ಸವಣೂರು: ಪಟ್ಟಣದ ಐತಿಹಾಸಿಕ ಪರಂಪರೆಯ ಹೆಗ್ಗುರುತಾಗಿರುವ ನವಾಬರ ದರ್ಬಾರ್ ಹಾಲ್‌ನ ಪುನರ್‌ನವೀಕರಣ ಕಾಮಗಾರಿ ಸಂದರ್ಭದಲ್ಲಿ ಕಟ್ಟಡಕ್ಕೆ ಸಂಬಂಧಿಸಿದ ಗೋಡೆಯ ಕಲ್ಲುಗಳು, ನೆಲಹಾಸಿನ ಕಲ್ಲುಗಳು ಹಾಗೂ ಇತರ ಐತಿಹಾಸಿಕ ನಿರ್ಮಾಣ ಸಾಮಗ್ರಿಗಳನ್ನು ಪುರಾತತ್ವ ಇಲಾಖೆ ಅಥವಾ ಪರಂಪರೆ ಇಲಾಖೆಯ ಪೂರ್ವಾನುಮತಿ ಇಲ್ಲದೆ ಕಾನೂನುಬಾಹಿರವಾಗಿ ಸ್ಥಳಾಂತರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ಸಾರ್ವಜನಿಕರು ತಹಸೀಲ್ದಾರ್ ಕಾರ್ಯಾಲಯದ ಮುಂಭಾಗದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಕೈಗೊಂಡು ತಹಸೀಲ್ದಾರ್ ರವಿಕುಮಾರ ಕೊರವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸ್ಥಳಾಂತರಗೊಂಡ ಕಲ್ಲುಗಳನ್ನು ಇಲಾಖೆಯ ವಶಕ್ಕೆ ಪಡೆದು ಸುರಕ್ಷಿತವಾಗಿ ಸಂರಕ್ಷಿಸುವಂತೆ ಹಾಗೂ ಮುಂದೆ ಇಂತಹ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಭದ್ರತೆ ಒದಗಿಸಬೇಕು. ದರ್ಬಾರ್ ಹಾಲ್ ಕೇವಲ ಒಂದು ಕಟ್ಟಡವಲ್ಲ, ಇತಿಹಾಸ-ಸಂಸ್ಕೃತಿಯ ಜೀವಂತ ಸಾಕ್ಷಿ ಎಂದು ಬಣ್ಣಿಸಿರುವ ಸಾರ್ವಜನಿಕರು ಪರಂಪರೆಗೆ ಧಕ್ಕೆಯಾಗದಂತೆ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರವೀಣ ಬಾಲೇಹೊಸೂರ, ಶ್ರೀನಿವಾಸ ಗಿತ್ತೆ, ಸಮೀತ ಕೆಮ್ಮಣಕೇರಿ, ದುರ್ಗಪ್ಪ ಗಡೇದ, ಸಂತೋಷ ಆಲ್ಲೂರ, ಸುನೀಲ ಹೊಸೂರ, ಕಿಸನ ಉಪ್ಪಾರ, ಮಹೇಶ ಕುಲಕರ್ಣಿ, ರಾಧಾಕೃಷ್ಣ ಗಿತ್ತೆ, ವಿನಾಯಕ ಕೊಳೂರ, ರಜು ಪೂಜಾರ, ಮಹದೇವ ಕೆಂಚಣ್ಣವರ, ಮಾಲತೇಶ ಮನೇಗಾರ, ಮಾಂತೇಶ ಗಡಗದಲಿ, ಪರಶುರಾಮ ಪೂಜಾರ ಹಾಗೂ ಇತರರು ಇದ್ದರು.