ಕನ್ನಡಪ್ರಭ ವಾರ್ತೆ ಮದ್ದೂರು
ಮೈಸೂರಿನ ಮುಡಾದಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಗರಣದ ಬಗ್ಗೆ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವಿಜಯೇಂದ್ರ ಸೇರಿದಂತೆ ಪಕ್ಷದ ನಾಯಕರನ್ನು ಬಂಧಿಸಿರುವ ಪೊಲೀಸರ ಕ್ರಮ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ಸಂಚಾರಿ ಪೊಲೀಸ್ ಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.ಮಂಡ್ಯ ಜಿಲ್ಲೆಯ ಗಡಿ ಭಾಗವಾದ ನಿಡಘಟ್ಟದ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಲು ಮೈಸೂರಿಗೆ ತೆರಳುವ ಬಿಜೆಪಿ ನಾಯಕರನ್ನು ಬಂಧಿಸಲು ಪೊಲೀಸರು ಮುಂಜಾನೆಯಿಂದಲೇ ಸಿದ್ಧತೆ ನಡೆಸಿದ್ದರು.
ಈ ವೇಳೆ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಸತೀಶ್ ಹೆದ್ದಾರಿಯ ಇಕ್ಕೆಲಗಳಲ್ಲಿ ಪಕ್ಷದ ಬಾವುಟ ಮತ್ತು ಬಂಟಿಂಗ್ಸ್ ಗಳನ್ನು ಅಳವಡಿಸುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಸತೀಶ್ ಅವರನ್ನು ವಶಕ್ಕೆ ತೆಗೆದುಕೊಂಡರು. ಈ ಇತರ ಕಾರ್ಯಕರ್ತರು ಪೊಲೀಸರ ಬಂಧನಕ್ಕೆ ಹೆದರಿ ಸ್ಥಳದಿಂದ ಪಲಾಯನ ಮಾಡಿದರು.ತಾಲೂಕು ಘಟಕದ ಅಧ್ಯಕ್ಷ ಸಿ .ಕೆ. ಸತೀಶ್ ಹಾಗೂ ಮೈಸೂರು ಮತ್ತು ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಪಕ್ಷದ ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದನ್ನು ವಿರೋಧಿಸಿ ಕಾರ್ಯಕರ್ತರು ಪಟ್ಟಣದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಧರಣಿ ನಿರತರು, ಮುಡಾ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಪಡಿಸಿದ್ದರು.ಪ್ರತಿಭಟನೆಯಲ್ಲಿ ಮಹಿಳಾ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ರಂಜಿತಾ, ತಾಲೂಕು ಅಧ್ಯಕ್ಷೆ ಶ್ವೇತಾ, ಪದಾಧಿಕಾರಿಗಳಾದ ಕೋಮಲ, ಸುಮಾ, ರೈತ ಮೋರ್ಚಾದ ರವಿ, ಯುವ ಘಟಕದ ನಿಡಘಟ್ಟ ಸುನಿಲ್, ಮುಖಂಡರಾದ ಪ್ರಸನ್ನ, ಮಾದೇಶ, ಮಾ.ನ. ಪ್ರಸನ್ನ ಕುಮಾರ್, ಮಿಥುನ್, ಆತ್ಮಾನಂದ, ಕೆಂಪಬೋರಯ್ಯ, ಧನಂಜಯ, ಕುಮಾರ್ ಭಾಗವಹಿಸಿದ್ದರು.