ಕನ್ನಡಪ್ರಭ ವಾರ್ತೆ ಮಂಗಳೂರು
ಬೆಳಗ್ಗೆ ಜೆಪ್ಪು ವೆಲೆನ್ಸಿಯಾದ ಐವನ್ ಡಿಸೋಜಾ ಮನೆಯಿಂದ ಕೆಪಿಸಿಸಿ ವಕ್ತಾರ ಎಂ.ಜಿ.ಹೆಗಡೆ ನೇತೃತ್ವದಲ್ಲಿ ಕಾಂಗ್ರೆಸಿಗರು ಪಾದಯಾತ್ರೆ ನಡೆಸಿದರು. ಈ ಪಾದಯಾತ್ರೆಯನ್ನು ಪಿವಿಎಸ್ ಬಳಿಯ ಬಿಜೆಪಿ ಕಚೇರಿ ವರೆಗೆ ನಡೆಸಿ ಮುತ್ತಿಗೆ ಹಾಕುವುದಾಗಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಚಪ್ಪಲಿ ಹಾರ ಸಿದ್ಧಪಡಿಸಿಕೊಂಡು ಬಿಜೆಪಿಗರು ಸೇರಿದ್ದರು. ಆದರೆ ಪಾದಯಾತ್ರೆಯನ್ನು ಕಂಕನಾಡಿಯಲ್ಲೇ ಕೊನೆಗೊಳಿಸಲಾಯಿತು. ಕರಾವಳಿಯಲ್ಲಿ ಗಾಂಧಿಯೇ ಗೆಲ್ಲೋದು: ಬಳಿಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಂ.ಜಿ.ಹೆಗಡೆ, ಕೈಲಾಗದ ಹೇಳಿಕೆ ನೀಡಿ ಜಿಲ್ಲೆಯ ಶಾಂತಿ ಕದಡುವ ಬಿಜೆಪಿ ಆಟ ಕರಾವಳಿಯಲ್ಲಿ ನಡೆಯದು. ನಾರಾಯಗುರುಗಳ ಸಂದೇಶ ಒಪ್ಪಿದ ಕರಾವಳಿಯಲ್ಲಿ ಗಾಂಧಿಯೇ ಗೆಲ್ಲುವುದು ಹೊರತು ಗೋಡ್ಸೆಯಲ್ಲ ಎಂದರು.
ವೃತ್ತಿಯಲ್ಲಿ ವೈದ್ಯರಾಗಿರುವ ಶಾಸಕ ಡಾ. ಭರತ್ ಶೆಟ್ಟಿಯವರು ಐವನ್ ಡಿಸೋಜಾರ ತಲೆಗೆ ಕಲ್ಲು ಹೊಡೆಯಬೇಕಿತ್ತು. ರಾಹುಲ್ ಗಾಂಧಿಯವರ ಕಪಾಳಕ್ಕೆ ಹೊಡೆಯಬೇಕು ಎಂಬ ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ತಾವು ಶಾಸಕನಾಗಲು ಅಯೋಗ್ಯ ಎಂಬುದನ್ನು ಸಾಬೀತಪಡಿಸಿದ್ದಾರೆ. ನಿಮ್ಮ ದ್ವೇಷದ ಸಂಸ್ಕೃತಿಗೆ ವಿರುದ್ಧವಾಗಿ ರಾಹುಲ್ ಗಾಂಧಿಯವರ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಗಳನ್ನು ತೆರೆಯುವ ಮಾತಿನಂತೆ ಕರಾವಳಿಯುದ್ದಕ್ಕೂ ಬಿಜೆಪಿಯ ಹಿಂಸಾತ್ಮಕ ಮಾತು, ಕೃತ್ಯಗಳಿಗೆ ಪ್ರೀತಿಯ ಉತ್ತರ ನೀಡಿ ಗೆಲ್ಲುತ್ತೇವೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಐವನ್ ಡಿಸೋಜಾರವರು ಬಡವರು, ರಿಕ್ಷಾದವರಿಗೆ ತೊಂದರೆ ಆದಾಗ ಪ್ರತಿಭಟನೆ ಮಾಡುವ ಮೂಲಕ ತನ್ನ ಶಕ್ತಿಯನ್ನು ಬೆಳೆಸಿಕೊಂಡವರು. ಇಂತಹ ಐವನ್‌ರನ್ನು ಹೆಡೆಮುರಿಕಟ್ಟಬೇಕೆಂಬ ನಿಟ್ಟಿನಲ್ಲಿ ಈ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾಜಿ ಶಾಸಕ ಜೆ.ಆರ್. ಲೋಬೋ, ಮುಖಂಡರಾದ ಪಿ.ವಿ. ಮೋಹನ್, ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ನಾಯಕರು ವೆಲೆನ್ಸಿಯಾದಿಂದ ಕಂಕನಾಡಿ ವೃತ್ತದವರೆಗೆ ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನ ಕೂಗುತ್ತಾ ಪಾದಯಾತ್ರೆ ನಡೆಸಿದರು. ಕಂಕನಾಡಿ ವೃತ್ತದ ಬ್ಯಾರಿಕೇಡ್‌ಗಳೊಂದಿಗೆ ನೂರಾರು ಸಂಖ್ಯೆಯ ಪೊಲೀಸರು ಪ್ರತಿಭಟನಾಕಾರರನ್ನು ತಡೆದಾಗ ಅಲ್ಲೇ ರಸ್ತೆಯ ಫುಟ್‌ಪಾತ್‌ನಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.ಬಾಂಗ್ಲಾ ಮಾದರಿ ಎಂದು ಹೇಳಿಲ್ಲ: ಐವನ್ ಡಿಸೋಜಾ
ಗೂಂಡಾ ಸಂಸ್ಕೃತಿಯ ಮಂಗಳೂರು ಬಿಜೆಪಿ ಶಾಸಕರ ಮೇಲೆ ರೌಡಿಶೀಟ್ ತೆರೆಯಬೇಕು. ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ ಗೂಂಡಾ ಸಂಸ್ಕೃತಿಯ ಶಾಸಕರು. ಅಂಥವರ ವರ್ತನೆಯೇ ಗೂಂಡಾ ಮತ್ತು ಗೋಡ್ಸೆ ಸಂಸ್ಕತಿ. ವೇದವ್ಯಾಸ ಕಾಮತ್‌ಗೆ ಶಾಲಾ ಮಕ್ಕಳ ಶಾಪ ಇದೆ. ಇಲ್ಲಿಯೂ ಗೂಂಡಾಗಿರಿ ಮಾಡುತ್ತಾನೆ, ಅಲ್ಲಿ ವಿಧಾನಸೌಧದಲ್ಲೂ ಅದೇ ಮಾಡುತ್ತಾನೆ. ಅಂಥವರನ್ನು ಮಟ್ಟ ಹಾಕಲು ನಾನು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಐವನ್ ಡಿಸೋಜಾ ಹೇಳಿದರು.