ಬಿಜೆಪಿ ಟಾರ್ಗೆಟ್‌ ರಾಜಕಾರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

KannadaprabhaNewsNetwork | Published : Jul 14, 2024 1:33 AM

ಸಾರಾಂಶ

ಮೂಡಾ ಹಗರಣ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಾನೂನು ಪಂಡಿತರೇ ಹೇಳಿದ್ದಾರೆ. ಬಿಜೆಪಿಗರು ರಾಜಕೀಯ ದುರುದ್ದೇಶದಿಂದ ಸಿಎಂ ಹಾಗೂ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುವಾಲ್ಮೀಕಿ ನಿಗಮ ಹಗರಣ ಹಾಗೂ ಮೈಸೂರಿನ ಮೂಡಾ ಸೈಟ್‌ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಟಾರ್ಗೆಟ್‌ ರಾಜಕಾರಣ ನಡೆಸುತ್ತಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಬಿಜೆಪಿ ಈಗ ವಿಪಕ್ಷದಲ್ಲಿದೆ. ಮಾಡಬಾರದ ಎಲ್ಲ ಹಗರಣ ಮಾಡಿ 60 ಸ್ಥಾನಕ್ಕೆ ಇಳಿಕೆಯಾಗಿದ್ದಾರೆ. ರಾಜ್ಯದ ಜನತೆ ಎದುರು ಹೋರಾಟ ನಡೆಸಲು ವಾಲ್ಮೀಕಿ, ಮೂಡಾ ಅವ್ಯವಹಾರ ಎಂದು ಹೊರಟಿದ್ದಾರೆ. ಮೂಡಾ ಹಗರಣ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಾನೂನು ಪಂಡಿತರೇ ಹೇಳಿದ್ದಾರೆ. ಬಿಜೆಪಿಗರು ರಾಜಕೀಯ ದುರುದ್ದೇಶದಿಂದ ಸಿಎಂ ಹಾಗೂ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.

ವಾಲ್ಮೀಕಿ ನಿಗಮ ಹಗರಣ ವಿಚಾರದಲ್ಲಿ ಈಗಾಗಲೇ ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸಿ ಇಡಿ ತನಿಖೆ ನಡೆಸುತ್ತಿದೆ. ಇದೇ ವೇಳೆ ರಾಜ್ಯ ಸರ್ಕಾರ ಕೂಡ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈಗ ತನಿಖೆ ನಡೆಯುತ್ತಿರುವುದರಿಂದ ಏನೂ ಹೇಳುವುದಿಲ್ಲ. ನಾನು ಏನೋ ಹೇಳಿ ರಾದ್ಧಾಂತ ಆಗುವುದು ಬೇಡ, ತನಿಖೆ ಪೂರ್ಣಗೊಂಡ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದರು.

ತುರ್ತು ಪರಿಸ್ಥಿತಿ ರಾಜಕಾರಣ:

ತುರ್ತು ಪರಿಸ್ಥಿತಿ ಹೇರಿದ ಜೂ.25ರಂದು ಸಂವಿಧಾನ ಹತ್ಯಾ ದಿನ ಎಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸುವ ಮೂಲಕ ಅದರಲ್ಲೂ ರಾಜಕಾರಣ ಮಾಡಲು ಹೊರಟಿದ್ದಾರೆ. ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌ ಎನ್ನುವ ಬಿಜೆಪಿಗರು ವಿಧಾನ ಬಗ್ಗೆ ಮಾತನಾಡುತ್ತಾ ಮುಸ್ಲಿಮರನ್ನು ಮಂತ್ರಿ ಮಾಡಿದ್ದಾರಾ ಅಥವಾ ಮುಸ್ಲಿಮರಿಗೆ ಟಿಕೆಟ್‌ ನೀಡಿದ್ದಾರಾ? ಸಂವಿಧಾನವನ್ನು ಗಾಳಿಗೆತೂರಿ ತೂರುವ ಸಂಸದರು ಸಂವಿಧಾನ ಬದಲಾಯಿಸುವ ಮಾತು ಆಡುತ್ತಿದ್ದಾರೆ. ದೇಶದಲ್ಲಿ ಮಹಿಳೆಯರು, ಕ್ರೀಡಾಳುಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಮೌನವಾಗಿರುವ ಬಿಜೆಪಿಗರು ಮೊದಲು ಸಂವಿಧಾನ ಬದ್ಧತೆಯ ರಾಜಕಾರಣ ನಡೆಸಲಿ ಎಂದು ಹೆಬ್ಬಾಳ್ಕರ್‌ ಹೇಳಿದರು.

ಕಾಂಗ್ರೆಸ್‌ ಸೋಲಿಗೆ ಓಲೈಕೆ ಕಾರಣ ಅಲ್ಲ: ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಓಲೈಕೆ ರಾಜಕಾರಣದಿಂದ ಕಾಂಗ್ರೆಸ್‌ಗೆ ಸೋಲಾಗಲಿಲ್ಲ ಎಂದ ಅವರು, ಎಲ್ಲ ಕಡೆಗಳಲ್ಲೂ ಕಾರ್ಯಕರ್ತರು ಅಭ್ಯರ್ಥಿಗಳನ್ನು ಗೆಲ್ಲಿಸಲು ಯತ್ನಿಸಿದ್ದಾರೆ. ಅಭ್ಯರ್ಥಿಗಳ ಸೋಲಿನ ಕುರಿತು ಕಾಂಗ್ರೆಸ್‌ ವರಿಷ್ಠ ಮಧುಸೂದನ ಮಿಸ್ತ್ರಿ ಅವರಿಗೆ ವರದಿ ನೀಡಲಾಗಿದೆ. ಕಾಂಗ್ರೆಸ್‌ ಸೋಲಿಗೆ ಕೆಲವರು ಕಾರಣ ಎಂಬ ಮಾತಿನಲ್ಲಿ ಸತ್ಯ ಇಲ್ಲ, ಯಾವ ಕಾರಣಕ್ಕೆ ಹಿನ್ನಡೆಯಾಗಿದೆ ಎಂಬುದನ್ನು ಅಂಕಿಅಂಶ ಸಹಿತ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.

Share this article