ಸಿಎಂ ರಾಜೀನಾಮೆಗೆ ಆಗ್ರಹಿಸಿ ಜಿಪಂ ಕಚೇರಿಗೆ ಮುತ್ತಿಗೆ ಯತ್ನ

KannadaprabhaNewsNetwork |  
Published : Sep 28, 2024, 01:17 AM IST
20 | Kannada Prabha

ಸಾರಾಂಶ

ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುತ್ತಿರುವುದು ಖಂಡನೀಯ

ಕನ್ನಡಪ್ರಭ ವಾರ್ತೆ ಮೈಸೂರು

ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ನಗರ ಮತ್ತು ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು ಜಿಪಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ನಗರದ ಬಿಜೆಪಿ ಕಚೇರಿ ಬಳಿ ಕೆಲಕಾಲ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು ಜಿಪಂ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು.

ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುತ್ತಿರುವುದು ಖಂಡನೀಯ. ಮುಡಾ ಹಗರಣ ಸಂಬಂಧ ತಮ್ಮ ಸ್ಥಾನಕ್ಕೆ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ, ಧಿಕ್ಕಾರ ಕೂಗಿದರು.

ಈ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, 14 ಸೈಟುಗಳನ್ನು ದಲಿತರ ಹೆಸರಿನಲ್ಲಿ ನುಂಗಿದರಣ್ಣ ನುಂಗಿದರಣ್ಣ, ಸಿದ್ರಾಮಣ್ಣ ನುಂಗಿದರಣ್ಣ, ವಾಲ್ಮೀಕಿ ನಿಗಮದಲ್ಲಿ 180 ಕೋಟಿ ನುಂಗಿದರಣ್ಣ ನುಂಗಿದರಣ್ಣ, ಸಿದ್ರಾಮಣ್ಣ ಸಿದ್ರಾಮಣ್ಣ. ರಾಜೀನಾಮೆ ನೀಡೋದಿಲ್ಲ, ಭ್ರಷ್ಟಾಚಾರ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿ ಹಾಡು ಹಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ, ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲು ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿದ್ದರು. ಆಗಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ, ನ್ಯಾಯಲಯದಲ್ಲಿ ರಾಜ್ಯಪಾಲರ ಆದೇಶ ಪ್ರಶ್ನಿಸಿದರು. ನ್ಯಾಯಾಲಯದಲ್ಲೂ ಸಿದ್ದರಾಮಯ್ಯ ವಿರುದ್ಧ ಆದೇಶ ಬಂದಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಆದೇಶಿಸಿದೆ. ಆದರೂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಇದೇ ಭಂಡತನದಿಂದ ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎನ್ನುತ್ತಿದ್ದರು. ಆದರೆ, ಈಗ ನಿಮ್ಮ ಇಡೀ ದೇಹವೇ ಸಂಪೂರ್ಣವಾಗಿ ಕಪ್ಪು ಚುಕ್ಕಿಯಿಂದ ಕೂಡಿದೆ. ನ್ಯಾಯಾಲಯ, ಕಾನೂನಿನ ಮೇಲೆ ನಿಮಗೆ ಗೌರವ ಇಲ್ಲವೇ ಎಂದು ಅವರು ಪ್ರಶ್ನಿಸಿದರು.

ಎಂಡಿಎ ಪ್ರಕರಣದ ಸಂಬಂಧ ನಿಮ್ಮ ವರ್ತನೆ ಏನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ನಿಮ್ಮ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಯುತ್ತದೆ. ನಿಮ್ಮ ರಾಜೀನಾಮೆ ಪಡೆಯೋ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ವಿರುದ್ಧ ತನಿಖೆಗೆ ಹೈಕೋರ್ಟ್ ಮತ್ತು ಜನ ಪ್ರತಿನಿದಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಆದರೂ ತಮ್ಮ ಸ್ಥಾನಕ್ಕೆೆ ರಾಜೀನಾಮೆ ನೀಡಿಲ್ಲ. ಲೋಕಾಯುಕ್ತ ಇಲಾಖೆ ರಾಜ್ಯ ಸರ್ಕಾರದ ಕೆಳಗೆ ಕೆಲಸ ಮಾಡುತ್ತದೆ. ಹೀಗಾಗಿ ಸಿಎಂ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿಸ್ಪಕ್ಷಪಾತ ತನಿಖೆ ಆಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.

ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ನಿಮ್ಮ ಮೇಲೆ ಆರೋಪ ಬಂದಾಗ ನೀವು ಮೊದಲು ರಾಜೀನಾಮೆ ನೀಡಿ. ನಂತರ ಬಿಜೆಪಿ ನಾಯಕರ ಮೇಲೆ ಆರೋಪ ಮಾಡಿ. ನಾವು ಸಿಎಂ ವಿರುದ್ಧ ಪ್ರತಿಭಟನೆ ಮಾಡೇ ಮಾಡುತ್ತೇವೆ. ನಮ್ಮ ಪ್ರತಿಭಟನೆ ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.

ಬಳಿಕ ಜಿಪಂ ಕಡೆಗೆ ಹೆಜ್ಜೆ ಹಾಕಿದ ಪ್ರತಿಭಟನಾಕಾರರನ್ನು ಪೊಲೀಸರು ಮಾರ್ಗ ಮಧ್ಯದಲ್ಲಿಯೇ ತಡೆದು ವಶಕ್ಕೆ ಪಡೆದರು.

ಬಿಗಿ ಭದ್ರತೆ

ಬಿಜೆಪಿ ನಾಯಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಪಂ ಮತ್ತು ಬಿಜೆಪಿ ಕಚೇರಿ ಸುತ್ತ ಬಿಗಿ ಪೊಲೀಸ್‌ಬಂದೋಬಸ್ತ್‌ಕಲ್ಪಿಸಲಾಗಿತ್ತು. ಹಾಗೆಯೇ ಜಿಪಂ ದ್ವಾರದಲ್ಲಿ ಬ್ಯಾರಿಕೇಡ್ ಅಳವಡಿಸಿ, ಆವರಣಕ್ಕೆ ಪ್ರವೇಶಿಸುವವರನ್ನು ವಿಚಾರಣೆ ಮಾಡಿ ಒಳಗೆ ಬಿಡಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಜಿ ಮೇಯರ್ ಶಿವಕುಮಾರ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅನಿಲ್ ಥಾಮಸ್, ಮುಖಂಡರಾದ ಜೋಗಿ ಮಂಜು, ಮೋಹನ್, ಮಹೇಶ್ ಮೊದಲಾದವರು ಇದ್ದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ