ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಿಗೆ ಕುಲಪತಿ ಗದ್ದುಗೆ ಕನಸು!

KannadaprabhaNewsNetwork |  
Published : Jul 16, 2026, 02:30 AM IST
ಹಾವೇರಿಯ ಜಾನಪದ ವಿಶ್ವವಿದ್ಯಾಲಯ | Kannada Prabha

ಸಾರಾಂಶ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಮಸ್ಯೆಗಳ ಸರಮಾಲೆಯೇ ಬಿಚ್ಚಿಕೊಂಡಿರುವ ಹೊತ್ತಿನಲ್ಲಿ ಇದೀಗ ಪ್ರಭಾರ ಕುಲಪತಿ ಹುದ್ದೆಗಾಗಿ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಯುತ್ತಿದೆ.

ನಾರಾಯಣ ಹೆಗಡೆ

ಹಾವೇರಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಮಸ್ಯೆಗಳ ಸರಮಾಲೆಯೇ ಬಿಚ್ಚಿಕೊಂಡಿರುವ ಹೊತ್ತಿನಲ್ಲಿ ಇದೀಗ ಪ್ರಭಾರ ಕುಲಪತಿ ಹುದ್ದೆಗಾಗಿ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಯುತ್ತಿದೆ.

ಅರ್ಹತೆ, ಹಿರಿತನ ಹಾಗೂ ವಿಶ್ವವಿದ್ಯಾಲಯದ ಪರಿನಿಯಮಗಳನ್ನು ಬದಿಗೊತ್ತಿ ಸಹಾಯಕ ಪ್ರಾಧ್ಯಾಪಕರೇ ಕುಲಪತಿ ಗದ್ದುಗೆ ಏರಲು ಪೈಪೋಟಿಗೆ ಇಳಿದಿದ್ದಾರೆ ಎಂಬ ಗಂಭೀರ ಆರೋಪ ವಿಶ್ವವಿದ್ಯಾಲಯದ ಅಂಗಳದಲ್ಲಿ ಕೇಳಿಬಂದಿದೆ.

ಹಾಲಿ ಕುಲಪತಿ ಟಿ.ಎಂ. ಭಾಸ್ಕರ್ ಅವರ ಅಧಿಕಾರಾವಧಿ ಜು.18ಕ್ಕೆ ಮುಕ್ತಾಯಗೊಳ್ಳಲಿದೆ. ಹೊಸ ಕುಲಪತಿ ನೇಮಕವಾಗುವ ವರೆಗೆ ಪ್ರಭಾರ ಕುಲಪತಿ ಯಾರು ಎಂಬ ಪ್ರಶ್ನೆಯೇ ಈಗ ವಿಶ್ವವಿದ್ಯಾಲಯದಲ್ಲಿ ಬಣ ರಾಜಕಾರಣಕ್ಕೆ ಕಾರಣವಾಗಿದೆ. ಕುಲಪತಿಯವರ ಶಿಷ್ಯ ಹಾಗೂ ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಿರುವ ಒಬ್ಬರು ಪ್ರಭಾರ ಕುಲಪತಿ ಹುದ್ದೆಗಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ. ಆದರೆ, ಇವರ ನೇಮಕಾತಿ ಕುರಿತಂತೆ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದು, ಇದರ ನಡುವೆಯೇ ಪ್ರಭಾರ ಕುಲಪತಿ ಹುದ್ದೆ ಪಡೆಯಲು ಕೆಲವು ರಾಜಕೀಯ ಮುಖಂಡರು ಮತ್ತು ವಿದ್ವಾಂಸರ ಮೂಲಕ ಕುಲಪತಿ ಮೇಲೆ ಒತ್ತಡ ತರಲಾಗುತ್ತಿದೆ ಎಂಬ ಮಾತು ವಿವಿಯಲ್ಲಿ ಹರಿದಾಡುತ್ತಿದೆ. ಈ ಬೆಳವಣಿಗೆಗಳಿಂದ ಹಾಲಿ ಕುಲಪತಿ ಇಕ್ಕಟ್ಟಿಗೆ ಸಿಲುಕಿದ್ದು, ಪ್ರಭಾರ ವ್ಯವಸ್ಥೆ ಕುರಿತು ರಾಜ್ಯಪಾಲರಿಗೆ ಪತ್ರ ಬರೆಯುವ ವಿಚಾರದಲ್ಲೂ ವಿಳಂಬವಾಗುತ್ತಿದೆ ಎನ್ನಲಾಗಿದೆ.

ಪರಿನಿಯಮ ಏನು ಹೇಳುತ್ತದೆ?: ವಿಶ್ವವಿದ್ಯಾಲಯದ ಪರಿನಿಯಮಗಳ ಪ್ರಕಾರ ಹಿರಿಯ ಡೀನ್ ಪ್ರಭಾರ ಕುಲಪತಿಯಾಗಬೇಕು. ಡೀನ್ ಇಲ್ಲದಿದ್ದಲ್ಲಿ ಹಿರಿಯ ಪ್ರಾಧ್ಯಾಪಕರಿಗೆ ಅವಕಾಶ ನೀಡಬೇಕಿದೆ. ಇವೆರಡೂ ಇಲ್ಲದಿದ್ದರೆ ಅಕ್ಕಪಕ್ಕದ ವಿವಿಯಲ್ಲಿನ ಜಾನಪದ ಶಿಸ್ತಿನ ವಿಭಾಗದ ಅರ್ಹರಿಗೆ ನೀಡಬೇಕು. ಆದರೆ, ಜಾನಪದ ವಿಶ್ವವಿದ್ಯಾಲಯದಲ್ಲಿ ಸದ್ಯ ಡೀನ್ ಹಾಗೂ ಪ್ರಾಧ್ಯಾಪಕ ಹುದ್ದೆಯಲ್ಲಿರುವವರು ಇಲ್ಲ. ಹೀಗಾಗಿ ಪ್ರಭಾರ ಕುಲಪತಿ ಆಯ್ಕೆ ಮತ್ತಷ್ಟು ಕಗ್ಗಂಟಾಗಿದೆ.

ವಿಶ್ವವಿದ್ಯಾಲಯದಲ್ಲಿರುವ ಎಂಟು ಮಂದಿ ಸಹಾಯಕ ಪ್ರಾಧ್ಯಾಪಕರ ಪೈಕಿ ಕೆಲವರ ಶೈಕ್ಷಣಿಕ ಅರ್ಹತೆ ಮತ್ತು ಪಿಎಚ್‌ಡಿ ಪದವಿ ಪಡೆದ ಅವಧಿಯ ಬಗ್ಗೆಯೂ ಪ್ರಶ್ನೆಗಳು ಕೇಳಿಬಂದಿವೆ. ಕೆಲವರು ನೇಮಕಾತಿ ಸಂದರ್ಭದಲ್ಲಿ ಪಿಎಚ್‌ಡಿ ಹೊಂದಿರಲಿಲ್ಲ, ಮತ್ತೆ ಕೆಲವರು ನೇಮಕದ ನಂತರ ಪಿಎಚ್‌ಡಿ ಪಡೆದಿದ್ದಾರೆ ಎನ್ನಲಾಗಿದೆ. ಇಷ್ಟಿದ್ದರೂ ಪ್ರಭಾರ ಕುಲಪತಿ ಹುದ್ದೆಗಾಗಿ ಪೈಪೋಟಿ ನಡೆಯುತ್ತಿರುವುದು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹಿರಿತನ ಪಟ್ಟಿಯೇ ಇಲ್ಲ: ಇನ್ನೂ ಗಂಭೀರ ಸಂಗತಿ ಎಂದರೆ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಬಳಿಕ ಇದುವರೆಗೆ ಅಧಿಕೃತ ಹಿರಿತನ ಪಟ್ಟಿ ಸಿದ್ಧಪಡಿಸಿಲ್ಲ ಎನ್ನಲಾಗಿದೆ. ಹೀಗಾಗಿ ಯಾರು ಹಿರಿಯರು? ಎಂಬುದಕ್ಕೆ ವಿಶ್ವವಿದ್ಯಾಲಯದಲ್ಲಿಯೇ ಸ್ಪಷ್ಟ ದಾಖಲೆ ಇಲ್ಲ. ಹಿರಿತನ ನಿರ್ಧಾರಕ್ಕೆ ಸಮಿತಿ ರಚಿಸಿ, ಅರ್ಹತೆ ಮತ್ತು ಮೆರಿಟ್ ಆಧಾರದಲ್ಲಿ ಪಟ್ಟಿ ಸಿದ್ಧಪಡಿಸಬೇಕು ಎಂದು ಸಿಂಡಿಕೇಟ್ ಸದಸ್ಯರು ಈ ಹಿಂದೆಯೇ ಒತ್ತಾಯಿಸಿದ್ದರು. ನಿಯಮಬಾಹಿರವಾಗಿ ಹಿರಿತನ ನಿಗದಿ ಮಾಡಬಾರದು ಎಂದೂ ಸಭೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಕಳೆದ ಒಂದೂವರೆ ವರ್ಷದಿಂದ ಹಿರಿತನ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

ಆದರೆ ಈಗ ಕುಲಪತಿ ಹುದ್ದೆ ಖಾಲಿಯಾಗುತ್ತಿದ್ದಂತೆ ನಾನೇ ಹಿರಿಯ ಎಂಬ ವಾದ ಮುಂದಿಟ್ಟು ಪ್ರಭಾರ ಹುದ್ದೆ ಪಡೆಯಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆ. ಇದರಿಂದ ವಿವಿ ಕ್ಯಾಂಪಸ್‌ನಲ್ಲಿ ಎರಡು ಬಣಗಳು ಸೃಷ್ಟಿಯಾಗಿದ್ದು, ಅಧಿಕಾರಕ್ಕಾಗಿ ಶೀತಲ ಸಮರ ಆರಂಭವಾಗಿದೆ.

ಅಲ್ಲಿ ವೇತನಕ್ಕೆ ಧರಣಿ; ಇಲ್ಲಿ ಕುರ್ಚಿಗೆ ಕಚ್ಚಾಟ: ವಿಪರ್ಯಾಸವೆಂದರೆ, ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಾಗಿ ಎರಡು ಶೈಕ್ಷಣಿಕ ವರ್ಷಗಳಲ್ಲಿ ಸುಮಾರು ಹತ್ತು ತಿಂಗಳು ಸೇವೆ ಸಲ್ಲಿಸಿದವರು ಆದೇಶ ಮತ್ತು ವೇತನಕ್ಕಾಗಿ ಕಳೆದ ಐದು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಹೊರಗುತ್ತಿಗೆ ನೌಕರರು ಕೂಡ ಬಾಕಿ ವೇತನಕ್ಕಾಗಿ ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. ಒಂದೆಡೆ ಬದುಕಿಗಾಗಿ ನೌಕರರು ಧರಣಿ ಕುಳಿತಿದ್ದರೆ, ಮತ್ತೊಂದೆಡೆ ಪ್ರಭಾರ ಕುಲಪತಿ ಹುದ್ದೆಗಾಗಿ ಅನರ್ಹರ ನಡುವೆ ಅಧಿಕಾರದ ಪೈಪೋಟಿ ನಡೆಯುತ್ತಿದ್ದು, ಈ ಘಟನಾವಳಿಗಳು ವಿಶ್ವವಿದ್ಯಾಲಯದ ಘನತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆ ವಿಮೆ ಗೊಂದಲ ಬಗೆಹರಿಸಿ, ಹಾವೇರಿ ಜಿಲ್ಲೆ ಬರಪೀಡಿತವೆಂದು ಘೋಷಿಸಲು ಆಗ್ರಹ
ಮಹದಾಯಿ ಹೋರಾಟಕ್ಕೆ ಬರೋಬ್ಬರಿ ೧೦ ವರ್ಷ