ಗದಗ: ಶಿವಯೋಗದ ಸಾಧನೆಗೆ ಶರೀರ ಮುಖ್ಯ ಪಾತ್ರ ವಹಿಸುತ್ತದೆ. ಶರೀರವನ್ನು ಕಾಪಾಡಿಕೊಂಡು ಹೋದಾಗ ಮಾತ್ರ ಶಿವಯೋಗ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕಾಶಿ ಪೀಠದ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.
ಮಾನವ ಶರೀರದ ಮಹತ್ವ ಅರಿತುಕೊಳ್ಳಬೇಕಿದೆ. ಮಾನವ ಜನ್ಮ ತಾಳಿ ಏನು ಮಾಡಬೇಕು ಎಂಬುದನ್ನು ನಾವು ಮರೆತಿದ್ದೇವೆ. ಆದ್ದರಿಂದ ನಮ್ಮ ಸಂಸ್ಕೃತಿ, ವೀರಶೈವ ಪರಂಪರೆಯ ಸಂಪ್ರದಾಯ ಅರಿತುಕೊಂಡು ಶಿವಯೋಗ ಸಾಧನೆ ಮಾಡಬೇಕು. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ದೇಶಾಭಿಮಾನ, ಧರ್ಮಾಭಿಮಾನ ಹಾಗೂ ಮಾನವೀಯತೆ ಬೆಳೆಸಬೇಕಿದೆ ಎಂದರು.
ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ಧಾಂತ ಶಿಖಾಮಣಿ ಗ್ರಂಥವು ಶಿವಯೋಗದ ಮಹತ್ವ ತಿಳಿಸಿಕೊಂಡು ಬರುತ್ತಿದೆ. ನಾವು ಮಾಡುವ ಇಷ್ಟಲಿಂಗ ಪೂಜೆ ಶಿವಯೋಗ ಎಂತಲೂ ಕರೆಯುತ್ತಾರೆ. ಅಂಗ ಗುಣಗಳನ್ನು ಕಳೆದುಕೊಂಡು ಲಿಂಗ ಗುಣಗಳನ್ನು ಅಳವಡಿಸಿಕೊಳ್ಳುವವನ್ನು ಯೋಗಿಯಾಗುತ್ತಾನೆ. ಲಿಂಗ ಗುಣಗಳಾದ ಅಹಿಂಸೆ, ದಾನ, ಕ್ಷಮೆ ಅಳವಡಿಸಿಕೊಂಡಾಗ ಜೀವಾತ್ಮ ಪರಮಾತ್ಮನಾಗುತ್ತಾನೆ ಎಂದು ತಿಳಿಸಿದರು.ದೇಹ ಎಂದರೆ ದಹಿಸಲ್ಪಡುವುದರಿಂದ ಶರೀರವನ್ನು ದೇಹ ಎಂದು ಕರೆದರು. ಕಾಯ ಎಂದರೆ ಕಷ್ಟ ಸಹಿಸಿಕೊಂಡು ಬರುವುದರಿಂದ ಕಾಯ. ಅಂಗ ಎಂದರೆ ವೀರೇಶ್ವರ ಧರ್ಮದ ಪಾರಮಾರ್ಥಿಕ ಭಾಷೆ ಪರಮಾತ್ಮನನ್ನು ಕೂಡುವ ಸ್ಥಳವಾಗಿದ್ದರಿಂದ ಶರೀರಕ್ಕೆ ಅಂಗ ಎಂದು ಕರೆಯಲಾಗಿದೆ. ಪರಮಾತ್ಮ ಕೊಟ್ಟಿರುವ ಈ ಶರೀರವನ್ನು ಶಿವಯೋಗ ಸಾಧನೆಗೆ ಬಳಸಿಕೊಳ್ಳಬೇಕು ಎಂದರು.