ಜಮೀರ್‌ ಅಹ್ಮದ್‌ ಸದನದಲ್ಲಿ ಭಾಗವಹಿಸಲು ಬಿಡುವುದಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

KannadaprabhaNewsNetwork |  
Published : Nov 23, 2023, 01:45 AM IST
ವಿಜಯೇಂದ್ರ  | Kannada Prabha

ಸಾರಾಂಶ

ಜಮೀರ್ರ್‌ ಅಹಮ್ಮದ್ದ್‌ಗೆ ಸದನದಲ್ಲಿ ಪಾಲ್ಗೊಳ್ಲಲು ಬಿಡುವುದಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸುದ್ದಿಗೋಷ್ಠಿಯಲ್ಲಿ ಹೇಳಿಕೆ

ಕನ್ನಡಪ್ರಭ ವಾರ್ತೆ ಮಂಗಳೂರು

ಸ್ಪೀಕರ್ ಸ್ಥಾನಕ್ಕೆ ಜಾತಿ, ಧರ್ಮದ ಬಣ್ಣ ಹಚ್ಚಿದ ಶಾಸಕ ಜಮೀರ್‌ ಅಹ್ಮದ್‌ನನ್ನು ರಸ್ತೆಯಲ್ಲಿ ಓಡಾಡಲು ಬಿಟ್ಟಿರುವುದೇ ಹೆಚ್ಚು, ತಲೆತಗ್ಗಿಸುವ ಕೆಲಸ ಮಾಡಿರುವ ಅವರಿಂದ ಮುಖ್ಯಮಂತ್ರಿಗಳು ಈಗಾಗಲೇ ರಾಜಿನಾಮೆ ಪಡೆಯಬೇಕಿತ್ತು. ಹಾಗಾಗಿ ಜಮೀರ್‌ ಅಹ್ಮದ್‌ ಅವರು ಡಿ.4ರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಹೇಗೆ ಭಾಗವಹಿಸುತ್ತಾರೆ ನೋಡುತ್ತೇವೆ ಎಂದು ಶಿಕಾರಿಪುರ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸವಾಲು ಹಾಕಿದ್ದಾರೆ. ಮಂಗಳೂರಿನ ಬಂಟ್ಸ್‌ಹಾಸ್ಟೆಲ್‌ನ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಮೀರ್‌ ಅಹ್ಮದ್‌ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಸದನದಲ್ಲಿ ಹೋರಾಟ ಮಾಡುವುದಾಗಿ ಅವರು ಹೇಳಿದರು. ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದೆ. ರೈತ ವಿರೋಧಿ, ಬಡವರ ವಿರೋಧಿ ಹಾಗೂ ದಲಿತ ವಿರೋಧಿ ಸರ್ಕಾರ ಇದಾಗಿದೆ. ಭೀಕರ ಬರಗಾಲ ಇದ್ದರೂ ಅದನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ. ಉಸ್ತುವಾರಿ ಸಚಿವರು ಇದ್ದರೂ ತಮ್ಮದೇ ಜಿಲ್ಲೆಗೆ ಪ್ರವಾಸ ಮಾಡಿಲ್ಲ, ಅಧಿಕಾರಿಗಳ ಸಭೆಯನ್ನೂ ಕರೆದಿಲ್ಲ. ಕೇವಲ ಲೋಕಸಭಾ ಚುನಾವಣೆ ಗೆಲವಿಗಾಗಿ ಚರ್ಚೆ ಮಾಡಿದ್ದಾರೆ. ರೈತರು ಬರದಿಂದ ಪರದಾಡುತ್ತಿರಬೇಕಾದರೆ, ಕಾಂಗ್ರೆಸಿಗರು ನಿಗಮ, ಮಂಡಳಿ ನೇಮಕದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಸರ್ಕಾರಕ್ಕೆ ರೈತರು, ಬಡವರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ವಿಜಯೇಂದ್ರ ಲೇವಡಿ ಮಾಡಿದರು. ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರಿಗೆ ಬೇಸಗೆಯಲ್ಲೂ ಏಳು ತಾಸು ನಿರಾತಂಕ ವಿದ್ಯುತ್‌ ಪೂರೈಕೆಯಾಗುತ್ತಿತ್ತು. ಈಗ ವಿದ್ಯುತ್‌ ಅಭಾವ ಸೃಷ್ಟಿಯಾಗಿ ಎರಡು ತಾಸು ಕೂಡ ವಿದ್ಯುತ್‌ ಸಿಗುತ್ತಿಲ್ಲ. ವಿದ್ಯುತ್‌ ಕಣ್ಣಾಮುಚ್ಚಾಲೆ ಶುರುವಾಗಿದ್ದು, ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಎಲ್ಲರೂ ಮೋಜಿನಲ್ಲಿ ಮುಳುಗಿದ್ದಾರೆ ಎನ್ನುವಂತಾಗಿದೆ. ರಾಜ್ಯ ಸರ್ಕಾರ ಜವಾಬ್ದಾರಿ ಮರೆತಿದ್ದು, ಮುಂದೆ ಕಿವಿ ಹಿಂಡುವ ಕೆಲಸ ಬಿಜೆಪಿ ಮಾಡಲಿದೆ ಎಂದರು. ಯಾರೂ ಪಕ್ಷ ಬಿಡೋದಿಲ್ಲ: ನಾವೆಲ್ಲರೂ ಒಗ್ಗಟ್ಟಿನಿಂದ ಲೋಕಸಭಾ ಚುನಾವಣೆ ಎದುರಿಸುತ್ತೇವೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನೂ ಗೆಲ್ಲಿಸಿಕೊಟ್ಟು ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಲು ಶಕ್ತಿ ನೀಡುತ್ತೇವೆ ಎಂದರು ವಿಜಯೇಂದ್ರ. ಹಿಂದೆ ಏನಾಗಿದೆ ಎನ್ನುವುದನ್ನು ಬಿಟ್ಟುಬಿಡಿ, ಮುಂದೆ ಯಾರೂ ಪಕ್ಷ ಬಿಡುವುದಿಲ್ಲ. ಯಾವ ಮುಖಂಡರು, ಕಾರ್ಯಕರ್ತರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆತರುತ್ತೇವೆ. ಲಕ್ಷ್ಮಣ ಸವದಿಯನ್ನು ಪಕ್ಷಕ್ಕೆ ಕರೆತರುತ್ತೀರಾ ಎಂಬ ಪ್ರಶ್ನೆಗೆ ಅವರನ್ನು ನಾವಿನ್ನೂ ಪಕ್ಷಕ್ಕೆ ಕರೆದೇ ಇಲ್ಲ ಎಂದರು. ಯಾರೋ ಒಬ್ಬರು ಪಕ್ಷ ಬಿಟ್ಟು ಹೋದಾಕ್ಷಣ ಪಕ್ಷಕ್ಕೆ ಹಿನ್ನಡೆಯಾಗುವುದಿಲ್ಲ. ಪುತ್ತೂರಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಬಿಕ್ಕಟ್ಟನ್ನು ಪಕ್ಷ ಹಿರಿಯರ ಸೂಚನೆ ಪಡೆದುಕೊಂಡು ಬಗೆಹರಿಸುತ್ತೇವೆ ಎಂದರು. ಜಾತಿ ಗಣತಿಗೆ ವಿರೋಧವಿಲ್ಲ: ಜಾತಿ ಗಣತಿಗೆ ಬಿಜೆಪಿ ವಿರೋಧವಿಲ್ಲ, ಆದರೆ ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗಲೇ ಜಾತಿ ಗಣತಿ ಮುಗಿದಿತ್ತು. ಆಗ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಳ್ಳದೆ ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಮತ್ತೆ ಜಾತಿ ಗಣತಿ ವಿಚಾರ ಯಾಕೆ ಪ್ರಸ್ತಾಪಿಸುತ್ತೀರಿ? ಕಾಂತರಾಜ್‌ ಸಮಿತಿ ವರದಿ ತಯಾರಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳದೆ ರಾಜಕೀಯ ದುರುದ್ದೇಶಕ್ಕೆ ಜಾತಿ ಗಣತಿ ಬಳಸಲು ಹೊರಟರೆ ಅದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದರು. ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕರಾದ ವೇದವ್ಯಾಸ್‌ ಕಾಮತ್‌, ಡಾ.ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ಹರೀಶ್‌ ಪೂಂಜಾ, ರಾಜೇಶ್‌ ನಾಯ್ಕ್‌, ಭಾಗೀರಥಿ, ಮೇಯರ್‌ ಸುಧೀರ್ ಶೆಟ್ಟಿ, ಜಿಲ್ಲಾಧ್ಯಕ್ಷ ಸುದರ್ಶನ್‌, ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಪ್ರಭಾರಿ ರಾಜೇಶ್‌ ಕಾವೇರಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಎನ್‌ಡಿಎಗೆ ಅಧಿಕಾರ ನಿಶ್ಚಿತ : ಅಶೋಕ್
ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು