ಹಾವೇರಿ: ಭಾರತವನ್ನು ೨೦೪೭ಕ್ಕೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕಾದರೆ ಡ್ರಗ್ಸ್ ಹಾವಳಿಯಿಂದ ಮುಕ್ತವಾಗಬೇಕಿದೆ. ಸರ್ಕಾರ `ಆಪರೇಷನ್ ರೈಸ್ ಮತ್ತು ಬೇಡ ಬ್ರೋ'' ಎನ್ನುವ ಅಭಿಯಾನದ ಮೂಲಕ ಯುವಕರನ್ನು ಡ್ರಗ್ಸ್‌ನಿಂದ ಮುಕ್ತಗೊಳಿಸಲು ಮುಂದಾಗಿದ್ದು, ವಿದ್ಯಾರ್ಥಿ ಸಮುದಾಯ ಡ್ರಗ್ಸ್ ವ್ಯಸನಕ್ಕೆ ಒಳಗಾಗಿ ಉತ್ತಮ ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ರಾಜ್ಯ ಸರ್ಕಾರ ೨೦೨೮ರೊಳಗೆ ಮಾದಕ ದ್ರವ್ಯ ಮುಕ್ತ ಕರ್ನಾಟಕ ಮಾಡಲು ಮುಂದಾಗಿದೆ. ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರೈಸ್ ಮತ್ತು ಬೇಡ ಬ್ರೋ ಹೆಸರಿನಲ್ಲಿ ಅಭಿಯಾನ ಪ್ರಾರಂಭಿಸಿದೆ. ಆಪರೇಷನ್ ರೈಸ್ ಎಂಬುದು ತಿರಸ್ಕರಿಸಿ, ತಿಳಿಸಿ, ಬೆಂಬಲಿಸಿ ಹಾಗೂ ಸಬಲೀಕರಿಸಿ ಎನ್ನುವ ಧ್ಯೇಯ ಹೊಂದಿದೆ. ಮುಂದಿನ ೨೦ ದಿನಗಳ ಕಾಲ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಕಾಲೇಜು ಮಟ್ಟದಲ್ಲಿ ಅಭಿಯಾನ ನಡೆಸಲಾಗುತ್ತದೆ ಎಂದರು.
ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮುಕ್ತ ಕರ್ನಾಟಕ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಲಾಯಿತು. ಈ ವೇಳೆ ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿಗಳಾದ ಗಿರಿಮಲ್ಲ ತಳಕಲ್, ಲೋಕೇಶ, ನಿಸ್ಸೀಮಪ್ಪ ಹನಕನಹಳ್ಳಿ ಹಾಜರಿದ್ದರು.ಮಾದಕ ವಸ್ತು ನಾಶ: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಡ್ರಗ್ಸ್ ಸಂಬಂಧಿಸಿದ ೭೯ ಕೇಸ್ ದಾಖಲಿಸಿ, ₹೨೭.೨೬ ಲಕ್ಷ ಮೌಲ್ಯದ ೭೩ ಕೆಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು ನಾಶಪಡಿಸಲಾಗಿದೆ. ಮಾದಕದ್ರವ್ಯ ಸೇವನೆಯಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಸನ್ಮಿತ್ರ ಉಪಕ್ರಮದ ಅಡಿಯಲ್ಲಿ ಅವರ ಚಟುವಟಿಕೆ ಮೇಲ್ವಿಚಾರಣೆ, ಸಮಾಲೋಚನೆ, ಚಿಕಿತ್ಸೆ ಹಾಗೂ ಪುನರ್ವಸತಿ ಸೇವೆಗಳನ್ನು ಕಲ್ಪಿಸಿ ಆರೋಗ್ಯಕರ ಸಮಾಜ ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಹೇಳಿದರು.