ಎಸ್.ಸಿ, ಎಸ್.ಟಿ. ಒಳಮೀಸಲಾತಿ ಜಾರಿಗೊಳಿಸಲು ಒತ್ತಾಯ

KannadaprabhaNewsNetwork |  
Published : Oct 17, 2024, 12:06 AM IST
ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಸುಪ್ರೀಂಕೋರ್ಟ್ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಪರಿಶಿಷ್ಟ ಜಾತಿ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಗದಗ: ಸರ್ವೋಚ್ಚ ನ್ಯಾಯಾಲಯದ ಏಳು ನ್ಯಾಯಮೂರ್ತಿಗಳ ಪೂರ್ಣ ಪೀಠ ಎಸ್.ಸಿ, ಎಸ್.ಟಿ. ಮೀಸಲಾತಿಯಲ್ಲಿ ಒಳಮೀಸಲಾಗಿ ನೀಡುವ ಹಕ್ಕು ರಾಜ್ಯ ಸರಕಾರಕ್ಕಿದೆ ಎಂದು ನೀಡಿದ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಪರಿಶಿಷ್ಟ ಜಾತಿ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ನಗರದ ಕಿತ್ತೂರು ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆಯ ಮೂಲಕ ಆಗಮಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಹೋರಾಟ ಸಮಿತಿಯ ಸದಸ್ಯ ಮೋಹನ ಆಲಮೇಲಕರ ಮಾತನಾಡಿ, ಕರ್ನಾಟಕದಲ್ಲಿ ಮೂರು ದಶಕಗಳ ನಿರಂತರ ಹೋರಾಟದ ಬಗ್ಗೆ ಪ್ರಸ್ತುತ ಸರಕಾರ ಕೇವಲ ಸಹಾನುಭೂತಿ ತೋರಿಸುತ್ತಿದೆ. ಸಹಾನುಭೂತಿ ಕ್ರಿಯಾತ್ಮಕ ರೂಪ ಪಡೆಯದಿದ್ದರೆ ಅಪ್ರಯೋಜಕ. ಪರಿಶಿಷ್ಟ ಜಾತಿಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತಿ ಹಿಂದುಳಿದಿರುವ ಜಾತಿಗಳ ಅಭಿವೃದ್ಧಿಯ ಕಲ್ಯಾಣದ ಸದುದ್ದೇಶದಿಂದ ಆಯಾ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಸೌಲಭ್ಯ ತಲುಪಲು ಒಳ ಮೀಸಲಾತಿ ನೀಡುವ ಸಾಂವಿಧಾನಿಕ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಪೂರ್ಣ ಪೀಠ ಆಗಸ್ಟ್‌ 1ರಂದು ತೀರ್ಪುನೀಡಿದೆ. ಅಲ್ಲದೆ, ಸಂವಿಧಾನ ಪರಿಚ್ಛೇದ 341ನೇ ತಿದ್ದುಪಡಿಯ ಅವಶ್ಯಕತೆವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಸಾಂವಿಧಾನಿಕ ಹಕ್ಕು ಸೌಲಭ್ಯಗಳನ್ನು ಮರೆಮಾಚಲು ಒಳಮೀಸಲಾತಿ ಜಾರಿಗೊಳಿಸುವ ಕಾನೂನಾತ್ಮಕ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ಸದ್ಯ ಜಾತಿ ಜನಗಣತಿ ವರದಿ ಬಿಡುಗಡೆ ಚರ್ಚೆ ಮುನ್ನೆಲೆಗೆ ತಂದು ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧದ ಗೊಂದಲ ಸೃಷ್ಟಿಸುತ್ತಿರುವುದು ಸಂವಿಧಾನಕ್ಕೆ ಅಪಚಾರ. ಈ ಜಾತಿ ಜನಗಣತಿ ವರದಿಗೂ ಎಸ್‌ಸಿ ಒಳಮೀಸಲಾತಿ ವರ್ಗಿಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ.

ಒಳಮೀಸಲಾತಿ ಜಾರಿಗಾಗಿ ಎಸ್.ಸಿ., ಎಸ್.ಟಿ. ಸಂಬಂಧಿಸಿದ ಮೂರು ಆಯೋಗಗಳ ವರದಿ ಅಂಕಿ ಸಂಖ್ಯೆ ಕಾನೂನು ಬದ್ಧ ಕರಾರುವಕ್ಕಾದ ದತ್ತಾಂಶಗಳ ಸಮಗ್ರ ಮಾಹಿತಿ ಸರಕಾರದ ಬಳಿ ಇದೆ. ಇವುಗಳ ಆಧಾರದಲ್ಲಿ ಸದ್ಯ ಸಚಿವ ಸಂಪುಟದಲ್ಲಿ ಚರ್ಚಿಸಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕು. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಕಲ್ಪಿಸಿಕೊಡುವುದಾಗಿ ಘೋಷಿಸಿಕೊಂಡಂತೆ ನಡೆದುಕೊಳ್ಳಬೇಕು. ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ಮತ್ತು ಇತರೆ ನೇಮಕಾತಿಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮುಖಂಡರಾದ ಎಸ್‌.ಎನ್. ಬಳ್ಳಾರಿ, ಎಚ್.ಡಿ. ಪೂಜಾರ, ಸತೀಶ ಪಾಶಿ, ವಸಂತ ಜೋಗಣ್ಣವರ, ಅಶೋಕ ಕುಡತಿನ್ನಿ, ಚಂದ್ರಶೇಖರ ಹರಿಜನ, ಮೈಲಾರಪ್ಪ ಚಳ್ಳಮರದ, ಮಾರ್ತಂಡಪ್ಪ ಹಾದಿಮನಿ, ಲಕ್ಷ್ಮಣ ತಗಡಿನಮನಿ, ಮರಿಯಪ್ಪ ಸಿದ್ದಣ್ಣವರ, ನಿಂಗಪ್ಪ ದೊಡ್ಡಮನಿ, ಮಲ್ಲಿಕ್ ಸಂಗಾಪೂರ, ವಿನಾಯಕ ಬಳ್ಳಾರಿ, ಕೃಷ್ಣಪ್ಪ ಪೂಜಾರ, ಬಸವರಾಜ ಮುಳ್ಳಾಳ ಸೇರಿದಂತೆ ಮುಖಂಡರು, ಯುವಕರು, ವಿದ್ಯಾರ್ಥಿಗಳು ಇದ್ದರು.ಒಳ ಮೀಸಲಾತಿ ಜಾರಿಗೆ ಮನವಿ

ಗದಗ:

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಮಾಡಲು ಸರ್ವೋಚ್ಚ ನ್ಯಾಯಾಲಯ ಸಂಪೂರ್ಣ ಅಧಿಕಾರವನ್ನು ರಾಜ್ಯಗಳಿಗೆ ನೀಡಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸಿ ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾಧ್ಯಕ್ಷ ರಾಘವೇಂದ್ರ ಪರಸಪ್ಪ ಪರಾಪೂರ, ಅಶೋಕ ಹಾದಿಮನಿ, ಪಂಪಾಪತಿ ಅಗಸಿನಕೊಪ್ಪ, ವಿರುಪಾಕ್ಷಪ್ಪ ಗೌಡರ, ಮಂಜುನಾಥ ತೌಜಲ್, ರಮೇಶ ರಾಲದೊಡ್ಡಿ, ಸುಂಕಣ್ಣ ಗುತ್ತಿ, ಮರಿಯಪ್ಪ ಪರಾಪೂರ, ಪರಶುರಾಮ ಸಂಗಾಪೂರ, ಸದಾಶಿವ ಕೋಟ್ನಿಕಲ್, ಗೋಪಾಲ ಕೋಣಿಮನಿ, ಗೋವಿಂದ ಗುತ್ತಿ, ಮಂಜುನಾಥ ಪರಾಪೂರ, ವಿಕ್ರಮ ಮಾದರ, ವಿನಾಯಕ ಹೊಸಳ್ಳಿ, ವಿಶಾಲ ಹಾದಿಮನಿ ಸೇರಿದಂತೆ ಹಿರಿಯರು, ಯುವಕರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ