ಬರುವ ಬಜೆಟ್‌ನಲ್ಲಿ ₹14 ಸಾವಿರ ಕೋಟಿ ದಲಿತ ಮೀಸಲು ಹಣ ಮುಳುಗಿಸಲು ಪ್ರಸ್ತಾವನೆ ಸಿದ್ಧ
ಗ್ಯಾರಂಟಿ ಯೋಜನೆ ಜಾರಿಗೆ ಸರ್ಕಾರದ ಬಳಿ ಹಣವಿಲ್ಲಬಳ್ಳಾರಿ ಪ್ರತಿಭಟನೆಯಲ್ಲಿ ಸಂಸದ ಯದುವೀರ್, ಛಲವಾದಿ ನಾರಾಯಣಸ್ವಾಮಿ ಭಾಗಿಕನ್ನಡಪ್ರಭ ವಾರ್ತೆ ಬಳ್ಳಾರಿ
ದಲಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಾಗಿರುವ ಎಸ್ಸಿಎಸ್ಪಿ-ಟಿಎಸ್ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲು ಮುಂದಾಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಬರುವ ಬಜೆಟ್‌ನಲ್ಲಿ ಸುಮಾರು 14 ಸಾವಿರ ಕೋಟಿ ರು.ಗಳನ್ನು ದಲಿತ ಮೀಸಲು ಹಣವನ್ನು ಮುಳುಗಿಸಲು ಪ್ರಸ್ತಾವನೆ ಸಿದ್ಧಪಡಿಸಿಕೊಂಡಿದೆ ಎಂದು ಕೆಜಿಎಫ್‌ನ ಮಾಜಿ ಶಾಸಕ ವೈ. ಸಂಪಂಗಿ ಆರೋಪಿಸಿದರು.ಇಲ್ಲಿನ ಪಕ್ಷದ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಈ ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ ದಲಿತ ಸಮುದಾಯಗಳ ಕಲ್ಯಾಣಕ್ಕೆಂದು ಮೀಸಲಾಗಿರುವ ಹಣದ ಮೇಲೆ ಸಿದ್ಧರಾಮಯ್ಯನವರ ಸರ್ಕಾರದ ಕಣ್ಣು ಬಿದ್ದಿದೆ. ಶೀಘ್ರದಲ್ಲಿಯೇ ಮಂಡಿಸುವ ರಾಜ್ಯ ಬಜೆಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಗೆ 7,344.77 ಕೋಟಿ ರು, ಗೃಹಜ್ಯೋತಿಗೆ 3,467.34, ಶಕ್ತಿ ಯೋಜನೆ 1209, ಅನ್ನಭಾಗ್ಯ 2125, ಯುವನಿಧಿಗೆ 342.75 ಕೋಟಿ ರು. ಸೇರಿದಂತೆ ಒಟ್ಟು 14,488.86 ಕೋಟಿ ರು.ಗಳನ್ನು 2025-26ನೇ ಸಾಲಿನ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಲು ಪ್ರಸ್ತಾವ ಸಿದ್ಧಪಡಿಸಿಕೊಳ್ಳಲಾಗಿದೆ. ಇದು ಸರ್ಕಾರದ ದಲಿತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜಾತಿ ಆಧಾರಿತ ಅಭಿವೃದ್ಧಿ ನಿಗಮಗಳು ಸಂಪೂರ್ಣ ಸೊರಗಿವೆ. ಗಂಗಾ ಕಲ್ಯಾಣ, ಐರಾವತ ವಾಹನ ಯೋಜನೆ, ಭೂ ಒಡೆತನ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ನೆರವಾಗುವ ಅರಿವು ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಅನುಷ್ಠಾನವಿಲ್ಲದೆ ಸ್ಥಗಿತಗೊಂಡಿವೆ. ರಾಜ್ಯ ಸರ್ಕಾರದ ದಲಿತ ಹಾಗೂ ಜನವಿರೋಧಿ ನೀತಿ ಖಂಡಿಸಿ ಫೆ.28ರಂದು ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ. ಬಳ್ಳಾರಿಯಲ್ಲಿ ಜರುಗುವ ಪ್ರತಿಭಟನೆಯಲ್ಲಿ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ದುರ್ಯೋದನ ಐಹೊಳೆ, ಪಕ್ಷದ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಪಕ್ಷದ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಕೆ.ಎಸ್. ದಿವಾಕರ್, ಮುಖಂಡರಾದ ಎಚ್.ಹನುಮಂತಪ್ಪ, ಉಡೇದ ಸುರೇಶ್ ತೋರಣಗಲ್, ಶಿವಶಂಕರ್, ಓಬಳೇಶ್ ಮತ್ತಿತರರಿದ್ದರು.