-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಬೆಂಗಳೂರು ಆಗ ಇನ್ನೂ ಸಾಫ್ಟ್‌ವೇರ್ ಸಿಟಿಯಾಗಿರಲಿಲ್ಲ. ಒಂದಷ್ಟು ಕಂಪನಿಗಳು ಆಗಷ್ಟೇ ಆರಂಭವಾಗಿದ್ದವು. ಸಾಫ್ಟ್‌ವೇರ್ ಬಗ್ಗೆ ಗಮನಹರಿಸಿದ, ಮಾತನಾಡಿದ ಮೊದಲ ಮುಖ್ಯಮಂತ್ರಿ ಕೃಷ್ಣ ಅವರು. ಸಾಫ್ಟ್‌ವೇರ್ ಕ್ಷೇತ್ರ ಮುಂದೊಂದು ದಿನ ಬೆಂಗಳೂರಿನಲ್ಲಿ ಹುಲುಸಾಗಿ ಬೆಳೆಯುತ್ತದೆ, ಮುಂದೆ ಬೆಂಗಳೂರು ದೇಶದ ಸಿಲಿಕಾನ್ ಸಿಟಿ ಆಗುವ ಅವಕಾಶಗಳಿವೆ ಎಂದು ಗುರುತಿಸಿದ್ದು, ಅದರ ಬಗ್ಗೆ ಮಾತನಾಡಿದವರು ಅವರು. ಆ ದೃಷ್ಟಿಯಿಂದ ಕೃಷ್ಣ ಅವರು ಬೇರೆಲ್ಲ ಮುಖ್ಯಮಂತ್ರಿಗಳಿಗಿಂತ ಭಿನ್ನರಾಗಿ ಕಾಣಿಸಿಕೊಳ್ಳುತ್ತಾರೆ.
ಕಾರ್ಪೋರೆಟ್ ಲುಕ್‌ನ ಮುಖ್ಯಮಂತ್ರಿಸರ್ಕಾರಕ್ಕೆ ಒಂದು ಕಾರ್ಪೊರೆಟ್ ಲುಕ್ ನೀಡಿದ್ದು ಕೂಡ ಕೃಷ್ಣ ಅವರೇ. ಅವರು ಸದಾ ಸೂಟು-ಬೂಟು ಹಾಕಿಕೊಂಡೇ ಬರುತ್ತಿದ್ದರು. ಅವರ ಧಿರಿಸಿನ ಶಿಸ್ತಿನಲ್ಲಿಯೇ ಗಾಂಭೀರ್ಯವಿತ್ತು. ಪಕ್ಕಾ ಕಾರ್ಪೊರೇಟ್ ಲುಕ್ ಅವರದ್ದು. ರಾಜ್ಯದ ಜನ ಮುಖ್ಯಮಂತ್ರಿಯೊಬ್ಬರನ್ನು ಆ ರೀತಿಯ ಧಿರಿಸಿನಲ್ಲಿ ನೋಡಿದ್ದು ತುಂಬಾ ಕಡಿಮೆ. ಅದಕ್ಕೆ ತಕ್ಕ ಹಾಗೆ ಅವರು ಸಾಫ್ಟ್‌ವೇರ್, ಸಿಂಗಾಪುರ ಎಂದೆಲ್ಲ ಮಾತನಾಡುತ್ತಿದ್ದರು. ಅಷ್ಟೇ ಉತ್ತಮವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಬಲ್ಲವರಾಗಿದ್ದರು. ಅವರ ಕನ್ನಡ ಮತ್ತು ಇಂಗ್ಲಿಷ್ ಎರಡೂ ಅತ್ಯುತ್ತಮವಾಗಿತ್ತು. ಹಾಗಾಗಿಯೇ ಅವರು ಕನ್ನಡಿಗರ ಜತೆ ಹಾಗೂ ವಿದೇಶಿ ಉದ್ದಿಮೆದಾರರು ಹಾಗೂ ಕಾರ್ಪೊರೆಟ್ ಸಿಇಒಗಳ ಜತೆ ಸುಲಭವಾಗಿ ವ್ಯವಹರಿಸಬಲ್ಲವರಾಗಿದ್ದರು. ಈ ಸಾಮರ್ಥ್ಯದಿಂದಾಗಿಯೇ ಅವರು ಬೆಂಗಳೂರಲ್ಲಿ ಐಟಿ ಪಾರ್ಕ್ ನಿರ್ಮಿಸಲು ಸಾಧ್ಯವಾಯಿತು. ಐಟಿ ಹಾಗೂ ಕೈಗಾರಿಕೆಯಲ್ಲಿ ರಾಜ್ಯ ಅವರ ಅವಧಿಯಲ್ಲಿ ಪ್ರಗತಿ ಸಾಧಿಸಿದ್ದರ ಪರಿಣಾಮವಾಗಿ ಉತ್ತರ ಕರ್ನಾಟಕದ ಲಕ್ಷಾಂತರ ಯುವಕರಿಗೆ ಬೆಂಗಳೂರು ಉದ್ಯೋಗದ ದಾರಿಯಾಯಿತು. ಅವರ ಉಜ್ವಲ ಭವಿಷ್ಯಕ್ಕೆ ನಾಂದಿಯಾಯಿತು. ಕ್ಲಿಷ್ಟಕರ ಪರಿಸ್ಥಿತಿ ನಿರ್ವಹಣೆಗೆ ಮಾದರಿ
ರಾಜ್ಯದ ಮುಖ್ಯಮಂತ್ರಿಯಾಗಿ ಎಸ್.ಎಂ.ಕೃಷ್ಣ ಅವರು ಎದುರಿಸಿದಷ್ಟು ಕ್ಲಿಷ್ಟಕರ ಮತ್ತು ತುಂಬಾ ವಿಶಿಷ್ಟವಾದ ಪರಿಸ್ಥಿತಿಯನ್ನು ಬಹುಶಃ ಇನ್ಯಾವ ಮುಖ್ಯಮಂತ್ರಿಯೂ ಎದುರಿಸಿಲ್ಲ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಹೇಗೆ ಒಳ್ಳೆಯ ಕೆಲಸಗಳು ನಡೆದವೋ, ಅಷ್ಟೇ ಪ್ರಮಾಣದಲ್ಲಿ ರಾಜ್ಯದ ಇತಿಹಾಸದ ಕರಾಳ ಘಟನೆಗಳೂ ದಾಖಲಾದವು. ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದು ರಾಜ್ಯದ ಇತಿಹಾಸದ ಅತ್ಯಂತ ಕರಾಳ ಘಟನೆ. ರಾಜ್ ಕುಮಾರ್ ಅವರು ಕನ್ನಡಿಗರ ಕಣ್ಮಣಿಯಾಗಿದ್ದರು. ಅಂತಹ ವ್ಯಕ್ತಿಯೊಬ್ಬರು ಅಪರಹಣಕ್ಕೊಳಗಾಗುವುದು ಯಾವುದೇ ಸರ್ಕಾರಕ್ಕೂ ಕೆಟ್ಟ ಹೆಸರು ತರುವ ಘಟನೆಯೇ. ಅದರ ಜತೆಗೆ ರಾಜ್ಯಾದ್ಯಂತ ಆಕ್ರೋಶ ಕೂಡ ಬಹಳ ಗಾಢವಾಗಿಯೇ ವ್ಯಕ್ತವಾಗಿತ್ತು. ರಾಜ್ಯಾದ್ಯಂತ ಆಕ್ರೋಶ ಇರುವ ಸಮಯದಲ್ಲಿ ರಾಜ್ ಕುಮಾರ್ ಅವರಂತಹ ಗಣ್ಯರು ಅಪಹರಣವಾದಾಗ ಎರಡೂ ಸ್ಥಿತಿಯನ್ನು ನಿಭಾಯಿಸುವುದು ಸರ್ಕಾರಕ್ಕೆ ಸವಾಲಿನ ಸಂಗತಿ. ಅಂತಹ ಕ್ಲಿಷ್ಟ ಸಮಸ್ಯೆಯನ್ನು ಕೂಡ ಕೃಷ್ಣ ಅವರು ಸಮಚಿತ್ತದಿಂದ ನಿಭಾಯಿಸಿದರು. ಅದರ ಜತೆಗೆ ರಾಜ್ಯದಲ್ಲಿ ಬರ ಪರಿಸ್ಥಿತಿ. ಅದರ ನಂತರ ಕಾವೇರಿ ಸಮಸ್ಯೆ. ಹೀಗೆ ಒಂದಾದ ಮೇಲೊಂದು ಸಮಸ್ಯೆಗಳನ್ನು ಕೃಷ್ಟ ಅವರು ಚಾಕಚಕ್ಯತೆಯಿಂದ ನಿಭಾಯಿಸಿದರು.
ಅವರ ದೂರದೃಷ್ಟಿ, ಸಮಚಿತ್ತ, ಬುದ್ಧಿವಂತಿಕೆ, ಕ್ಲಿಷ್ಟಕರ ಪರಿಸ್ಥಿತಿಯನ್ನು ನಿಭಾಯಿಸುವ ಅವರ ಸಾಮರ್ಥ್ಯವನ್ನು ಪರಿಗಣಿಸಿಯೇ ಮುಂದೆ ಅವರನ್ನು ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಮುಂದೆ ಕಾಂಗ್ರೆಸ್ ಅಂತಹ ರಾಜಕಾರಣಿಯನ್ನು ಕಡೆಗಣಿಸಿತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಬಿಜೆಪಿಯೊಂದಿಗೆ ಕೈಜೋಡಿಸಿದರು. ಪಕ್ಷಕ್ಕೆ ರಾಜ್ಯದಲ್ಲಿ ಬಲತುಂಬುವ ಕೆಲಸದಲ್ಲಿ ಅವರು ಕೂಡ ಶ್ರಮಿಸಿದ್ದಾರೆ. ವಯಸ್ಸಿನ ಕಾರಣಕ್ಕೆ ತುಂಬಾ ಸಕ್ರಿಯರಾಗಿ ತೊಡಗದೆ ಇದ್ದರೂ ಪಕ್ಷವನ್ನು ಬೆಳೆಸುವಲ್ಲಿ ಸಾಧ್ಯವಿರುವ ಎಲ್ಲ ಕೊಡುಗೆಯನ್ನೂ ಅವರು ನೀಡಿದ್ದಾರೆ.