ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಇದ್ದಾರೆ. ಅದೇ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಸಿಎಂ ಸ್ಥಾನಕ್ಕೆ ಯಾರೂ ಟವೆಲ್ ಹಾಕುವ ಪರಿಸ್ಥಿತಿ ನಮ್ಮಲ್ಲಿ ಬಂದಿಲ್ಲ. ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಮುಡಾ ಪ್ರಕರಣದಿಂದ ಖುಲಾಸೆಯಾದ ಬಳಿಕ ಸಿದ್ದರಾಮಯ್ಯ ಮತ್ತಷ್ಟು ಬಲಿಷ್ಠರಾಗುತ್ತಾರೆ. ಐದು ವರ್ಷಗಳ ಅವಧಿಯವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ನನಗೂ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದೆ, ದುರಾಸೆ ಇಲ್ಲ. ಈ ಸಂಬಂಧ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಬೇಕಾಗುತ್ತದೆ. ಕಾಂಗ್ರೆಸ್‌ನ ಎಲ್ಲ ಶಾಸಕರು, ಸಚಿವರು ಸಿದ್ದರಾಮಯ್ಯ ಪರವಾಗಿದ್ದಾರೆ. ಪಕ್ಷವೂ ಅವರ ಪರವಾಗಿದೆ ಎಂದು ಹೇಳಿದರು.
ಬಿಜೆಪಿಯಿಂದ ದಲಿತರ ಅಪಮಾನ: ಖರ್ಗೆ ಕುಟುಂಬಕ್ಕೆ ಭೂಮಿ ನೀಡಿರುವ ವಿಷಯದ ಬಗ್ಗೆ ನಿನ್ನೆ ಎರಡು ಗಂಟೆಗಳ ಕಾಲ ಸುದೀರ್ಘ ಉತ್ತರ ಕೊಟ್ಟಿದ್ದೇನೆ. ಬಿಜೆಪಿ ನಾಯಕರಿಗೆ ಸಿಎ ಸೈಟ್ ಅಂದರೆ ಏನು ಎಂಬುದು ಗೊತ್ತಿಲ್ಲ. ಖರ್ಗೆ ಮಗ ಕಂಪ್ಯೂಟರ್ ಸೈನ್ಸ್ ಎಂಜಿನಿಯರ್. ಆರು ಅರ್ಜಿ ನೋಡಿ ಮೆರಿಟ್ ಆಧಾರದ ಮೇಲೆ ಸೈಟ್ ಹಂಚಿಕೆ ಮಾಡಿದ್ದೇವೆ. 2021ರ ಬಿಜೆಪಿ ಸರ್ಕಾರ ನಿವೇಶನ ಹಂಚಿಕೆ ಮಾಡಿದೆ. ಯಾವ ಸೈಟ್ ಕೊಡಬೇಕು ಎಂಬುದು 1991ರಲ್ಲಿ ನಿರ್ಣಯ ಆಗಿದೆ ಎಂದು ಹೇಳಿದರು.ಛಲವಾದಿ ನಾರಾಯಣಸ್ವಾಮಿ ನನ್ನ ಆತ್ಮೀಯ ಮಿತ್ರ. ಒಬ್ಬ ದಲಿತರನ್ನು ಉಪಯೋಗಿಸಿ ಎಐಸಿಸಿ ಅಧ್ಯಕ್ಷರನ್ನು ಟಾರ್ಗೆಟ್ ಮಾಡಿದ್ದಾರೆ. ದಲಿತ ನಾಯಕ ಖರ್ಗೆಗೆ ಬಿಜೆಪಿ ಅಪಮಾನ ಮಾಡಿಲ್ವಾ? ನಾರಾಯಣಸ್ವಾಮಿ 2006ರಲ್ಲಿ ಭೂಮಿ ತೆಗೆದುಕೊಂಡಿದ್ದಾರೆ. ಯಾವುದೇ ಕೆಲಸ ಮಾಡಿಲ್ಲ. ಕೋರ್ಟ್‌ಗೆ ಹೋಗಿ ಬದಲಾವಣೆ ಮಾಡಿಕೊಂಡು ಬಂದಿದ್ದಾರೆ. ಒಂದು ಶೆಡ್ ನಿರ್ಮಾಣ ಮಾಡಿ ಸಂಪೂರ್ಣ ಸೇಲ್ ಡೀಡ್ ಕೇಳಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಳಗಾವಿ-ಹುಬ್ಬಳ್ಳಿ ಮಧ್ಯೆ ಸ್ಟಾರ್ಟ್ ಅಪ್ ಪಾರ್ಕ್: ಬೆಳಗಾವಿ ಹಾಗೂ ಹುಬ್ಬಳ್ಳಿ ಮಧ್ಯೆ ನೂರು ಎಕರೆ ಪ್ರದೇಶದಲ್ಲಿ ಸ್ಟಾರ್ಟ್ ಅಪ್ ಪಾರ್ಕ್ ಮಾಡುತ್ತೇವೆ. ಬೆಳಗಾವಿ ಗೋವಾ ಹೈವೇ ಮೇಲೆ ಫೌಂಡ್ರಿ ಪಾರ್ಕ್ ಮಾಡುತ್ತೇವೆ. ಕಿತ್ತೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕಿತ್ತು. ಬೆಳಗಾವಿ, ಹುಬ್ಬಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿದ್ದರಿಂದ ಇದು ಸಾಧ್ಯವಾಗಿಲ್ಲ. ಬೆಳಗಾವಿ-ಹುಬ್ಬಳ್ಳಿ ನಡುವೆ ಇಂಡಸ್ಟ್ರಿಯಲ್ ಕಾರಿಡಾರ್ ಮಾಡಲು ಪ್ರಯತ್ನ ಮಾಡುವೆ ಎಂದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾರ್ಖಾನೆಯ ಕೆಲವು ನಿಯಮ ಉಲ್ಲಂಘನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅದನ್ನು ಬಂದ್ ಮಾಡಲಾಗಿದೆ. ಅಧಿಕಾರಿಗಳು ಸಹ ತಪಾಸಣೆ ನಡೆಸಿದ್ದಾರೆ ಎಂದು ತಿಳಿಸಿದರು.
-ಎಂ.ಬಿ. ಪಾಟೀಲ ಕೈಗಾರಿಕೆ ಸಚಿವ