ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಪುತ್ತೂರಿನ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಹೊಸ ತಂತ್ರಗಾರಿಕೆ ನಡೆಸಿದೆ. ಕಳೆದುಕೊಂಡಿರುವ ತನ್ನ ಅಸೆಂಬ್ಲಿ ಕ್ಷೇತ್ರವನ್ನು ಮುಂದಿನ ಬಾರಿ ಮರಳಿ ಪಡೆದು ಪುತ್ತೂರಲ್ಲಿ ಪ್ರಾಬಲ್ಯ ಸ್ಥಾಪಿಸಲು ಬಿಜೆಪಿ ಅದೇ ಕ್ಷೇತ್ರದ ಅಭ್ಯರ್ಥಿಯನ್ನು ಪರಿಷತ್ ಉಪ ಚುನಾವಣೆಯಲ್ಲಿ ಕಣಕ್ಕೆ ಇಳಿಸುವ ಮೂಲಕ ಕಾಂಗ್ರೆಸ್‌ಗೆ ಠಕ್ಕರ್ ನೀಡಲು ಹೊರಟಿದೆ.
ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಪುತ್ತೂರಿನ ಸರ್ವೆಯವರು. ಕಿಶೋರ್ ಕುಮಾರ್ ಆಯ್ಕೆಯಾದರೆ ಹಿಂದುಳಿದ ಸವಿತಾ ಸಮಾಜಕ್ಕೆ ಮನ್ನಣೆ ನೀಡಿದಂತೆಯೂ ಆಗುತ್ತದೆ. ಪುತ್ತೂರಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಪರ್ಯಾಯವಾಗಿ ರಾಜಕೀಯ ಅಧಿಪತ್ಯವನ್ನೂ ಸ್ಥಾಪಿಸಿದಂತಾಗುತ್ತದೆ ಎನ್ನುವುದು ಬಿಜೆಪಿ ಪಾಳಯದ ಲೆಕ್ಕಾಚಾರ.2023ರ ಅಸೆಂಬ್ಲಿ ಚುನಾವಣೆಯಲ್ಲಿ ದ.ಕ. ಲೋಕಸಭಾ ಕ್ಷೇತ್ರದ ಎಂಟು ಅಸೆಂಬ್ಲಿ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರ ಮಂಗಳೂರು(ಉಳ್ಳಾಲ) ಹಾಗೂ ಪುತ್ತೂರು ಕ್ಷೇತ್ರ ಕಾಂಗ್ರೆಸ್ ಪಾಲಾಗಿತ್ತು. ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರಮ್ಯ ಇದ್ದರೆ, ಪುತ್ತೂರಲ್ಲಿ ಬಿಜೆಪಿಯೇ ಪ್ರಾಬಲ್ಯ ಹೊಂದಿತ್ತು.1994ರಲ್ಲಿ ಪುತ್ತೂರು ಕ್ಷೇತ್ರ ಕಾಂಗ್ರೆಸ್‌ನಿಂದ ಬಿಜೆಪಿ ತೆಕ್ಕೆಗೆ ಬಂದ ಬಳಿಕ 2013ರಲ್ಲಿ ಕಾಂಗ್ರೆಸ್ ಕೈಗೆ ಹೋಗಿತ್ತು. ಆಗ ಶಕುಂತಳಾ ಶೆಟ್ಟಿ ಗೆದ್ದಿದ್ದರು. ಹಾಗೆ ಕೈತಪ್ಪಿದ ಕ್ಷೇತ್ರವನ್ನು 2018ರಲ್ಲಿ ಬಿಜೆಪಿ ಮರಳಿ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ 2023ರ ಚುನಾವಣೆಯಲ್ಲಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧೆಯಿಂದ ಬಿಜೆಪಿ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
ಮುಂದಿನ ಅಸೆಂಬ್ಲಿ ಚುನಾವಣೆ ಗುರಿ:ಅಸೆಂಬ್ಲಿ ಚುನಾವಣೆಯಲ್ಲಿ ಈ ಕ್ಷೇತ್ರ ಕೈತಪ್ಪಿ ಹೋಗಿರುವುದು ಬಿಜೆಪಿಗೆ ನುಂಗಲಾರದ ತುತ್ತು. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಇದನ್ನು ಮರು ವಶಪಡಿಸಿಕೊಳ್ಳುವ ಇರಾದೆಯಲ್ಲಿ ವಿಧಾನ ಪರಿಷತ್ ಉಪ ಚುನಾವಣೆಯಲ್ಲೇ ತಂತ್ರಗಾರಿಕೆಗೆ ಮುಂದಾಗಿದೆ. ಅದಕ್ಕಾಗಿ ಉಡುಪಿ ಬದಲು ದ.ಕ. ಜಿಲ್ಲೆಯ ಪುತ್ತೂರಿನವರನ್ನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ.
ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಯಾದರೂ ಅವರಿಗೆ ಇನ್ನೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ. ಬಿಜೆಪಿಗೆ ಕರೆತಂದ ಬಳಿಕ ಈಗ ಸಂಘಪರಿವಾರವನ್ನು ಎದುರು ಹಾಕಿಕೊಂಡು ಪುತ್ತಿಲಗೆ ಸ್ಥಾನಮಾನ ನೀಡುವ ಎದೆಗಾರಿಕೆಯನ್ನು ರಾಜ್ಯ ಬಿಜೆಪಿ ನಾಯಕರು ಹೊಂದಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಪುತ್ತಿಲಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ನೀಡುವ ಸಾಧ್ಯತೆಯೂ ಕಂಡುಬರುತ್ತಿಲ್ಲ. ಇಷ್ಟಾದರೂ ಮುಂದಿನ ಅಸೆಂಬ್ಲಿ ಚುನಾವಣೆ ವೇಳೆಗೆ ಎಲ್ಲವನ್ನೂ ಸರಿಪಡಿಸಿಕೊಂಡು ಕ್ಷೇತ್ರದಲ್ಲಿ ಮರಳಿ ಬಿಜೆಪಿ ಅಧಿಪತ್ಯ ಸ್ಥಾಪಿಸುವ ದೂರಗಾಮಿ ಚಿಂತನೆಯನ್ನು ಪಕ್ಷ ನಾಯಕರು ಹೊಂದಿದ್ದಾರೆ ಎನ್ನುತ್ತವೆ ಉನ್ನತ ಮೂಲಗಳ ಮಾಹಿತಿ. ಪ್ರತಾಪ್‌ಸಿಂಹಗೆ ಮಂಗಳೂರು ಕ್ಷೇತ್ರ ಹೊಣೆಕಾಂಗ್ರೆಸ್ ಶಾಸಕರು ಇರುವಲ್ಲಿ ಬಿಜೆಪಿ ತನ್ನದೇ ಶಾಸಕರ ಮೂಲಕ ಅಧಿಕಾರ ಸ್ಥಾಪಿಸಲು ಪರಿಷತ್ ಆಯ್ಕೆಯನ್ನು ನೆಚ್ಚಿಕೊಂಡಿದೆ. ಈ ಮೊದಲು ಬೆಳ್ತಂಗಡಿ ಮೂಲದವರಾದ ಪ್ರತಾಪ್‌ಸಿಂಹ ನಾಯಕ್ ಅವರನ್ನು ಇದೇ ಕಾರಣಕ್ಕೆ ಪರಿಷತ್‌ಗೆ ಆಯ್ಕೆಯಾಗುವಂತೆ ನೋಡಿಕೊಳ್ಳಲಾಗಿತ್ತು. ಅವರನ್ನು ಮಂಗಳೂರು ಕ್ಷೇತ್ರ (ಉಳ್ಳಾಲ) ಕೇಂದ್ರೀಕರಿಸಿ ಕೆಲಸ ಮಾಡುವಂತೆ ಸೂಚಿಸಲಾಗಿತ್ತು. ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇರುವುದರಿಂದ ಪರ್ಯಾಯ ಅಧಿಕಾರ ಸೃಷ್ಟಿ ಹಾಗೂ ಪಕ್ಷ ಸಂಘಟನೆಗೆ ಅವರನ್ನು ಬಳಸಿಕೊಳ್ಳುವುದು ಮೂಲ ಉದ್ದೇಶವಾಗಿತ್ತು ಎನ್ನುತ್ತಾರೆ ಬಿಜೆಪಿ ರಾಜ್ಯ ನಾಯಕರು.
ಇದೇ ಮಾದರಿಯಲ್ಲಿ ಈಗ ಪುತ್ತೂರಿನಲ್ಲಿ ಬಿಜೆಪಿ ಶಾಸಕರ ಕೊರತೆ ನೀಗಿಸಲು ಕಿಶೋರ್ ಕುಮಾರ್ ಬೊಟ್ಯಾಡಿ ಅವರಿಗೆ ಟಿಕೆಟ್ ನೀಡಿದೆ. ಸ್ಥಳೀಯಾಡಳಿತ ಮತದಾರರನ್ನು ಗಮನಿಸಿದರೆ, ಬಿಜೆಪಿ ಬೆಂಬಲಿತರ ಸಂಖ್ಯಾ ಬಲ ಅಧಿಕವಾಗಿದ್ದು, ಈ ಭರವಸೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಸರಿಸಾಟಿಯಾದ ಬಿಜೆಪಿ ಶಾಸಕರನ್ನು ಹೊಂದುವ ಇಂಗಿತವನ್ನು ಪಕ್ಷ ನಾಯಕರು ಹೊಂದಿದ್ದಾರೆ.