ಕಾರವಾರ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಪ್ರಮುಖ ಆರೋಪಿ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದನ್ನು ಖಂಡಿಸಿ ಆ. 18ರಿಂದ ಸರಣಿ ಉಗ್ರ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹಾಗೂ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ತಿಳಿಸಿದರು.
ಬಳಿಕ ಮಾತನಾಡಿದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ, ಈ ಭ್ರಷ್ಟಾಚಾರದ ವಿರುದ್ಧ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಬರುವ ಆ. 18ರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಿರಂತರ 6 ದಿನಗಳ ಕಾಲ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿನಿತ್ಯ ಒಂದೊಂದು ಕ್ಷೇತ್ರದಂತೆ ಸರದಿಯಲ್ಲಿ ಭಾಗವಹಿಸಿ ಧರಣಿ ನಡೆಸಲಿದ್ದಾರೆ. ಇದೇ ವೇಳೆ, ಪ್ರತಿ ಮಂಡಲಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮೋರ್ಚಾಗಳ ನೇತೃತ್ವದಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ನಂದನ್ ಬೋರ್ಕರ್, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ರಾಜೇಂದ್ರ ನಾಯ್ಕ, ಪ್ರಮುಖರಾದ ರವಿರಾಜ್ ಅಂಕೋಲೇಕರ್, ಮನೋಜ್ ಭಟ್, ನಯನಾ ನೀಲಾವರ್, ಕಿಶನ್ ಕಾಂಬ್ಳೆ ಇದ್ದರು.ಕೈಜೋಡಿಸಿ: ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಜಾಗೃತಿ ಮೂಡಿಸುವ ಮಹತ್ವದ ಅಭಿಯಾನಕ್ಕೆ ಜಿಲ್ಲೆಯಾದ್ಯಂತ ಚಾಲನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆದೇಶ ಹಾಗೂ ರಾಷ್ಟ್ರೀಯ ನಾಯಕ ನಿತಿನ್ ನಬೀನ್ ಸೂಚನೆಯಂತೆ ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಬೈಕ್ ರ್ಯಾಲಿ ಹಾಗೂ ತಿರಂಗಾ ಯಾತ್ರೆಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ಮನೆಯ ಮೇಲೂ ರಾಷ್ಟ್ರಧ್ವಜ ಹಾರಾಡಬೇಕು ಮತ್ತು ದೇಶಭಕ್ತಿ ಮೂಡಬೇಕು ಎನ್ನುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ರಾಷ್ಟ್ರೀಯ ಹಬ್ಬಕ್ಕೆ ಸಮಸ್ತ ಸಾರ್ವಜನಿಕರು ಕೈಜೋಡಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಹೇಳಿದರು.