2028ಕ್ಕೆ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ

KannadaprabhaNewsNetwork |  
Published : May 17, 2026, 02:00 AM IST
ಹುಬ್ಬಳ್ಳಿ ಅರವಿಂದ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿದರು. | Kannada Prabha

ಸಾರಾಂಶ

ಹಿಂದುತ್ವದ ವಿಚಾರಧಾರೆ ಇಟ್ಟುಕೊಂಡು ದೇಶಾದ್ಯಂತ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದೆ. ಅದನ್ನು ಸಹಿಸದ ರಾಜ್ಯ ಕಾಂಗ್ರೆಸ್‌ ಸರ್ಕಾರ ಆತಂಕಗೊಂಡಿದ್ದು, ಶಾಲೆಗಳಲ್ಲಿ ಹಿಜಾಬ್‌ ಧರಿಸಿಕೊಂಡು ಬರಲು ಮುಸ್ಲಿಂ ಮಕ್ಕಳಿಗೆ ಕರೆ ನೀಡುವ ಮೂಲಕ ಹಿಜಾಬ್‌ ವಿವಾದ ಮುನ್ನೆಲೆಗೆ ತಂದಿದೆ.

ಹುಬ್ಬಳ್ಳಿ:

ದೇಶಾದ್ಯಂತ ಬಿಜೆಪಿ ತನ್ನ ವಿಜಯ ಪತಾಕೆ ಮುಂದುವರಿಸಿದ್ದು 2028ರಲ್ಲಿ ಕರ್ನಾಟಕದಲ್ಲಿಯೂ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಇಲ್ಲಿನ ಅರವಿಂದ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿಂದುತ್ವದ ವಿಚಾರಧಾರೆ ಇಟ್ಟುಕೊಂಡು ದೇಶಾದ್ಯಂತ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದೆ. ಅದನ್ನು ಸಹಿಸದ ರಾಜ್ಯ ಕಾಂಗ್ರೆಸ್‌ ಸರ್ಕಾರ ಆತಂಕಗೊಂಡಿದ್ದು, ಶಾಲೆಗಳಲ್ಲಿ ಹಿಜಾಬ್‌ ಧರಿಸಿಕೊಂಡು ಬರಲು ಮುಸ್ಲಿಂ ಮಕ್ಕಳಿಗೆ ಕರೆ ನೀಡುವ ಮೂಲಕ ಹಿಜಾಬ್‌ ವಿವಾದ ಮುನ್ನೆಲೆಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿಕೊಂಡು ಶಾಲೆಗೆ ಹೋಗಲು ಸೂಚಿಸುತ್ತೇವೆ, ಅದೆಷ್ಟು ವಿದ್ಯಾರ್ಥಿಗಳನ್ನು ಬಂಧಿಸುತ್ತಾರೆ ನೋಡೋಣ ಎಂದು ಸವಾಲು ಹಾಕಿದ ಅವರು, ಕಾಂಗ್ರೆಸ್‌ ಪಜಾ, ಪಪಂ, ಹಿಂದುಳಿದವರನ್ನು ಕೈಬಿಟ್ಟು ಅಲ್ಪಸಂಖ್ಯಾತರ ಓಲೈಕೆ ಏಕೆ ಮಾಡುತ್ತಿದೆ? ತನ್ನನ್ನು ತಾನು ಯಾರ ಪರ ಎಂಬುದನ್ನು ಬಿಂಬಿಸಿಕೊಳ್ಳಲು ಹೊರಟಿದೆ ಎಂದು ಟೀಕಿಸಿದರು.

ಬಿಜೆಪಿ ಕಾರ್ಯಕರ್ತರು ಎಸ್‌ಐಆರ್‌ಗೆ ಪೂರಕವಾದ ಕೆಲಸ ಮಾಡಲು ಮತ್ತು ನಿಜವಾದ ಮತದಾರರ ಬಗ್ಗೆ ಕಾಳಜಿ ವಹಿಸಿಬೇಕಿದೆ. ಆಯಾ ಬೂತ್‌ಗಳಲ್ಲಿ ತಮ್ಮ ಮತದಾರರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. ಮತದಾರರ ಪಟ್ಟಿ ಪರಿಷ್ಕರಣೆ ನಿರಂತರ, ಸತತವಾಗಿ ನಡೆಯುವ ಪ್ರಕ್ರಿಯೆ ಆಗಿದೆ. ಅದು ಸರಿಯಾಗಿ ಆಗಬೇಕು, ನಿಜವಾದ ಮತದಾರರನ್ನು ಮತದಾರ ಪಟ್ಟಿಯಲ್ಲಿ ಸೇರಿಸುವ ಕೆಲಸವಾಗಬೇಕು ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಹಿಜಾಬ್‌ ವಿಷಯವನ್ನು ಮುಂದಿಟ್ಟು ವಿದ್ಯಾರ್ಥಿಗಳಲ್ಲಿ ದ್ವೇಷ ಭಾವನೆ ಹುಟ್ಟಿಸುವ ಕೆಲಸಕ್ಕೆ ಮುಂದಾಗಿದೆ. ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ಬೆನ್ನು ಬಿದ್ದಿರುವ ಕಾಂಗ್ರೆಸ್‌ನಲ್ಲಿ ಮನೆಯೊಂದು ಮೂರು ಬಾಗಿಲು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅದು ಬಹಿರಂಗಗೊಳ್ಳಬಾರದು ಎಂಬ ಕಾರಣಕ್ಕೆ ಈಗ ಹಿಜಾಬ್‌ ನಂತಹ ವಸ್ತ್ರ ಸಂಹಿತೆಗೆ ಕೈಹಾಕಿದೆ ಎಂದು ಟೀಕಿಸಿದರು.

ಸಭೆಯಲ್ಲಿ ಮಾಜಿ ಶಾಸಕ ಅಶೋಕ ಕಾಟವೆ, ಬಿಜೆಪಿ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಜಯತೀರ್ಥ ಕಟ್ಟಿ, ಉಪ ಮೇಯರ್‌ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಬಸವರಾಜ ಗರಗ, ಮಂಜುನಾಥ ಕಾಟಕರ, ಮಂಜುನಾಥ ಮಲ್ಲಿಗವಾಡ, ಸತೀಶ ಶೇಜವಾಡಕರ, ಸೀಮಾ ಲದವಾ, ವಸಂತ ನಾಡಜೋಶಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ, ಬಿರುಗಾಳಿಗೆ ನೂರಾರು ಎಕರೆ ಬಾಳೆ ನೆಲಕ್ಕೆ
ಕೊಪ್ಪಳದ ಪ್ರಜ್ಞಾವಂತರು ಮಾಲಿನ್ಯದ ವಿರುದ್ಧ ಬೀದಿಗಿಳಿಯಲಿ