ರಾಜ್ಯ ಕಾಂಗ್ರೆಸ್ ಸರ್ಕಾರ ಯಾರ ಮೇಲೆಯೋ ಸೇಡಿನ ರಾಜಕಾರಣ ಮಾಡುತ್ತಿಲ್ಲ : ಗೃಹ ಸಚಿವ ಡಾ. ಜಿ. ಪರಮೇಶ್ವರ

KannadaprabhaNewsNetwork |  
Published : Oct 06, 2024, 01:29 AM ISTUpdated : Oct 06, 2024, 12:44 PM IST
5456 | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ಯಾರ ಮೇಲೆಯೋ ಸೇಡಿನ ರಾಜಕಾರಣ ಮಾಡುತ್ತಿಲ್ಲ. ಯಾವುದೇ ಹಗರಣ ಅಥವಾ ಭ್ರಷ್ಟಾಚಾರದ ಬಗ್ಗೆ ದೂರು ಕೇಳಿ ಬಂದಲ್ಲಿ ಅದನ್ನು ಮೊದಲು ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ಮಾಡುತ್ತೇವೆ.

ಹುಬ್ಬಳ್ಳಿ:  ಮುಡಾ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ತಾಳ್ಮೆಯಿಂದ ಕಾಯ್ದು ನೋಡುವ ವ್ಯವಧಾನವೂ ಇಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಕಿಡಿಕಾರಿದರು.

ಶನಿವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಈ ಪ್ರಕರಣದ ಕುರಿತು ಪೊಲೀಸ್ ಹಾಗೂ ಲೋಕಾಯುಕ್ತ ತನಿಖೆ ನಡೆಸಲಾಗುತ್ತಿದೆ. ಅದನ್ನು ತಾಳ್ಮೆಯಿಂದ ಕಾಯ್ದು ನೋಡಲಿ. ಮುಡಾ ಪ್ರಕರಣವನ್ನು ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರು ರಾಜಕಾರಣಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷದವರು ಸರ್ಕಾರಕ್ಕೆ ಸಲಹೆ, ಸೂಚನೆ ನೀಡಬೇಕು. ಅದನ್ನು ಮೀರಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್‌ಗೆ ಬಿಜೆಪಿಯವರು ರಾಜಕಾರಣದ ಬಗ್ಗೆ ಹೇಳಿಕೊಡಬೇಕಾ? ಎಂದು ಪ್ರಶ್ನಿಸಿದರು.

ಜಾತಿ ಗಣತಿ ವಿಚಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿ ಹೇಳಿದ್ದಾರೆ. ಅದರಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಂಡು ಅಸೆಂಬ್ಲಿಯಲ್ಲಿ ಇಡಬೇಕಾಗುತ್ತದೆ. ಅಲ್ಲಿ ಏನೇನು ಚರ್ಚೆ ನಡೆಯುತ್ತದೆ ಎಂಬುದನ್ನು ನೋಡಿಕೊಂಡು, ನಂತರ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.

ಸೇಡಿನ ರಾಜಕಾರಣ ಮಾಡಲ್ಲ:

ರಾಜ್ಯ ಕಾಂಗ್ರೆಸ್ ಸರ್ಕಾರ ಯಾರ ಮೇಲೆಯೋ ಸೇಡಿನ ರಾಜಕಾರಣ ಮಾಡುತ್ತಿಲ್ಲ. ಯಾವುದೇ ಹಗರಣ ಅಥವಾ ಭ್ರಷ್ಟಾಚಾರದ ಬಗ್ಗೆ ದೂರು ಕೇಳಿ ಬಂದಲ್ಲಿ ಅದನ್ನು ಮೊದಲು ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ಮಾಡುತ್ತೇವೆ. ಅದರಲ್ಲಿ ಏನಾದರೂ ಸತ್ಯಾಂಶ ಕಂಡು ಬಂದಲ್ಲಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದರು.

ವಿಶೇಷ ಅರ್ಥ ಕಲ್ಪಿಸಬೇಡಿ:

ಸಚಿವ ಸತೀಶ ಜಾರಕಿಹೊಳಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಜಾರಕಿಹೊಳಿ ಅವರು ಪುತ್ರಿ ಸಂಸದೆ ಇರುವ ಕಾರಣಕ್ಕೆ ದೆಹಲಿಯಲ್ಲಿ ಕ್ವಾಟರ್ಸ್‌ ಪಡೆದುಕೊಳ್ಳುವ ವಿಚಾರವಾಗಿ ಭೇಟಿಯಾಗಿದ್ದಾರೆ. ಇತ್ತೀಚೆಗೆ ಕಾಶ್ಮೀರದಲ್ಲಿ ಭಾಷಣ ಮಾಡುವ ವೇಳೆ ಖರ್ಗೆ ಅಸ್ವಸ್ಥರಾಗಿದ್ದರು. ಆ ಹಿನ್ನಲೆಯಲ್ಲಿಯೂ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲು ಹೋಗಿದ್ದಾರೆ. ಇದರಲ್ಲಿ ಬೇರೆ ಅರ್ಥ ಕಲ್ಪಿಸುವುದರಲ್ಲಿ ಅರ್ಥವಿಲ್ಲ ಎಂದು ಪರಮೇಶ್ವರ ಹೇಳಿದರು.

ನನಗೆ ಮಾಹಿತಿಯಿಲ್ಲ:

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರು ಬೆಂಗಳೂರು ಭೇಟಿ ವಿಚಾರ ಹಾಗೂ ಅವರ ಅಜೆಂಡಾ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂಬ ವಿಚಾರದ ಬಗ್ಗೆಯೂ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಜಿ.ಟಿ. ದೇವೇಗೌಡ ಅವರು ಎಫ್‌ಐಆರ್ ಆದವರು ರಾಜೀನಾಮೆ ಕೊಡಬೇಕು ಅನ್ನುವುದಾದರೆ ಎಲ್ಲರೂ ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟಕ್ಕೆ ಅವರು ಕಾಂಗ್ರೆಸ್ ಪರವಾಗಿದ್ದು, ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಅರ್ಥೈಸುವುದು ಸರಿಯಲ್ಲ ಎಂದರು.

ನಾನು ರಾಜೀನಾಮೆ ನೀಡಲು ಸಿದ್ಧ, ಮುಖ್ಯಮಂತ್ರಿ ರಾಜೀನಾಮೆ ನೀಡುತ್ತಾರೆಯೇ? ಎಂಬ ಪ್ರತಿಪಕ್ಷ ನಾಯಕ ಅರ್. ಅಶೋಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ, ಮೊದಲು ಆರ್‌. ಅಶೋಕ ರಾಜೀನಾಮೆ ನೀಡಲಿ ನಂತರ ನೋಡೋಣ ಎಂದರು.

ಕೇಂದ್ರ ತವಿಖಾ ಸಂಸ್ಥೆಗಳು ವಿಫಲ:

ಪಾಕಿಸ್ತಾನಿಯರು ಬೆಂಗಳೂರಿಗೆ ಬಂದು ಪಾಸ್‌ಪೋರ್ಟ್ ಮಾಡಿಸಿಕೊಳ್ಳುತ್ತಾರೆ ಎಂದರೆ ಏನರ್ಥ? ಈ ವಿಷಯದಲ್ಲಿ ಕೇಂದ್ರದ ತನಿಖಾ ದಳಗಳು ವಿಫಲವಾಗಿರುವುದು ಸ್ಪಷ್ಟವಾಗುತ್ತದೆ. ಕೇಂದ್ರ ಸರ್ಕಾರದ ಬಳಿ ಅನೇಕ ತನಿಖಾ ವಿಭಾಗಗಳಿವೆ, ಆದರೂ ಪಾಕಿಸ್ತಾನಿಯರು ಬರುತ್ತಾರೆ ಅಂದರೆ ಹೇಗೆ? ನಮಗೆ ಗೊತ್ತಾದ ಮೇಲೆ ಕೆಲ ಪಾಕಿಸ್ತಾನಿಗರನ್ನು ಬಂಧಿಸಿದ್ದೇವೆ. ಕರ್ನಾಟಕ ಪೊಲೀಸರು ಸಮರ್ಥರಿದ್ದು, ಉಳಿದವರನ್ನು ಬೇಗನೆ ಬಂಧಿಸಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ