ಅಪ್ಪಾರಾವ್ ಸೌದಿ
ಲೋಕ ಚುನಾವಣೆಯಲ್ಲಿ ಮರಾಠಾ ಮತ ವಿಭಜನೆ ಆಗದಂತೆ ತಡೆದಿದ್ದ, ಬಿಜೆಪಿಯಲ್ಲಿದ್ದ ಮರಾಠಾ ಮುಖಂಡರುಗಳು ಬಹಿರಂಗವಾಗಿ ಪಕ್ಷದ ಅಭ್ಯರ್ಥಿ ವಿರೋಧವಾಗಿ ಪ್ರಚಾರಕ್ಕಿಳಿದಾಗ ಬೆನ್ನಿಗೆ ನಿಂತಿದ್ದ ಬಸವಕಲ್ಯಾಣದ ಮಾಜಿ ಶಾಸಕ, ಮರಾಠಾ ಮುಖಂಡ ಎಂಜಿ ಮೂಳೆ ಅವರಿಗೆ ಕಮಲ ಪಾಳಯ ವಿಧಾನ ಪರಿಷತ್ ಚುನಾವಣೆ ಟಿಕೆಟ್ ನೀಡುವ ಮೂಲಕ ಋಣ ತೀರಿಸುವ ಪ್ರಯತ್ನ ಮಾಡಿದೆ.
ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಜೂ.13ರಂದು ನಡೆಯುವ ಚುನಾವಣೆಗೆ ಬಿಜೆಪಿಯು ತನ್ನ ಮೂವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರ ಪಟಟಿಯಲ್ಲಿ ಎನ್.ರವಿಕುಮಾರ, ಸಿ.ಟಿ ರವಿ ಮತ್ತು ಮಾಜಿ ಶಾಸಕ ಎಂ.ಜಿ ಮೂಳೆ ಹೆಸರನ್ನು ಅಖೈರುಗೊಳಿಸಿದೆ.ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಮರಾಠಾ ಸಮುದಾಯದ ಜನಸಂಖ್ಯೆ ಗಮನಾರ್ಹವಾಗಿದೆ. ಗಡಿ, ಗ್ರಾಮೀಣ ಪ್ರದೇಶಗಳಲ್ಲಿ ಮರಾಠಾ ಸಮುದಾಯ ಹಾಗೂ ಮರಾಠಾ ಭಾಷಿಕರ ಸಂಖ್ಯೆ ಹೇರಳ. ಹೀಗಾಗಿ ವಿವಿಧ ಚುನಾವಣೆಗಳಲ್ಲಿ ಮರಾಠಾ ಮತದಾರರ ಪಾತ್ರ ನಿರ್ಣಾಯಕವಾಗಿರುತ್ತದೆ ಎಂಬುವದರಲ್ಲಿ ಎರಡು ಮಾತಿಲ್ಲ. ಅಷ್ಟಕ್ಕೂ ಬಿಜೆಪಿ ಪರಂಪರಾಗತ ಮರಾಠಾ ಮತಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಹಕರಿಸಿದ್ದು ಎಂಜಿ ಮೂಳೆ ಎಂಬುವದನ್ನು ನಂಬಿರುವ ಬಿಜೆಪಿ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಂತಿದೆ.ಎಂಜಿ ಮೂಳೆ ಪರಿಚಯ:
1999ರಲ್ಲಿ ಕಾಂಗ್ರೆಸ್ ಟಿಕೆಟ್ ಲಭ್ಯವಾಗದ ಕಾರಣ 4ನೇ ಸಲ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಸವಕಲ್ಯಾಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಂತರ ಎಸ್‌ಎಂ ಕೃಷ್ಣ ನೇತೃತ್ವದ ಸರ್ಕಾರ ಇದ್ದಾಗ ಇವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ನಂತರ 5ನೇ ಸಲವು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು. 6ನೇ ಸಲ ಬಿಆರ್‌ಎಸ್ ಪಕ್ಷದಿಂದ ಸ್ಪರ್ಧಿಸಿ ಸೋತರು ಒಂದು ಸಲ ಶಾಸಕರಾಗಿದ್ದನ್ನು ಬಿಟ್ಟರೆ ಸತತ ಸೋಲನ್ನುಂಡರೂ ರಾಜಕೀಯವನ್ನು ಬಿಡದೆ ರಾಜಕೀಯ ಪಕ್ಷಗಳ ಜೊತೆ ಒಡನಾಟ ಸಾಧಿಸಿಕೊಂಡು ಬಿಜೆಪಿ ಸೇರ್ಪಡೆಯಾಗಿದ್ದರು.ಮತ್ತೇ ಮರಾಠಾ ಮುಖಂಡ ಪಿಜಿಆರ್ ಸಿಂಧ್ಯಾ ಬಸವಕಲ್ಯಾಣದಲ್ಲಿ ಜೆಡಿಎಸ್ ಅಭ್ಯರ್ಥಿಯಾದಾಗ ಪುನಃ ಜೆಡಿಎಸ್ ಸೇರಿ ಪಿಜಿಆರ್ ಸಿಂಧ್ಯಾ ಅವರನ್ನು ಬೆಂಬಲಿಸಿದರು. ಶಾಸಕ ಬಿ. ನಾರಾಯಣರಾವ್ ಅವರ ಅಕಾಲಿಕ ನಿಧನದಿಂದಾಗಿ ಬಸವಕಲ್ಯಾಣದಲ್ಲಿ ಉಪ ಚುನಾವಣೆ ಏರ್ಪಟ್ಟಾಗ ಪುನಃ ಬಿಜೆಪಿ ಸೇರ್ಪಡೆಗೊಂಡು ಟಿಕೆಟ್ ಸಿಗದೆ ಇದ್ದಾಗ ಪಕ್ಷದಲ್ಲಿ ಉಳಿದು ಶರಣು ಸಲಗರ ಆಯ್ಕೆಗೆ ಶ್ರಮಿಸಿದರು. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ ಇವರಿಗೆ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಬಸವರಾಜ ಬೊಮ್ಮಾಯಿ ಸರ್ಕಾರ ನೇಮಕ ಮಾಡಿತ್ತು.