- ದಕ್ಷಿಣ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಲಿದೆ: ಶ್ರೀನಿವಾಸ, ಯಶವಂತರಾವ್, ಅಜಯಕುಮಾರ ವಿಶ್ವಾಸ - - -
ಕಾಂಗ್ರೆಸ್ಸಿನ ದುರಾಡಳಿತದ ಜೊತೆಗೆ ಮೂರು ದಶಕದಿಂದ ಯಾವುದೇ ಅಭಿವೃದ್ಧಿ ಕೈಗೊಂಡಿಲ್ಲ ಎಂಬುದೂ ಸೇರಿದಂತೆ ಅನೇಕ ವಿಷಯಗಳು ದಾವಣಗೆರೆ ದಕ್ಷಿಣದಲ್ಲಿ ನಮ್ಮ ಗೆಲುವಿಗೆ ಸಹಕಾರಿಯಾಗಿದ್ದು, ಇಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಘೋಷಣೆ ನಂತರ ಯಶವಂತ ರಾವ್ ಜಾಧವ್, ಬಿ.ಜಿ. ಅಜಯಕುಮಾರ, ರಾಜನಹಳ್ಳಿ ಶಿವಕುಮಾರ, ದೇವರಮನಿ ಶಿವಕುಮಾರ, ಬಿ.ಎಂ.ಸತೀಶ, ಎಚ್.ಸಿ.ಜಯಮ್ಮ ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಕ್ಷೇತ್ರದಲ್ಲಿ ನನಗೆ ಸಹಕಾರ ನೀಡಿದ್ದು, ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರ ಪರಿಶ್ರಮ, ಮತದಾರರ ಆಶೀರ್ವಾದದಿಂದ ಗೆಲ್ಲುತ್ತೇನೆಂಬ ಸಂಪೂರ್ಣ ನಂಬಿಕೆ ಇದೆ ಎಂದರು.ಪ್ರತಿಯೊಬ್ಬ ಟಿಕೆಟ್ ಆಕಾಂಕ್ಷಿ, ಕಾರ್ಯಕರ್ತರು ತಾವೇ ಅಭ್ಯರ್ಥಿಗಳಂತೆ ಇಡೀ ಕ್ಷೇತ್ರಾದ್ಯಂತ ಕೆಲಸ ಮಾಡಿದ್ದನ್ನು ನಾನೆಂದಿಗೂ ಮರೆಯುವುದಿಲ್ಲ. ಎಲ್ಲರ ಒಗ್ಗಟ್ಟು, ಒಂದಾಗಿ ಕೆಲಸ ಮಾಡಿದ್ದಾರೆ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಗಲಿರುಳು ಶ್ರಮಿಸಿದ್ದು, ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಪ್ರತಿಯೊಬ್ಬರ ಶ್ರಮಕ್ಕೆ ಮೇ 4ರಂದು ಪ್ರತಿಫಲ ಸಿಗಲಿದೆ ಎಂದು ಅವರು ತಿಳಿಸಿದರು.
ಮಾಜಿ ಮೇಯರ್ ಬಿ.ಜಿ. ಅಜಯಕುಮಾರ ಮಾತನಾಡಿ, ದಿವಂಗತ ಶಾಮನೂರು ಶಿವಶಂಕರಪ್ಪನವರ ಬಗ್ಗೆ ನಮಗೆ ಅಪಾರ ಗೌರವವಿದೆ. 3 ದಶಕ ಕಾಲ ಅಧಿಕಾರದಲ್ಲಿದ್ದಾಗ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲವೆಂದು ಜನರೇ ಹೇಳುತ್ತಿದ್ದಾರೆ. ಉಪ ಚುನಾವಣೆಯಲ್ಲಿ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದ್ದು, ನಮ್ಮ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಕನಿಷ್ಠ 15-20 ಸಾವಿರ ಮತಗಳ ಅಂತರದಲ್ಲಿ ಜಯ ದಾಖಲಿಸುವುದು ಶತಃಸಿದ್ಧ ಎಂದರು.
ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಮಾತನಾಡಿ, ಜನರಿಗೆ ನೀತಿ, ನೈತಿಕತೆ ಪಾಠ ಮಾಡುವ ಸಚಿವರು ಮತದಾನದ ದಿನ ದಕ್ಷಿಣ ಕ್ಷೇತ್ರದ ಮತಕೇಂದ್ರಗಳ ವ್ಯಾಪ್ತಿಯಲ್ಲಿ ಸಂಚರಿಸಿ, ಪ್ರಚಾರ ಮಾಡಿದ್ದಾರೆ. ಹಾಗಿದ್ದರೆ ಸಚಿವರ ನೈತಿಕತೆ ಎಲ್ಲಿ ಹೋಯಿತು? ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಲು ಹೋದರೆ ಗಂಟೆಗಟ್ಟಲೇ ಕಾಯಬೇಕಾಯಿತು. ಚುನಾವಣಾಧಿಕಾರಿ ವಿನಾಕಾರಣ ನಮ್ಮನ್ನು ಕಾಯಿಸಿದರು. ನಮ್ಮ ದೂರಿಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದೇವೆ ಎಂದು ಎಚ್ಚರಿಸಿದರು.
ಮಾಜಿ ಮೇಯರ್ ಎಸ್.ಟಿ.ವೀರೇಶ, ಪಾಲಿಕೆ ಮಾಜಿ ಸದಸ್ಯರಾದ ಎಂ.ಹಾಲೇಶ, ಶಿವನಗೌಡ ಟಿ.ಪಾಟೀಲ. ಎಚ್.ಸಿ. ಜಯಮ್ಮ, ಟಿಂಕರ್ ಮಂಜಣ್ಣ, ಗುರುಶಾಂತ ಸೋಗಿ ಇತರರು ಇದ್ದರು.
-10ಕೆಡಿವಿಜಿ1: ದಾವಣಗೆರೆಯಲ್ಲಿ ಶುಕ್ರವಾರ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ, ಯಶವಂತ ರಾವ್ ಜಾಧವ್, ಬಿ.ಜಿ. ಅಜಯಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.