ್ಕೆ ಗಂಡಾಂತರ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಹೆಡೆಮುರಿ ಕಟ್ಟಲು ಆಗ್ರಹ:ನಾನು ಎಲ್ಲ ಮುಸ್ಲಿಮರನ್ನು ನಿಂದಿಸುವುದಿಲ್ಲ ಮತ್ತು ವಿರೋಧಿಸುವುದಿಲ್ಲ. ಯಾರು ಈ ಕೃತ್ಯಗಳಲ್ಲಿ ಭಾಗಿಯಾಗುತ್ತಾರೋ ಅವರ ಬಗ್ಗೆ ಮಾತನಾಡುತ್ತಿದ್ದೇನೆ. ನಾಲ್ಕು ಜನ ಮಾಡುವ ಕೃತ್ಯಗಳಿಂದ ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿರುವುದಾಗಿ ಅನೇಕರು ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರ ಈ ಕೃತ್ಯಗಳಲ್ಲಿ ಭಾಗಿಯಾದವರ ಹೆಡೆಮುರಿ ಕಟ್ಟಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.