ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ಇಂದಿನ ಯಾವುದೇ ಸರ್ಕಾರಗಳು ಜಾರಿಗೆ ತರುವ ಜನಪರ ಯೋಜನೆಗಳಲ್ಲಿ ಇಂಧಿರಾ ಗಾಂಧಿ ಅವರ 20 ಅಂಶದ ಕಾರ್ಯಕ್ರಮ ಅಡಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂಧಿರಾ ಗಾಂಧಿ ಜನಪರ ಕಾರ್ಯಕ್ರಮಗಳ ಹೆಸರು ಬದಲಾವಣೆ ಮಾಡಿರುವುದೇ ಅವರ ಸಾಧನೆ. ಮಹಾತ್ಮ ಗಾಂಧಿ, ನೆಹರೂ, ಇಂದಿರಾ ಗಾಂಧಿ ಹೆಸರನ್ನು ಇತಿಹಾಸ ಪುಟದಿಂದ ಮರೆಮಾಚಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಇಂದಿರಾ ಗಾಂಧಿ ಅವರು ಗರೀಬಿ ಹಠಾವೊ, ಪಡಿತರ ಚೀಟಿ ಯೋಜನೆ, ಅಂಗನವಾಡಿ, ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲ ಕ್ರಾಂತಿ, ಜಾತಿ ಪದ್ಧತಿ ನಿರ್ಮೂಲನೆ, ಬ್ಯಾಂಕುಗಳ ರಾಷ್ಟ್ರೀಕರಣ ಜಾರಿಗೊಳಿಸಿ ದೇಶದ ಆರ್ಥಿಕ ವೃದ್ಧಿಗೆ ಶಕ್ತಿ ತುಂಬಿದರು. ಸಾಲ ಮನ್ನ ಜಾರಿಗೆ ತಂದು ಜನ ಸಾಮಾನ್ಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾರಣರಾದರು ಎಂದು ಸ್ಮರಿಸಿದರು.ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಮಾಜಿ ಪ್ರ.ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ, ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ಎಸ್. ಅಪ್ಪಿ ಮಾತನಾಡಿದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆ.ಅಶ್ರಫ್, ಬ್ಲಾಕ್ ಅಧ್ಯಕ್ಷ ಬಿ.ಎಲ್.ಪಿ ಪದ್ಮನಾಭ ಕೋಟ್ಯಾನ್, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಇಬ್ರಾಹಿಂ ನವಾಝ್, ಕೆ.ಕೆ.ಶಾಹುಲ್ ಹಮೀದ್, ಶುಭಾಷ್ ಶೆಟ್ಟಿ ಕೊಲ್ನಾಡು, ಜೋಕಿಂ ಡಿಸೋಜ, ಉಷಾ ಅಂಚನ್, ಶೈಲಜಾ ಬಂಟ್ವಾಳ ಮತ್ತಿತರರು ಇದ್ದರು.