ಕೊಪ್ಪಳ: ಬಿಡದಿ ಭಾಗದ ರೈತರ ಭೂಸ್ವಾಧೀನ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಸಿಎಂ ಬಂಡಾಟವಾಡುತ್ತಿದ್ದಾರೆ. ಇದರ ವಿರುದ್ಧ ಜು.೧೭ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಹಾಲಿ, ಮಾಜಿ ಶಾಸಕರು ಸೇರಿ ಪಕ್ಷದ ಮುಖಂಡರೊಂದಿಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ರಾಜ್ಯ ಸರ್ಕಾರ ಬಿಡದಿ ಭೂಸ್ವಾಧೀನ ವಿಚಾರವಾಗಿ ಮೂರು ಸದಸ್ಯರ ಸಮಿತಿ ರಚಿಸಿರುವುದು ಯಾವ ಪುರುಷಾರ್ಥಕ್ಕೆ ? ಒತ್ತಾಯಪೂರ್ವಕವಾಗಿ ರೈತರ ಜಮೀನು ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದರೂ ರಾತ್ರೋರಾತ್ರಿ ರೈತರ ಮನೆಗಳಿಗೆ ಗೂಂಡಾಗಳನ್ನು ಕಳುಹಿಸಿ ಒತ್ತಡ ಹೇರುವ ಕೆಲಸ ನಡೆಯುತ್ತಿದೆ. ಬಿಡದಿ ಭಾಗಕ್ಕೆ ಭೇಟಿ ನೀಡಿದ ವೇಳೆ ರೈತರು ತಮಗೆ, ಗೂಂಡಾಗಳು ಹೆದರಿಸುತ್ತಿದ್ದಾರೆ, ನಮಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದಾರೆ. ಬಲವಂತವಾಗಿ ಜಮೀನು ಪಡೆಯುವುದಿಲ್ಲ ಎಂಬ ನಾಟಕವಾಡುತ್ತಾ ಮತ್ತೊಂದೆಡೆ ಒತ್ತಾಯ ಪೂರ್ವಕವಾಗಿ ಭೂಸ್ವಾಧೀನ ನಡೆಸಲಾಗುತ್ತಿದೆ. ಇದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.
ರೈತರ ವಿರುದ್ಧ ಸರ್ಕಾರ ನಡೆಸುತ್ತಿರುವ ಷಡ್ಯಂತ್ರ ಮತ್ತು ಕುತಂತ್ರವನ್ನು ಬಿಜೆಪಿ ತೀವ್ರವಾಗಿ ಖಂಡಿಸಲಿದೆ. ಬಿಡದಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು. ರೈತರ ಕೋಪಕ್ಕೆ ಬಲಿಷ್ಠ ಸರ್ಕಾರ ಬಲಿಯಾಗಲಿದೆ. ಬಿಡದಿ ಭೂಸ್ವಾಧೀನ ವಿರೋಧಿಸಿ ಜು.೧೭ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಹಾಲಿ ಹಾಗೂ ಮಾಜಿ ಶಾಸಕರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.ಸಿಎಂ ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ತಿಳಿಯಲ್ಲ ಎಂದುಕೊಂಡಿದ್ದಾರೆ. ಸಿಎಂಗೆ ಯಾವ ರೀತಿ ಒತ್ತಡವಿದೆಯೋ ನಮಗೆ ತಿಳಿಯುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಹೊಟ್ಟೆ ತುಂಬಿಸಲು ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಭಂಡತನ ಪ್ರದರ್ಶನ ಬಿಟ್ಟು, ರೈತರ ಸಮಸ್ಯೆ ಆಲಿಸಬೇಕು. ರೈತರ ಸಮಸ್ಯೆ ಗೊತ್ತಿದೆ. ಸಮಸ್ಯೆ ಸೃಷ್ಟಿಕರ್ತರೇ ಈ ಸರ್ಕಾರ, ಈ ಪ್ರಾಜೆಕ್ಟ್ ನಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.
ಸಿಎಂ ಜೈಲಿಗೆ ಸೇರುವ ಅನುಕಂಪ ಗಿಟ್ಟಿಸಿಕೊಳ್ಳುವ ಹೇಳಿಕೆ ಕೊಡುವ ಇಷ್ಟವಿಲ್ಲ. ಸಿಎಂ ಇಂತಹ ಹೇಳಿಕೆ ಹೇಳುವುದನ್ನು ಬಿಡಬೇಕು ಎಂದರು.
ಈ ವೇಳೆ ಬಿಜೆಪಿಯ ಪ್ರಮುಖರಿದ್ದರು.