ಕಾಂಗ್ರೆಸ್‌ ಭ್ರಷ್ಟತೆ ಖಂಡಿಸಿ ನಾಳೆ ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Apr 7, 2025 12:36 AM

ಸಾರಾಂಶ

ಕಾಂಗ್ರೆಸ್ ಸರ್ಕಾರದ ಭ್ರಷ್ಟತೆ, ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ, ಎಸ್‌ಸಿ, ಎಸ್‌ಟಿ ಅನುದಾನದ ದುರ್ಬಳಕೆ ಹಾಗೂ ೧೮ ಬಿಜೆಪಿ ಶಾಸಕರ ೬ ತಿಂಗಳ ಅಮಾನತು ವಿರೋಧಿಸಿ ಮಂಗಳವಾರ ಪಕ್ಷದ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಅಶೋಕ್, ಮೇಲ್ಮನೆ ವಿರೋಧ ಪಕ್ಷದ ನಾಯಕರಾದಂತಹ ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಮುಖಂಡರ ನೇತೃತ್ವದಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇದ್ರ ತಿಳಿಸಿದರು. ೧೮ ಜನ ಬಿಜೆಪಿ ಶಾಸಕರ ೬ ತಿಂಗಳ ಅಮಾನತು ಮಾಡಿರುವ ರಾಜ್ಯ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಕಾಂಗ್ರೆಸ್ ಸರ್ಕಾರದ ಭ್ರಷ್ಟತೆ, ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ, ಎಸ್‌ಸಿ, ಎಸ್‌ಟಿ ಅನುದಾನದ ದುರ್ಬಳಕೆ ಹಾಗೂ ೧೮ ಬಿಜೆಪಿ ಶಾಸಕರ ೬ ತಿಂಗಳ ಅಮಾನತು ವಿರೋಧಿಸಿ ಮಂಗಳವಾರ ಪಕ್ಷದ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಅಶೋಕ್, ಮೇಲ್ಮನೆ ವಿರೋಧ ಪಕ್ಷದ ನಾಯಕರಾದಂತಹ ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಮುಖಂಡರ ನೇತೃತ್ವದಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇದ್ರ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟತೆ ತುಂಬಿ ತೇಲಾಡುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ ೮ರಂದು ಮಂಗಳವಾರ ಮಧ್ಯಾಹ್ನ ೩ ಗಂಟೆಗೆ ಹಳೆ ತಾಲೂಕು ಕಚೇರಿ ಮುಂಭಾಗದಿಂದ ಪಾದಯಾತ್ರೆ ಮೂಲಕ ಬಿ.ಎಂ. ರಸ್ತೆಯಿಂದ ಎನ್.ಆರ್. ವೃತ್ತದ ಮೂಲಕ ಹೇಮಾವತಿ ಪ್ರತಿಮೆ ಬಳಿ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಅಶೋಕ್, ಮೇಲ್ಮನೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಜಿಲ್ಲೆಯ ಶಾಸಕರಾದ ಸಿಮೆಂಟ್ ಮಂಜು, ಎಚ್.ಕೆ. ಸುರೇಶ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಸೇರಿದಂತೆ ರಾಜ್ಯದ ಹಲವಾರು ಮುಖಂಡರ ನೇತೃತ್ವದಲ್ಲಿ ಒಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ಎಲ್ಲಾ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದರು. ಡೀಸೆಲ್, ಪೆಟ್ರೋಲ್ ಬೆಲೆ ಇರಬಹುದು, ಹಾಲಿನ ದರದಲ್ಲಿ ಹೆಚ್ಚಳ ಸೇರಿದಂತೆ ಹಲವಾರು ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಕಂಡು ಬಂದಿದೆ. ರಾಜ್ಯದ ಬೊಕ್ಕಸದಿಂದ ಪುಸ್ಕಟ್ಟೆ ಭಾಗ್ಯಗಳಿಗಾಗಿ ಎಸ್‌ಸಿ, ಎಸ್‌ಟಿ ಅನುದಾನದ ದುರ್ಬಳಕೆ ಈ ಮೂರು ವರ್ಷದ ಬಜೆಟ್‌ನಲ್ಲಿ ೩೯ ಸಾವಿರ ಕೋಟಿಗಿಂತ ಹೆಚ್ಚಾಗಿದೆ. ಕೆಲ ದಿನಗಳ ಹಿಂದೆ ನಡೆದಂತಹ ಅಧಿವೇಶನದಲ್ಲಿ ೧೮ ಜನ ಬಿಜೆಪಿ ಶಾಸಕರ ೬ ತಿಂಗಳ ಅಮಾನತು ಮಾಡಿರುವ ರಾಜ್ಯ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದು, ಜನರಿಂದಲೇ ಒಂದು ಕಡೆ ಕಸಿದುಕೊಂಡು ಇನ್ನೊಂದು ಕಡೆ ಉಚಿತ ಕೊಡುವುದಾಗಿದೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದರಿಂದ ರಾಜ್ಯದ ಬೊಕ್ಕಸಕ್ಕೆ ವರ್ಷದ ಆಯವ್ಯಯ ನೋಡಿದರೇ ೬೦ ಸಾವಿರ ಕೋಟಿಗೂ ಹೆಚ್ಚಿನ ಬಜೆಟ್ ರೀತಿ ತಿಳಿಯುತ್ತದೆ. ಜನಸಾಮಾನ್ಯರಿಗೆ ಯಾವುದೇ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ಕೊಡುತ್ತಿಲ್ಲ. ನಮ್ಮ ಪಕ್ಷ ಗೆಲ್ಲುವವರಿಗೂ ಹೋರಾಟ ನಿರಂತರವಾಗಿರುತ್ತದೆ. ಇದನ್ನ ಬದಲಾವಣೆ ಮಾಡುವವರಿಗೂ ಹೋರಾಟ ಇರುತ್ತದೆ. ಜನಸಾಮಾನ್ಯರಿಗೆ ಹಾಕಲಾಗಿರುವ ಕತ್ತರಿಗೆ ಆದಷ್ಟು ಬೇಗ ಹೊಲಿಗೆ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲೇಬೇಕು. ಇದಕ್ಕಾಗಿ ಉಗ್ರ ಹೋರಾಟ ಇದ್ದೇ ಇರುತ್ತದೆ. ಏಪ್ರಿಲ್ ೮ರ ಹೋರಾಟದಲ್ಲಿ ಸುಮಾರು ೫ ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಬಿಜೆಪಿ ನಗರಾಧ್ಯಕ್ಷ ಯೋಗೇಶ್ ಗೌಡ (ಮಂಜು), ಪಕ್ಷದ ಮುಖಂಡರಾದ ರಾಜಕುಮಾರ್, ರಾಜೀವ್, ಹರ್ಷಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article