ಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿ ವಿಕಾಸ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನಲ್ಲಿ ಸುಮಾರು ೩ ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ೧೦ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಮೈಸೂರಿನ ಟೌನ್ ಹಾಲ್‌ನ ಗ್ರೌಂಡ್‌ನಿಂದ ಪಾದಯಾತ್ರೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದ್ದು, ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಜಿಲ್ಲೆಯ ಬಿಜೆಪಿ ಮುಖಂಡರು, ಸಾರ್ವಜನಿಕರು ಪಾದಯಾತ್ರೆಯಲ್ಲಿ ಭಾಗವಹಿಸುವರು ಎಂದು ಹೇಳಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಹೋರಾಟ ನಡೆಸಿತ್ತು. ಇದಕ್ಕೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಠಿಸಲು ಮುಂದಾಗಿದೆ. ಇಂತಹ ದೇಶ ವಿರೋಧಿ ಷಡ್ಯಂತ್ರಗಳನ್ನು ದೇಶದ ಜನತೆ ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ರಾಹುಲ್‌ಗಾಂಧಿ ಅವರು ಪದೇ ಪದೇ ವಿದೇಶಕ್ಕೆ ತೆರಳಿ ದೇಶದಲ್ಲಿರುವ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸುವುದು ಹೇಗೆ, ನರೇಂದ್ರಮೋದಿಯನ್ನು ದೇಶದ ಶತ್ರುವೆಂಬಂತೆ ಬಿಂಬಿಸುವುದು ಹೇಗೆ, ದೇಶದಲ್ಲಿ ದಂಗೆ ಎಬ್ಬಿಸುವುದು, ಚುನಾವಣೆಯಲ್ಲಿ ಅಕ್ರಮಗಳನ್ನು ಎಸಗುವುದು ಹೇಗೆ ಎಂಬುದನ್ನು ಜಾರ್ಜ್‌ಸೋರಸ್‌ನಿಂದ ಕೋಚಿಂಗ್ ಪಡೆದುಕೊಂಡು ಬರುತ್ತಿದ್ದಾರೆ ಎಂದು ದೂರಿದರು.
ಎಸ್‌ಐಆರ್ ಪ್ರಕ್ರಿಯೆ ನಡೆಯುವಾಗ ಎಲ್ಲಾ ಪಕ್ಷದ ವತಿಯಿಂದ ಬಿಎಲ್‌ಎ - ೨ ಇದ್ದರೂ ಸಹ ಮತದಾರರ ಪಟ್ಟಿಯಿಂದ ಕೈ ಬಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ನಿಮ್ಮ ಪ್ರತಿನಿಧಿಗಳು ಸಹ ಎಸ್‌ಐಆರ್ ಸಂದರ್ಭದಲ್ಲಿ ಬಿಎಲ್‌ಓ ಜೊತೆ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಆಗ ಅವರಿಗೆ ಮತದಾರರ ಪಟ್ಟಿಯಿಂದ ನೈಜ ಮತದಾರರನ್ನು ಕೈಬಿಡುತ್ತಿರುವ ಮಾಹಿತಿ ತಿಳಿಯಲಿಲ್ಲವೇ ಎಂದು ಗುಡುಗಿದರು.